ಬಿಜೆಪಿಗೆ ವಾಪಸ್ ಆಗುವಂತೆ ಜಗದೀಶ್ ಶೆಟ್ಟರ್​ಗೆ ಬಂಪರ್ ಆಫರ್: ಏನದು ಆಫರ್? ಇದಕ್ಕೆ ಮಾಜಿ ಸಿಎಂ ಓಕೆ ಅಂತಾರಾ?

| Updated By: ರಮೇಶ್ ಬಿ. ಜವಳಗೇರಾ

Updated on: Jan 24, 2024 | 3:49 PM

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ವಿಧಾನಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಅವರನ್ನು ವಾಪಸ್ ಬಿಜೆಪಿ ಕರೆತರುವ ಪ್ರಯತ್ನಗಳು ನಡೆದಿವೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಜಗದೀಶ್ ಶೆಟ್ಟರ್ ಅವರನ್ನು ವಾಪಸ್​ ಬಿಜೆಪಿ ಕರೆದುಕೊಳ್ಳಲು​ ಬಂಪರ್ ಆಫರ್ ನೀಡಲಾಗಿದೆ ಎನ್ನಲಾಗಿದೆ. ಹಾಗಾದ್ರೆ, ಏನದು ಆಫರ್? ಇದಕ್ಕೆ ಶೆಟ್ಟರ್ ಒಪ್ಪಿಕೊಳ್ಳುತ್ತಾರಾ? ಕಾಂಗ್ರೆಸ್-ಬಿಜೆಪಿ ನಾಯಕರು ಏನಂತಾರೆ? ಎಲ್ಲಾ ವಿವರ ಈ ಕೆಳಗಿನಂತಿದೆ ನೋಡಿ.

ಬಿಜೆಪಿಗೆ ವಾಪಸ್ ಆಗುವಂತೆ ಜಗದೀಶ್ ಶೆಟ್ಟರ್​ಗೆ ಬಂಪರ್ ಆಫರ್: ಏನದು ಆಫರ್? ಇದಕ್ಕೆ ಮಾಜಿ ಸಿಎಂ ಓಕೆ ಅಂತಾರಾ?
ಜಗದೀಶ್ ಶೆಟ್ಟರ್
Follow us on

ಬೆಂಗಳೂರು, (ಜನವರಿ 24): ವಿಧಾನಸಭೆ ಚುನಾವಣೆ (Karnataka Assembly Elections 2023) ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ (C0ngress) ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್​ (Jagadish Shettar) ಅವರನ್ನು ವಾಪಸ್​ ಕರೆದುಕೊಳ್ಳುವ ಕಾರ್ಯಗಳು ನಡೆದಿವೆ. ಶೆಟ್ಟರ್ ಜತೆ ಮಾತುಕತೆ ನಡೆಸಬಹುದು ಎಂಬ ಹಸಿರು ನಿಶಾನೆಯನ್ನು ಪಕ್ಷದ ವರಿಷ್ಠರು ರಾಜ್ಯ ನಾಯಕರಿಗೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕೆಲ ನಾಯಕರು ಶೆಟ್ಟರ್​ ಮನವೊಲಿಕೆ ಮುಂದಾಗಿದ್ದಾರೆ. ಅಲ್ಲದೇ ಅವರಿಗೆ ಈ ಬಾರಿಯ ಲೋಕಸಭಾ ಟಿಕೆಟ್​ ಆಫರ್ ನೀಡಿದ್ದಾರೆ ಎನ್ನಲಾಗಿದೆ.

ಶೆಟ್ಟರ್‌ ಮನವೊಲಿಕೆ ಏಕೆ?

ಕಳೆದ ವಿಧಾನಸಭಾ ಚುನಾವಣೆ ವೇಳೆ ಕೊನೆಯ ಕ್ಷಣದಲ್ಲಿ ಟಿಕೆಟ್ ತಪ್ಪಿಸಿದ್ದರಿಂದ ಕೋಪಗೊಂಡ ಶೆಟ್ಟರ್ ಅವರು ತಮಗೆ ಅನ್ಯಾಯವಾಗಿದೆ ಎಂದು ಆಕ್ರೋಶಗೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡರೂ ಸಹ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಶೆಟ್ಟರ್ ವರ್ಚಸ್ಸು ಸಹ ಒಂದು ರೀತಿಯಲ್ಲಿ ಕಾರಣವಾಗಿದೆ. ಇದು ಹೈಕಮಾಂಡ್​ ಗಮನಕ್ಕೆ ಬಂದಿದ್ದರಿಂದ ಇದೀಗ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರನ್ನು ಮನವೊಲಿಸಿ ವಾಪಸ್ ಪಕ್ಷಕ್ಕೆ ಕರೆತರುವ ಬಗ್ಗೆ ರಾಜ್ಯ ನಾಯಕರ ಜತೆ ಚರ್ಚಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಹೀಗಾಗಿ, ಜಗದೀಶ್ ಶೆಟ್ಟರ್ ಅವರನ್ನು ವಾಪಸ್ ಕರೆತಂದರೆ ಅದು ಅನುಕೂಲವಾಗಬಹುದು ಎಂಬ ಲೆಕ್ಕಾಚಾರವನ್ನು ಪಕ್ಷದ ಸಂಸದೀಯ ಮಂಡಳಿ ಸದಸ್ಯರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹಾಕಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಧಾರವಾಡ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿ ಅವರು ತಮ್ಮ ಚುನಾವಣೆಯ ಹಿನ್ನೆಲೆಯಲ್ಲಿ ಶೆಟ್ಟರ್ ವಾಪಸ್ ಬರಲಿ ಎಂಬ ನಿರೀಕ್ಷೆ ಹೊಂದಿದ್ದಾರೆ ಎನ್ನಲಾಗಿದೆ.

ಲೋಕಸಭಾ ಟಿಕೆಟ್ ಆಫರ್

ಹೌದು…ವಿಧಾಸಭಾ ಟಿಕೆಟ್​ ನಿರಾಕರಿಸಿದ್ದರಿಂದ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ್ದ ಜಗದೀಶ್​ ಶೆಟ್ಟರ್​ ಅವರನ್ನು ವಾಪಸ್ ಕರೆತರಲು ಲೋಕಸಭಾ ಟಿಕೆಟ್​ ಆಫರ್ ನೀಡಿದ್ದಾರೆ ಎಂದು ತಿಳದಿಬಂದಿದೆ. ಬೆಳಗಾವಿ ಅಥವಾ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆ ಮಾತುಕತೆಗಳು ನಡೆದಿವೆ ಎನ್ನಲಾಗುತ್ತಿದೆ. ಬೆಳಗಾವಿಯಲ್ಲಿ ಶೆಟ್ಟರ್ ತಮ್ಮದೇಯಾದ ವರ್ಚಸ್ಸು ಇಟ್ಟುಕೊಂಡಿದ್ದಾರೆ. ಈಗಾಗಲೇ ತಮ್ಮ ಬೀಗರಾದ ಸುರೇಶ್ ಅಂಗಡಿ ನಿಧನದ ಬಳಿಕ ಎದುರಾದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಮಂಗಳಾ ಅಂಗಡಿ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದರು. ಆದ್ರೆ, ಈ ಬಾರಿ ಬಿಜೆಪಿಗೆ ಕೊಂಚ ಕಷ್ಟಕರವಾಗಿದೆ. ಮಂಗಳ ಅಂಗಡಿಯವರು ಹೇಳಿಕೊಳ್ಳುವಷ್ಟು ಆ್ಯಕ್ಟೀವ್ ಇಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. ಹೀಗಾಗಿ ಬೆಳಗಾವಿಗೆ ಹೊಸ ಅಭ್ಯರ್ಥಿಯ ಹುಡುಕಾಟ ನಡೆಸಿದ್ದು, ಈ ಸಂದರ್ಭದಲ್ಲಿ ಶೆಟ್ಟರ್​ ಹೆಸರು ಕೇಳಿಬಂದಿದೆಯಂತೆ.

ಒಂದು ವೇಳೆ ಶೆಟ್ಟರ್​ಗೆ ಟಿಕೆಟ್​ ನೀಡಿದರೆ ಬಿಜೆಪಿ ಗೆಲುವು ಸುಲಭವಾಗಲಿದೆ. ಯಾಕಂದ್ರೆ ಬೆಳಗಾವಿಯಲ್ಲಿ ಲಿಂಗಾಯತ ಮತಗಳು ಸಹ ಅಧಿಕವಾಗಿದ್ದರಿಂದ ಶೆಟ್ಟರ್​ಗೆ ಟಿಕೆಟ್​ ನೀಡಿದರೆ ಗೆಲುವು ಸುಲಭ ಎನ್ನುವ ಲೆಕ್ಕಾಚಾರಗಳು ಪಕ್ಷದಲ್ಲಿ ನಡೆದಿವೆಯಂತೆ. ಒಂದು ವೇಳೆ ಶೆಟ್ಟರ್ ಬಿಜೆಪಿ ಸೇರ್ಪಡೆಗೆ ಒಪ್ಪಿ ಬೆಳಗಾವಿ ಬೇಡ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್​ಗೆ ಬೇಡಿಕೆ ಇಟ್ಟರೂ ಸಹ ನೀಡಲು ಬಿಜೆಪಿ ಸಿದ್ಧವಾಗಿದೆ ಎಂದು ತಿಳಿದುಬಂದಿದೆ. ಬಿಜೆಪಿ ಪಕ್ಷದಲ್ಲಿ ಶೆಟ್ಟರ್ ವಾಪಸ್ ಕರೆತರುವ ಬಗ್ಗೆ ಏನೋ ಚರ್ಚೆಗಳು ನಡೆದಿವೆ. ಆದ್ರೆ, ಇದಕ್ಕೆ ಶೆಟ್ಟರ್​ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವುದೇ ಕುತೂಹಲ ಮೂಡಿಸಿದೆ.

ಯಾಕಂದ್ರೆ, ಕಳೆದ ವಿಧಾನಸಭಾ ಚುನಾವಣೆ ವೇಳೆ ಕೊನೆಯ ಕ್ಷಣದಲ್ಲಿ ಟಿಕೆಟ್ ತಪ್ಪಿಸಿದ್ದರಿಂದ ಕೋಪಗೊಂಡ ಶೆಟ್ಟರ್ ಅವರು ತಮಗೆ ಅನ್ಯಾಯವಾಗಿದೆ ಎಂದು ಆಕ್ರೋಶಗೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅಲ್ಲದೇ ಕೆಲ ಹೈಕಮಾಂಡ್​ ನಾಯಕ ವಿರುದ್ಧ ಬಹಿರಂಗವಾಗಿಯೇ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಭಾರೀ ಮುಜುಗರವನ್ನುಂಟು ಮಾಡಿತ್ತು. ಈ ಎಲ್ಲಾವುಗಳನ್ನು ಮರೆತು ಶೆಟ್ಟರ್​ ವಾಪ್ ಬಿಜೆಪಿಗೆ ಘರ್ ವಾಪಸಿ ಮಾಡುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

ಈ ಬಗ್ಗೆ ಆರ್ ಅಶೋಕ್ ಹೇಳಿದ್ದೇನು?

ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ವಾಪಸಾಗುವ ಬಗ್ಗೆ ಬೆಂಗಳೂರಿನಲ್ಲಿ ವಿಪಕ್ಷ ನಾಯಕ R.ಅಶೋಕ್ ಪ್ರತಿಕ್ರಿಯಿಸಿ, ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಮೇಲೆ ನಮಗೆ ಕರುಣೆ ಇದೆ. ಪಾಪ ಅವರು ಕಾಂಗ್ರೆಸ್​ ಪಕ್ಷದಲ್ಲಿ ಮೂಲೆಗುಂಪಾಗಿದ್ದಾರೆ. ಸರ್ಕಾರ ಬಂದು 8 ತಿಂಗಳಾದ್ರೂ ಅಧಿಕಾರವನ್ನ ಕೊಟ್ಟಿಲ್ಲ. ಇದರಿಂದ ಅವರು ಕಾಂಗ್ರೆಸ್ ನ ವೇದಿಕೆಯಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ. ನಮ್ಮಲ್ಲಿ ಇದ್ದಾಗ ಇಬ್ಬರೂ ವೇದಿಕೆಯ ಮುಂಭಾಗದಲ್ಲಿ ಕಾಣಿಸುತ್ತಿದ್ದರು. ನಮ್ಮಲ್ಲಿ ಕೋರ್ ಕಮಿಟಿ ಸದಸ್ಯರೂ ಆಗಿದ್ದರು. ಈಗ ಅವರು ಕಾಂಗ್ರೆಸ್ ನಲ್ಲಿರುವ ಪರಿಸ್ಥಿತಿ ನೋಡಿ ನನಗೆ ಬೇಸರ ಅನ್ನಿಸುತ್ತಿದೆ. ಅವರು ಅಲ್ಲಿ ಹೋಗಿ ನಮ್ಮ ಕಥೆ ಏನಾಯ್ತು ಅಂತಾ ಯೋಚಿಸಲಿ. ಅವರು ಮತ್ತೆ ಬಿಜೆಪಿಗೆ‌ ಬರುವ ಬಗ್ಗೆ ಕೇಂದ್ರದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.

ಬಸವರಾಜ ಬೊಮ್ಮಾಯಿ ಹೇಳಿದ್ದಿಷ್ಟು

ಇನ್ನು ಶೆಟ್ಟರ್ ವಾಪಸ್ ಬರುವ ಬಗ್ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್​ ಮಾತನಾಡಿ, ಕಾಂಗ್ರೆಸ್​ನಲ್ಲಿ ಶೆಟ್ಟರ್​ಗೆ ಸರಿ ಹೋಗುವುದಿಲ್ಲ ಎಂಬುದು ನಮಗೆ ಗೊತ್ತಿದೆ. ಶೆಟ್ಟರ್ ಜತೆ ಯಾರು ಮಾತಾಡಿದ್ದಾರೆ, ಏನು ಮಾತಾಡಿದ್ದಾರೆಂದು ಗೊತ್ತಿಲ್ಲ. ಏನೇ ನಿರ್ಣಯ ಮಾಡುವುದಿದ್ದರೂ ಹೈಕಮಾಂಡ್ ನಿರ್ಣಯ ಮಾಡುತ್ತದೆ. ಹೈಕಮಾಂಡ್ ನಿರ್ಧಾರ ನಾವು ಸ್ವಾಗತಿಸುತ್ತೇವೆ. ಹಾವೇರಿ ಲೋಕಸಭಾ ಕ್ಷೇತ್ರದಿಂದ ಯಾರೇ ನಿಂತರೂ ಬಿಜೆಪಿಯೇ ಗೆಲ್ಲುತ್ತೆ. ಒಬಿಸಿ ಮತ್ತು ಸಾಮಾಜಿಕ ನ್ಯಾಯ ಕಾಂಗ್ರೆಸ್ ಪಕ್ಷದ ಗುತ್ತಿಗೆ ಅಲ್ಲ ಎಂದು ಹೇಳಿದರು.

ಡಿಕೆ ಶಿವಕುಮಾರ್​ ಪ್ರತಿಕ್ರಿಯೆ

ಇನ್ನು ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೈಸೂರಿನಲ್ಲಿ ಪ್ರತಿಕ್ರಿಯಿಸಿ, ವಿಧಾನಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷದ ಆಸ್ತಿ. ಬಿಜೆಪಿ ಮತ್ತು ಜೆಡಿಎಸ್​ ಪಕ್ಷದಲ್ಲಿ ನಾಯಕತ್ವದ ಕೊರತೆ ಇದೆ. ಅದಕ್ಕಾಗಿಯೇ ತಮ್ಮ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಒಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಶೆಟ್ಟರ್​ಗೆ ಗಾಳ ಹಾಕಿದ್ದು, ಇದಕ್ಕೆ ಶೆಟ್ಟರ್ ಒಪ್ಪಿಕೊಳ್ಳುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.