ಭುವನೇಶ್ವರ್: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ (NDA) ಅಭ್ಯರ್ಥಿ ದ್ರೌಪದಿ ಮುರ್ಮ (Droupadi Murmu) ಬಗ್ಗೆ ಕಾಂಗ್ರೆಸ್ ನಾಯಕ ಅಜೋಯ್ ಕುಮಾರ್ (Ajoy Kumar) ನೀಡಿದ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಬಿಜೆಪಿ ಶಾಸಕರು ಒಡಿಶಾ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿ ಕಲಾಪಕ್ಕೆ ಅಡ್ಡಿಯುಂಟು ಮಾಡಿದ್ದಾರೆ. ಕಾಂಗ್ರೆಸ್ ನಾಯಕ ಅಜೋಯ್ ಕುಮಾರ್ ಅವರು ದ್ರೌಪದಿ ಮುರ್ಮು, ಭಾರತದ ಬಹಳ ದುಷ್ಟ ತತ್ವವನ್ನು ಪ್ರತಿನಿಧಿಕರಿಸುತ್ತಿದ್ದಾರೆ. ಅವರನ್ನು ಆದಿವಾಸಿಗಳ ಸಂಕೇತ ಎಂದು ಮಾಡಬಾರದು ಎಂದು ಹೇಳಿದ್ದಾರೆ. ಈ ಹೇಳಿಕೆ ಖಂಡಿಸಿದ ಬಿಜೆಪಿ ರಾಮಮಂದಿರ ಸ್ಕ್ವೇರ್ನಿಂದ ಮಾಸ್ಟರ್ ಕ್ಯಾಂಟೀನ್ ಸ್ಕ್ವೇರ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಬೆಳಗ್ಗೆ ಕಲಾಪ ಆರಂಭವಾಗಿ 10.30ರ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕರು ಸದನದ ಅಂಗಳಕ್ಕೆ ಇಳಿದು ಪ್ರತಿಭಟನೆ ನಡೆಸಿ ಆಕ್ಷೇಪಾರ್ಹ ಹೇಳಿಕೆಗೆ ಅಜೋಯ್ ಕುಮಾರ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಸ್ಪೀಕರ್ ಬಿಕ್ರಮ್ ಕೇಶರಿ ಅರುಖಾ ಅವರು ಪ್ರತಿಭಟನೆ ನಡೆಸುತ್ತಿದ್ದ ಸದಸ್ಯರಲ್ಲಿ ಸೀಟಿಗೆ ಮರಳುವಂತೆ ಒತ್ತಾಯಿಸಿದ್ದು, ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಎಂದು ಹೇಳಿದ್ದಾರೆ. ಆದರೆ ಶಾಸಕರು ಪಟ್ಟು ಬಿಡದೆ ಪ್ರತಿಭಟನೆ ನಡೆಸಿದ ಕಾರಣ ಕಲಾಪವನ್ನು 11.30ಕ್ಕೆ ರದ್ದು ಮಾಡಲಾಯಿತು. 4 ಗಂಟೆಗೆ ಶೂನ್ಯವೇಳೆಯಲ್ಲಿ ಚರ್ಚೆ ಆರಂಭವಾದಾಗ ಬಿಜೆಪಿ ಮತ್ತೆ ಅದೇ ವಿಷಯವನ್ನು ಎತ್ತಿದೆ.
ವಿಪಕ್ಷಗಳ ಮುಖ್ಯ ವಿಪ್ ಮೋಹನ್ ಮಾಜ್ಹಿ ಅಜೋಯ್ ವಿರುದ್ಧ ಖಂಡನಾ ನಿರ್ಣಯಕ್ಕೆ ಒತ್ತಾಯಿಸಿದ್ದಾರೆ. ಒಡಿಶಾದ ಸಚಿವರು, ಜಾರ್ಖಂಡ್ ರಾಜ್ಯಪಾಲರು ಆಗಿದ್ದ ದ್ರೌಪದಿ ಮುರ್ಮು ಉತ್ತಮ ಆಡಳಿತಾಧಿಕಾರಿ ಎಂದು ಈಗಾಗಲೇ ಸಾಬೀತುಪಡಿಸಿದ್ದಾರೆ. ಆಕೆ ಬುಡಕಟ್ಟು ಜನರ ಅಭಿವೃದ್ಧಿಗಾಗಿ ಮಾಡಿದ ಕಾರ್ಯಗಳು ಶ್ಲಾಘನೀಯ. ಅಜೋಯ್ ಕುಮಾರ್ ಅವರ ಹೇಳಿಕೆಯು ಆಕೆಯ ಬಗ್ಗೆ ಕಾಂಗ್ರೆಸ್ ಪಕ್ಷದ ವರ್ತನೆಯನ್ನು ಬಿಂಬಿಸುತ್ತದೆ ಎಂದಿದ್ದಾರೆ.
Odisha BJP MLAs protest inside the State Assembly against Congress leader Ajoy Kumar’s remarks on NDA’s Presidential candidate Droupadi Murmu pic.twitter.com/BEyWugHfwD
— ANI (@ANI) July 14, 2022
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ನರಸಿಂಘ ಮಿಶ್ರಾ ಅವರು ಬಿಜೆಪಿ ಸದಸ್ಯರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ್ದು ಅಜೋಯ್ ಮತ್ತು ರಾಹುಲ್ ಗಾಂಧಿ ಈ ವಿಧಾನಸಭೆಯ ಸದಸ್ಯರು ಅಲ್ಲ. ಹೀಗಿರುವಾಗ ಅವರ ಬಗ್ಗೆ ಚರ್ಚೆಗಳು ವಿಧಾನಸಭೆಯ ನಿಯಮಾವಳಿಗಳ ವಿರುದ್ಧವಾಗಿದೆ. ಅಜೋಯ್ ಅವರು ವೈಯಕ್ತಿಕವಾಗಿ ಮುರ್ಮು ಅವರನ್ನು ಹೊಗಳಿದ್ದಾರೆ. ಆದಾಗ್ಯೂ, ಕಾಂಗ್ರೆಸ್ ಆಕೆ ಪ್ರತಿನಿಧಿಕರಿಸುತ್ತಿರುವ ಸಿದ್ಧಾಂತನ್ನು ವಿರೋಧಿಸುತ್ತಲೇ ಬಂದಿದೆ ಎಂದು ಹೇಳಿದ್ದಾರೆ.
ವಿಧಾನಸಭೆ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಡಿ ಶಾಸಕ ಡೆಬಿ ಪ್ರಸಾದ್ ಮಿಶ್ರಾ, ಮುರ್ಮು ಮೇಲಿನ ವೈಯಕ್ತಿಕ ದಾಳಿ ಖಂಡನೀಯ ಆದರೆ ಕಲಾಪ ಮುಂದವರಿಯಲು ಬಿಡಬೇಕು ಎಂದು ಹೇಳಿದ್ದಾರೆ.
ದ್ರೌಪದಿ ಮುರ್ಮು ಅವರ ಗ್ರಾಮವಾದ ಬರಿಪದದ ರಾಯಿರಂಗ್ಪುರ್ ಸೇರಿದಂತೆ ಹಲವಡೆ ಬಿಜೆಪಿ ಪ್ರತಿಭಟನೆ ನಡೆಸಿದೆ. ಬಿಜೆಪಿ ರಾಜ್ಯ ಘಟಕವು ಒಡಿಶಾ, ಮಹಿಳೆ, ಬುಡಕಟ್ಟು ಜನಾಂಗ ಮತ್ತು ದಲಿತರನ್ನು ಅವಮಾನಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅಜೋಯ್ ಕುಮಾರ್ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ.
Published On - 4:24 pm, Thu, 14 July 22