ಬೆಂಗಳೂರು, ಜನವರಿ 01: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪ್ರತ್ಯಾರೋಪಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವಿಚಾರವಾಗಿ ಬಿಜೆಪಿ (BJP) ನಾಯಕರು ಸರ್ಕಾರದ ಮೇಲೆ ಉರಿದುರಿದು ಬೀಳುತ್ತಿದ್ದಾರೆ. ಈ ಮಧ್ಯೆ ಬಿಜೆಪಿಗೆ ಅಸ್ತಿತ್ವ ಉಳಿಸಿಕೊಳ್ಳಲು ಈಗ ನನ್ನ ಹೆಸರು ಅನಿವಾರ್ಯವಾಗಿದೆ, ಹಾಗಾಗಿ ನನ್ನ ವಿರುದ್ಧದ ಪಿತೂರಿಯ “ಟೂಲ್ ಕಿಟ್“ ರೂಪಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಿಂದೆ ಬಿಜೆಪಿ vs ಕೆಜೆಪಿ ಬಡಿದಾಟವಿತ್ತು. ಈಗ ಬಿಜೆಪಿಯಲ್ಲಿ VJP vs YJP vs AJP ಬಡಿದಾಟ ನಡೆಯುತ್ತಿದೆ, ಈ ಬಡಿದಾಟವನ್ನು ಮರೆಮಾಚಲು ಹೋರಾಟ ಎಂಬ ನಾಟಕ ಶುರು ಮಾಡಿಕೊಂಡಿದೆ. ನನ್ನ ಮನೆಗೆ ಮುತ್ತಿಗೆ ಹಾಕಲು ಬಿಜೆಪಿಗರನ್ನು ದಾರಾಳವಾಗಿ ಸ್ವಾಗತಿಸುತ್ತೇನೆ, ಕಾಫಿ, ಟಿ, ಬಿಸ್ಕೆಟ್ ಗಳ ಆತಿಥ್ಯವನ್ನೂ ನೀಡುತ್ತೇನೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ, ರಾಜೀನಾಮೆ ಯಾಕೆ ಕೊಡಬೇಕು: ಸಿಎಂ ಪ್ರಶ್ನೆ
ರಾಜ್ಯ ಬಿಜೆಪಿ ನಾಯಕರು ಹೈಕಮಾಂಡಿಗೆ ತಮ್ಮ ಸಾಧನೆಯ ರಿಪೋರ್ಟ್ ಕಾರ್ಡ್ ತೋರಿಸಲು ನನ್ನ ಹೆಸರಿನಲ್ಲಿ ಹೋರಾಟದ ನಾಟಕ ಆರಂಭಿಸಿದ್ದಾರೆ, ನನ್ನ ಹೆಸರಿನ ಮೂಲಕ ವಿಜಯೇಂದ್ರರವರು “ಸಂಕ್ರಾಂತಿಯ ಡೆಡ್ ಲೈನ್” ದಾಟುವ ಪ್ರಯತ್ನ ನಡೆಸಿದ್ದಾರೆ. ಡಿಯರ್ ಬಿಜೆಪಿ, ಸುಳ್ಳುಗಳ ಆಧಾರದಲ್ಲಿ ನನ್ನ ವಿರುದ್ಧ ಇಷ್ಟೆಲ್ಲಾ ಸುವ್ಯವಸ್ಥಿತವಾದ, ವಿವಿಧ ಮಾದರಿಯ ಹಾಗೂ ವ್ಯಾಪಕವಾದ ಹೋರಾಟ ಮಾಡುವ ಬದಲು ರಾಜ್ಯದ ಜನರೆದುರು ನಿಮ್ಮ “ನೈತಿಕತೆ“ಯನ್ನು ನಿರೂಪಿಸುವ ಹೋರಾಟ ಮಾಡಿ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪೋಸ್ಟರ್ ಅಂಟಿಸಿದ 13 ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್
ಬಿಜೆಪಿ ಈ ಎಲ್ಲಾ ಕೆಲಸಗಳನ್ನು ಮಾಡಿ, ರಾಜ್ಯದ ಜನಕ್ಕೆ ನೀವು ಎಸಗಿದ ದ್ರೋಹಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ, ನಿಮಗೂ “ನೈತಿಕತೆ” ಪದದ ಅರ್ಥ ತಿಳಿದಿದೆ ಎಂಬುದನ್ನು ನಿರೂಪಿಸಿ. ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದೇ ಸತ್ಯವಾಗುತ್ತದೆ ಎಂಬ ಗೊಬೆಲ್ಸ್ ಸಿದ್ದಾಂತವನ್ನು ಮೆಚ್ಚಿ ನೆಚ್ಚಿಕೊಂಡಿರುವ ಬಿಜೆಪಿಗರು ಮುಂದಿನ ದಿನಗಳಲ್ಲಿ ಗೊಬೆಲ್ಸ್ ಕೂಡ ನಾಚುವಂತ ಸುಳ್ಳುಗಾರರಾಗಿ ಹೊರಹೊಮ್ಮಲಿದ್ದಾರೆ. ಅಂದಹಾಗೆ, ನನ್ನ ವಿರುದ್ಧ ಬಿಜೆಪಿ ರೂಪಿಸಿರುವ ಸುಳ್ಳುಗಳ ಈ ಟೂಲ್ ಕಿಟ್ ತುಂಬಾ ಸೊಗಸಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:49 pm, Wed, 1 January 25