ಉಡುಪಿ ಬಿಟ್ಟು ಬೆಂಗಳೂರಿಗೆ ಬಂದ ಶೋಭಾ ಕರಂದ್ಲಾಜೆ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ?
Shobha Karandlaje Asset: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಈ ಬಾರಿ ಲೋಕಸಭಾ ಚುನಾವಣೆಗೆ ತಮ್ಮ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಬಿಟ್ಟು ಬೆಂಗಳೂರು ಉತ್ತರದಿಂದ ಅಖಾಡಕ್ಕಿಳಿದಿದ್ದಾರೆ. ಅದರಂತೆ ಶೋಭಾ ಕರಂದ್ಲಾಜೆ ಅವರು ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು. ಇನ್ನು ಶೋಭಾ ಕರಂದ್ಲಾಜೆ ಆಸ್ತಿ ಎಷ್ಟಿದೆ? ಕಳೆದ ಬಾರಿ ಎಷ್ಟಿತ್ತು? ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಏಪ್ರಿಲ್ 03): ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಬಿಟ್ಟು ಶೋಭಾ ಕರಂದ್ಲಾಜೆ (Shobha Karandlaje) ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ (Lok Sabha Election 2024) ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಹೈಕಮಾಂಡ್ ಘೋಷಿಸಿದಂತೆ ಶೋಭಾ ಕರಂದ್ಲಾಜೆ ಅವರು ಇಂದು (ಏಪ್ರಿಲ್ 03) ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇನ್ನು ಶೋಭಾ ಕರಂದ್ಲಾಜೆ ಅವರು ತಮ್ಮ ಬಳಿ 16.02 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. ಅಲ್ಲದೇ 1 ಕೆಜಿ ಚಿನ್ನದ ಬಿಸ್ಕೆಟ್ ಇದೆ ಎಂದು ತಿಳಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಗೆ(2019) ಈಗ ಹೋಲಿಸಿದರೆ ಐದು ವರ್ಷದಲ್ಲಿ ಶೋಭಾ ಅವರ ಆಸ್ತಿ ಮೌಲ್ಯದಲ್ಲಿ 6 ಕೋಟಿ ರೂ. ಹೆಚ್ಚಳವಾಗಿದೆ.
ಒಟ್ಟು 16.02 ಕೋಟಿ ರೂಪಾಯಿ ಮೌಲ್ಯದ ಆಸ್ತಿ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಘೋಷಿಸಿಕೊಂಡಿರುವ ಆಸ್ತಿಯಲ್ಲಿ ಚರಾಸ್ತಿ 9,23,66,909 ರೂಪಾಯಿ ಮೌಲ್ಯ ಹಾಗೂ 6,78,97,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ. ಒಟ್ಟು 16.02 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ತಮ್ಮ ನಾಪಮತ್ರದ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
4 ಕೋಟಿ ರೂ. ಸಾಲ ತೋರಿಸಿದ ಶೋಭಾ
ಒಟ್ಟು 16.02 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ಶೋಭಾ ಕರಂದ್ಲಾಜೆ 4 ಕೋಟಿ ರೂ. ಸಾಲ ಇರುವುದಾಗಿ ತೋರಿಸಿದ್ದಾರೆ. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಮಾಡಿದ ಸಾಲ ಮಾಡಿರುವ ಶೋಭಾ ಕರಂದ್ಲಾಜೆ ಅವರು ಒಟ್ಟು 4.06 ಕೋಟಿ ರೂಪಾಯಿ ಲೋನ್ ಪಡೆದಿದ್ದಾರೆ. ಇನ್ನು ಇವರ ಬಳಿ 1,71,000 ರೂಪಾಯಿ ನಗದು ಹಣವಿದೆ. ಇವರ ವಾರ್ಷಿಕ ಆದಾಯವು 2022-23ರ ಸಾಲಿನಲ್ಲಿ 24.90 ಲಕ್ಷ ರೂಪಾಯಿ ಆಗಿದೆ ಎಂದು ಹೇಳಿಕೊಂಡಿದ್ದಾರೆ.
1 ಕೆಜಿ ಚಿನ್ನದ ಬಿಸ್ಕೆಟ್
ಇನ್ನು ಶೋಭಾ ಕರಂದ್ಲಾಜೆ ಅವರ ಬಳಿ ಹಣದ ಜೊತೆ ಚಿನ್ನಾಭರಣಗಳು ಇವೆ. ಬರೋಬ್ಬರಿ 1 ಕೆಜಿ ಚಿನ್ನದ ಬಿಸ್ಕಟ್ ಇದ್ದು, ಇದು ಸರಿಸುಮಾರು 68.40 ಲಕ್ಷ ರೂಪಾಯಿ ಮೌಲ್ಯವುಳ್ಳದ್ದಾಗಾಗಿದೆ. 650 ಗ್ರಾಂ ಚಿನ್ನದ ಆಭರಣಗಳಿವೆ. 1620 ಗ್ರಾಂ ಬೆಳ್ಳಿ ಆಭರಣ ಹಾಗೂ ಬೆಳ್ಳಿ ವಸ್ತುಗಳು ಇವೆ.
ಶೋಭಾ ಮೇಲಿವೆ ನಾಲ್ಕು ಕೇಸ್
ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿರುವ ಶೋಭಾ ಕರಂದ್ಲಾಜೆ ವಿರುದ್ಧ ಒಟ್ಟು ನಾಲ್ಕು ಮೊಕದ್ದಮೆಗಳು ಇದ್ದು. ಇವುಗಳಲ್ಲಿ ಎರಡು ಕ್ರಿಮಿನಲ್ ಕೇಸ್ ಆಗಿದ್ದರೆ, 1 ಮಾನನಷ್ಟ ಮೊಕದ್ದಮೆಯಾಗಿದೆ.
2019ರಲ್ಲಿ ಶೋಭಾ ಆಸ್ತಿ ಎಷ್ಟಿತ್ತು?
ಇನ್ನು ಶೋಭಾ ಕರಂದ್ಲಾಜೆ ಅವರ ಆಸ್ತಿ 2019ರ ಲೋಕಸಭಾ ಚುನಾವಣೆ ಎಷ್ಟಿತ್ತು ಎನ್ನುವುದನ್ನು ನೋಡುವುದಾದರೆ, ಅವರು ಕಳೆದ ಲೋಕಸಭೆ ಚುನಾವಣೆ ವೇಳೆ ಒಟ್ಟು ಆಸ್ತಿ 10.48 ಕೋಟಿ ರೂ. ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದರು. ಇದರಲ್ಲಿ ಚರಾಸ್ತಿ 7.38 ಕೋಟಿ ರೂ., ಸ್ಥಿರಾಸ್ತಿ 3.10 ಕೋಟಿ ರೂ. ಒಳಗೊಂಡಿದೆ ಎಂದು ಕಳೆದ ಲೋಕಸಭಾ ಚುನಾವಣೆಯ ಅಫಿಡೆವಿಟ್ನಲ್ಲಿ ಹೇಳಿಕೊಂಡಿದ್ದರು. ಇದೀಗ ಶೋಭಾ ಅವರ ಒಟ್ಟು ಆಸ್ತಿ ಮೌಲ್ಯ 16.02 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದರೊಂದಿಗೆ ಐದು ವರ್ಷಗಳಲ್ಲಿ 6 ಕೋಟಿ ರೂ. ಏರಿಕೆಯಾದಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ