ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನ ಜನರು ಚೈನಾ ಮಾಡಲ್ ಥರ ಬಿಸಾಕಿದರು: ಆರ್ ಅಶೋಕ್
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಛತ್ತೀಸ್ಗಢ, ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದ್ದು, ಎಲ್ಲಾ ರಾಜ್ಯಗಳಲ್ಲಿ ಅಧಿಕಾರ ಹಿಡಿದೇ ಹಿಡಿಯುತ್ತೇವೆ ಎಂಬ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್, ತೆಲಂಗಾಣ ಮಾತ್ರ ಗೆದ್ದಿಕೊಂಡಿತು. ಈ ಬಗ್ಗೆ ಕರ್ನಾಟಕದ ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಬೆಳಗಾವಿ, ಡಿ.3: ರಾಜಸ್ಥಾನ, ಛತ್ತೀಸಗಢ್, ಮಧ್ಯಪ್ರದೇಶ ರಾಜ್ಯಗಳ ಜನರು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ಚೈನಾ ಮಾಡಲ್ ಥರ ಬಿಸಾಕಿದರು ಎಂದು ವಿಪಕ್ಷ ನಾಯಕ ಆರ್. ಅಶೋಕ್ (R.Ashok) ವ್ಯಂಗ್ಯವಾಡಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು, ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಒಳ್ಳೆಯ ಫಲಿತಾಂಶ ಬಂದಿದೆ ಎಂದರು.
ರಾಜಸ್ಥಾನ, ಛತ್ತೀಸಗಢ್, ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚಿಸುತ್ತಿದೆ. ತೆಲಂಗಾಣದಲ್ಲೂ ಕಳೆದ ಚುನಾವಣೆಗೆ ಹೋಲಿಸಿದರೆ ಈ ಸಲ ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಕ್ಕಿವೆ. ನರೇಂದ್ರ ಮೋದಿ ವರ್ಚಸ್ಸು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ಧೋರಣೆಯಿಂದ ಈ ಗೆಲುವಾಗಿದೆ. ನರೇಂದ್ರ ಮೋದಿ ವರ್ಚಸ್ಸು ಇದೆ ಎಂಬುದಕ್ಕೆ ಈ ಚುನಾವಣೆ ಫಲಿತಾಂಶವೇ ಸಾಕ್ಷಿ ಎಂದರು.
ಇದನ್ನೂ ಓದಿ: Narendra Modi: ಪಂಚರಾಜ್ಯ ಚುನಾವಣೆ: ಬಿಜೆಪಿಗೆ ಆಶೀರ್ವದಿಸಿದ ಜನತಾ ಜನಾರ್ದನನಿಗೆ ಪ್ರಧಾನಿ ನರೇಂದ್ರ ಮೋದಿ ನಮನ
ಕರ್ನಾಟಕದ ಗ್ಯಾರಂಟಿ ಯೋಜನೆ ಬಗ್ಗೆ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಹೇಳಿತ್ತು. ಆದರೆ ಕಾಂಗ್ರೆಸ್ ಯೋಜನೆಗಳನ್ನ ಅಲ್ಲಿನ ಜನ ಚೈನಾ ಮಾಡಲ್ ಥರ ಬಿಸಾಕಿದರು. ಈ ಗೆಲುವು ನರೇಂದ್ರ ಮೋದಿಗೆ ಮತ್ತಷ್ಟು ಬೆಂಬಲ ಕೊಟ್ಟಿದೆ. ಲೋಕಸಭೆ ಚುನಾವಣೆಗೆ ಬಿಜೆಪಿ ಕಾರ್ಯಕರ್ತರಿಗೆ ಮತ್ತಷ್ಟು ಉತ್ತೇಜನ ನೀಡಿದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ 28 ಸ್ಥಾನ ಗೆಲ್ಲಲಿದೆ. ಹಿಂದುತ್ವ ದೋಷಣೆ ಮಾಡಿದವರಿಗೆ ಮಧ್ಯಪ್ರದೇಶ, ರಾಜಸ್ಥಾನ ಜನ ಪಾಠ ಕಲಿಸಿದ್ದಾರೆ. ವಿಶ್ವಕಪ್ ಫೈನಲ್ ಪಂದ್ಯ ನೋಡಲು ಹೋಗಿದ್ದ ಮೋದಿ ಅವರ ಕಾಲ್ಗುಣ ಸರಿಯಿಲ್ಲ ಎಂದು ಕಾಂಗ್ರೆಸ್ ಹೇಳಿತ್ತು. ಈಗ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸಗಢ್ ಜನರೇ ರಾಹುಲ್ ಕಾಲ್ಗುಣ ಸರಿಯಿಲ್ಲ ಎಂದು ಓಡಿಸಿದ್ದಾರೆ. ಕ್ಷುಲ್ಲಕ ರಾಜಕಾರಣ ಮಾಡುವುದನ್ನು ರಾಹುಲ್ ಗಾಂಧಿ ಬಿಡಬೇಕು ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ