ಬೆಂಗಳೂರು, ಮಾರ್ಚ್ 27: ಪ್ರಧಾನಿ ಮೋದಿಯವರ ಬಗ್ಗೆ ಕಾಂಗ್ರೆಸ್ ನಾಯಕರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷದ ನಾಯಕರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್ (Karnataka Congress) ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ (R Ashok) ವಾಗ್ದಾಳಿ ಮಾಡಿದರು. ಮಾಧ್ಯಮ ಕೇಂದ್ರ ಹೋಟೆಲ್ ಜಿ.ಎಂ. ರಿಜಾಯ್ಸ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ನ ಎಲ್ಲ ನಾಯಕರಿಗೆ ಕೋರ್ಟ್ ತಪರಾಕಿ ಹಾಕಿದೆ. ರಾಹುಲ್ ಗಾಂಧಿ (Rahul Gandhi) ಸೇರಿ ಹಲವರಿಗೆ ಕೋರ್ಟ್ ಬಿಸಿ ಮುಟ್ಟಿಸಿದೆ. ಶಿವರಾಜ್ ತಂಗಡಗಿ ಕೂಡ ನಾಲಗೆ ಹರಿಬಿಟ್ಟಿದ್ದಾರೆ. ಸೋಲಿನ ಭಯದಿಂದ ಈ ರೀತಿ ಮಾತಾಡುತ್ತಿದ್ದಾರೆ. ಸಂಸ್ಕೃತಿ ಇಲ್ಲದ ಸಚಿವರು ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಬೆಂಗಳೂರಿನಲ್ಲಿ ನೀರಿನ ಕೊರತೆ ಇದ್ದು, ಜನರು ಪರದಾಡುತ್ತಿದ್ದಾರೆ. ಇಷ್ಟು ದಿನ ಕೆರೆಗಳನ್ನ ತುಂಬಿಸಿಲ್ಲ, ಮಣ್ಣು ತಿಂತಿದ್ರಾ? ನೀರು ಕೋಡಲು ಆಗದವರು ನೀರಾವರಿ ಸಚಿವರು. ಬ್ರ್ಯಾಂಡ್ ಬೆಂಗಳೂರು ಬೈಬೈ ಬೆಂಗಳೂರು ಆಗಿದೆ. ಕಲುಷಿತ ನೀರು ಕುಡಿದು ಅನಾರೋಗ್ಯಕ್ಕಿಡಾಗಿದ್ದಾರೆ. ರಾಜ್ಯ ಸರ್ಕಾರ ಏನು ಮಾಡುತ್ತಿದ್ದೆ ಎಂದು ಪ್ರಶ್ನಿಸಿದರು.
ಚಾಯ್ ವಾಲಾ, ಚೌಕಿದಾರ್ ಚೋರ್, ಮೋದಿಗೆ ಪರಿವಾರ ಇಲ್ಲ ಅಂದರು. ನಾವು ಕೂಡ ಅದನ್ನು ಅಸ್ತ್ರ ಮಾಡಿಕೊಂಡಿದ್ದೇವೆ. ಶಿವರಾಜ್ ತಂಗಡಗಿ ಈ ಹಿಂದೆ ಬಿಜೆಪಿಯಲ್ಲಿದ್ದಾಗ ಸೋನಿಯಾ ಗಾಂಧಿ ಅವರಿಗೆ ಬೈಯ್ಯುತ್ತಿದ್ದರು. ಈಗ ಮೋದಿ ಅವರಿಗೆ ಅನ್ನುತ್ತಿದ್ದಾರೆ. ಕರ್ನಾಟಕ ಜನತೆಗೆ ಸಂಸ್ಕೃತ ಹೇಳಬೇಕಾದವರೂ, ಈ ರೀತಿ ಮಾತನಾಡುತ್ತಿದ್ದಾರೆ. ಇಡೀ ಸರ್ಕಾರವೇ ಸಂಸ್ಕಾರ ಇಲ್ಲದ, ಹೊಲಸು ಪದ ಉಪಯೋಗ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಇದು ನಾಲಾಯಕ್ ಸರ್ಕಾರ, ಸಿದ್ದರಾಮಯ್ಯರ ಇಳಿಸುವ ಗ್ಯಾಂಗ್ ಕಾಂಗ್ರೆಸ್ನಲ್ಲೇ ಇದೆ: ಅಶೋಕ್ ವಾಗ್ದಾಳಿ
ಕಾನೂನು ಬಾಹಿರವಾಗಿ ಅಂಜಲಿ ನಿಂಬಾಳ್ಕರ್ ಉತ್ತರ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಅಂಜಲಿ ನಿಂಬಾಳ್ಕರ್ ಪತಿ ಹೇಮಂತ್ ನಿಂಬಾಳ್ಕರ್ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿದ್ದಾರೆ. ಇದರಿಂದ ಪಾರದರ್ಶಕವಾಗಿ ಚುನಾವಣೆ ನಡೆಸಲು ಆಗಲ್ಲ. ಪತ್ನಿ ಅಭ್ಯರ್ಥಿ, ಪತಿ ಆಯುಕ್ತರು ಆಗಿರುವುದು ಪಕ್ಷಪಾತದ ಧೋರಣೆ ಆಗಲಿದೆ. ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ತಿಳಿಸಿದರು.
ರಮೇಶ್ ಕುಮಾರ್-ಮುನಿಯಪ್ಪ ಬಣಗಳು ಗುದ್ದಾಡಿಕೊಳ್ಳುತ್ತಿವೆ
ಕೋಲಾರ ಕಾಂಗ್ರೆಸ್ನಲ್ಲಿ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಗೊಂಡ ಬಗ್ಗೆ ಮಾತನಾಡಿದ ಅವರು, ರಮೇಶ್ ಕುಮಾರ್-ಮುನಿಯಪ್ಪ ಬಣಗಳು ಗುದ್ದಾಡಿಕೊಳ್ಳುತ್ತಿವೆ. ನಮ್ಮದು ಕೇಡರ್ ಬೇಸ್ ಪಕ್ಷ. ನಾವು ಕೋಲಾರದಲ್ಲಿ ಗೆಲ್ಲುತ್ತೇವೆ ಎಂದರು.
ತೇಜಸ್ವಿನಿ ಗೌಡ ನಮ್ಮ ಪಕ್ಷಕ್ಕೆ ಬಂದು ಎಮ್‌ಎಲ್‌ಸಿ ಆಗಿದ್ದರು. ತೇಜಸ್ವಿನಿ ಗೌಡ ಅವರ ಅವಧಿ ಇನ್ನೊಂದು ತಿಂಗಳಲ್ಲಿ ಮುಕ್ತಾಯಗೊಳ್ಳುತ್ತಿತ್ತು. ಎಲ್ಲಾ ಸ್ಥಾನಮಾನ ಕೊಟ್ಟರೆ ಭಾರತೀಯ ಜನತಾ ಪಕ್ಷ ಒಳ್ಳೆಯದು. ಸ್ಥಾನಮಾನ ಕೊಡದಿದ್ದರೆ ಕೆಟ್ಟದ್ದು ಅನ್ನೋ ಮನಸ್ಥಿತಿ ಸರಿಯಲ್ಲ. ಇದಕ್ಕೆಲ್ಲ ಬಿಜೆಪಿ ಸೊಪ್ಪು ಹಾಕುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಅಶೋಕ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ