ಕರ್ನಾಟಕದಲ್ಲಿ ಬಿಜೆಪಿಗೆ ಕಡಿಮೆ ಸ್ಥಾನ ಬಂದ್ರೆ ರಾಜ್ಯಾಧ್ಯಕ್ಷ ಬದಲಾವಣೆ: ಅಂತೆ-ಕಂತೆಗಳಿಗೆ ಉಸ್ತುವಾರಿ ಸ್ಪಷ್ಟನೆ
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ. ಈ ಬಾರಿ ರಾಜ್ಯದಲ್ಲಿ 28ಕ್ಕೂ 28 ಕ್ಷೇತ್ರಗಳಲ್ಲಿ ಗೆಲ್ಲಲುವ ಗುರಿಯನ್ನು ಬಿಜೆಪಿ ಹೊಂದಿದೆ. ಇದರ ಮಧ್ಯ ರಾಜ್ಯದಲ್ಲಿ ಬಿಜೆಪಿ ಕಡಿಮೆ ಸ್ಥಾನ ಗೆದ್ದರೆ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಬದಲಾವಣೆ ಮಾಡಲಾಗುತ್ತೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅಲ್ಲದೇ ಖುದ್ದು ಈ ಬಗ್ಗೆ ಅದೇ ಪಕ್ಷದ ಶಾಸಕ ಬಹಿರಂಗವಾಗಿ ಹೇಳಿಕೆ ನೀಡಿದ್ದು, ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ಇನ್ನು ಇದೀಗ ಇದಕ್ಕೆ ಸ್ವತಃ ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ಸ್ಪಷ್ಟನೆ ನೀಡಿದ್ದು, ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಬೆಂಗಳೂರು, (ಏಪ್ರಿಲ್ 03): ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿ ಬಿವೈ ವಿಜಯೇಂದ್ರ(BY Vijayendra) ಅವರಿಗೆ ಲೋಕಸಭಾ ಚುನಾವಣೆ (Loksabha Poll 2024)ಎನ್ನುವ ಅಗ್ನಿ ಪರೀಕ್ಷೆ ಎದುರಾಗಿದೆ. ವಿಜಯೇಂದ್ರ ಸಹ ಮೊದಲ ಪರೀಕ್ಷೆಯಲ್ಲೇ ಗೆದ್ದು ಹೈಕಮಾಂಡ್ಗೆ ಕೊಡುಗೆಯಾಗಿ ನೀಡುವ ಯೋಚನೆಯಲ್ಲಿದ್ದಾರೆ. ಇದರ ಮಧ್ಯೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಕಡಿಮೆ ಸ್ಥಾನ ಗೆದ್ದರೆ ರಾಜ್ಯಾಧ್ಯಕ್ಷ ಬದಲಾವಣೆಯಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇನ್ನು ಈ ಬಗ್ಗೆ ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ರಾಧಾಮೋಹನ ದಾಸ್ ಅಗರ್ವಾಲ್ (radha mohan das agarwal) ಪ್ರತಿಕ್ರಿಯಿಸಿದ್ದು, ಕಡಿಮೆ ಸ್ಥಾನ ಬಂದರೆ ರಾಜ್ಯಾಧ್ಯಕ್ಷರ ಬದಲಾವಣೆ ಎಂಬುದು ಊಹಾಪೋಹ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ವಿಜಯೇಂದ್ರ ಬದಲಾವಣೆ ಅಂತೆ-ಕಂತೆಗಳಿಗೆ ತೆರೆ ಎಳೆದಿದ್ದಾರೆ.
ಟಿವಿ9 ಜೊತೆ ಮಾತನಾಡಿರುವ ಕರ್ನಾಟಕ ಬಿಜೆಪಿ ಚುನಾವಣೆ ಉಸ್ತುವಾರಿ ರಾಧಾಮೋಹನ ದಾಸ್ ಅಗರ್ವಾಲ್ ಅವರು, ಕಡಿಮೆ ಸ್ಥಾನ ಬಂದರೆ ರಾಜ್ಯಾಧ್ಯಕ್ಷರ ಬದಲಾವಣೆ ಎಂಬುದು ಊಹಾಪೋಹ. 28ಕ್ಕಿಂತ ಕಡಿಮೆ ಸೀಟು ನಾವು ಗೆಲ್ಲುವುದೇ ಇಲ್ಲ. ಒಂದು ಸೀಟು ಕೂಡಾ ಕಾಂಗ್ರೆಸ್ ಗೆಲ್ಲುವುದಿಲ್ಲ. ಈ ಬಾ ಐತಿಹಾಸಿಕ ಫಲಿತಾಂಶ ರಿ ಬರುತ್ತದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಕಾಂಗ್ರೆಸ್ ಕಳೆದುಕೊಳ್ಳುತ್ತದೆ. ಡಾ. ಮಂಜುನಾಥ್ ಜನಸೇವೆಯಲ್ಲಿ ಇಲ್ಲಿಯವರೆಗಿನ ಜೀವನ ಕಳೆದಿದ್ದಾರೆ. ಅತೀ ಹೆಚ್ಚು ಮತಗಳಿಂದ ಡಾ. ಮಂಜುನಾಥ್ ಗೆಲ್ಲುತ್ತಾರೆ. ಬೆಂಗಳೂರು ಗ್ರಾಮಾಂತರ ನಾವು ಗೆದ್ದ ಮೇಲೆ ಕಾಂಗ್ರೆಸ್ಗೆ ಏನೂ ಉಳಿಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ ಬಳಿಕ ದೊಡ್ಡ ಬದಲಾವಣೆ: ಅಪ್ಪ ಮಕ್ಕಳ ವಿರುದ್ಧ ಯತ್ನಾಳ್ ಮತ್ತೆ ವಾಗ್ದಾಳಿ
ಎಲೆಕ್ಷನ್ ಬಳಿಕ ರಾಜ್ಯಾಧ್ಯಕ್ಷ ಬದಲಾವಣೆ ಎಂದಿದ್ದ ಯತ್ನಾಳ್
ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ (ವಿಜಯೇಂದ್ರ) ಬದಲಾವಣೆಯಾಗುತ್ತೆ ಎಂದು ಸ್ವತಃ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು. ಅಲ್ಲದೇ ಲೋಕಸಭೆ ಚುನಾವಣೆ ಬಳಿಕ ಬಹಳ ದೊಡ್ಡ ಬದಲಾವಣೆಯಾಗುತ್ತದೆ. ಬದಲಾವಣೆಯಾಗಬೇಕೆಂಬ ಕೂಗು ಕರ್ನಾಟಕ ಬಿಜೆಪಿಯಲ್ಲಿ ಏಳುತ್ತೆ. ನಾಯಕರು, ಕಾರ್ಯಕರ್ತರ ಜತೆ ನಡೆದುಕೊಂಡ ರೀತಿ ಸರಿಯಲ್ಲ ಎಂದು ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದರು.
ರಾಜ್ಯಾಧ್ಯಕ್ಷರ ಬದಲಾವಣೆ ಈಶ್ವರಪ್ಪ ಪಟ್ಟು
ಇನ್ನು ಪುತ್ರನಿಗೆ ಹಾವೇರಿ ಲೋಕಸಭಾ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಬಿಜೆಪಿ ಹಿರಿಯ ನಾಯಕ ಅಸಮಾಧಾನಗೊಂಡಿದ್ದಾರೆ. ಅದರಲ್ಲೂ ಬಿವೈ ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧವೇ ಕೋಪಗೊಂಡಿದ್ದು, ಅಪ್ಪ-ಮಕ್ಕಳೇ ಟಿಕೆಟ್ ತಪ್ಪಿಸಿದ್ದಾರೆ ಎಂದು ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ. ಅಲ್ಲದೇ ಈಶ್ವರಪ್ಪ ಇದೀಗ ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧವೇ ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ. ಆದ್ರೆ, ಬಿಜೆಪಿ ನಾಯಕರು ಈಶ್ವರಪ್ಪ ಮನವೊಲಿಕೆಗೆ ಕಸರತ್ತು ನಡೆಸಿದ್ದಾರೆ. ಇನ್ನು ಶಿವಮೊಗ್ಗ ಕಣದಿಂದ ಹಿಂದೆ ಸರಿಯಬೇಕಾದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಬದಲಾಯಿಸಿ ಎಂದು ಬೇಡಿಕೆ ಇಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.