ಪ್ರಧಾನಿ ಮೋದಿ ಎದುರು ಕಾಂಗ್ರೆಸ್ನ ಎಂಕ, ನಾಣಿ, ಸೀನ ಯಾವ ಲೆಕ್ಕ; ಬಿಎಸ್ ಯಡಿಯೂರಪ್ಪ ಲೇವಡಿ
ವೀರಶೈವ ಬಂಧುಗಳು ತಪ್ಪು ಭಾವನೆ ಇಟ್ಟುಕೊಳ್ಳುವುದು ಬೇಡ. ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ತಪ್ಪು ತಿಳಿಯುವುದು ಬೇಡ. ಬಿಜೆಪಿಯನ್ನು ಈ ಬಾರಿ ಅಧಿಕಾರಕ್ಕೆ ತರಬೇಕು ಎಂದು ಯಡಿಯೂರಪ್ಪ ಕರೆ ನೀಡಿದರು.
ಚಾಮರಾಜನಗರ: ಕಾಂಗ್ರೆಸ್ ಪಕ್ಷದಲ್ಲಿ ಸರಿಯಾದ ನಾಯಕರೇ ಇಲ್ಲ. ಎಂಕ, ನಾಣಿ, ಸೀನ ಅಂತ ಒಂದಿಬ್ಬರು ಇದ್ದಾರಷ್ಟೆ ಎಂದು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಲೇವಡಿ ಮಾಡಿದರು. ಕೊಳ್ಳೇಗಾಲದಲ್ಲಿ (Kollegal) ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಮೊನ್ನೆ ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಾಗ ಜನರಿಗೆ ನಿಲ್ಲಲು ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ನೀವು ರಾಹುಲ್ ಗಾಂಧಿ ಅವರನ್ನು ಕರೆದುಕೊಂಡು ಬಂದು ಸಮಾವೇಶ ಮಾಡುತ್ತೀರಾ? ಮೋದಿ ಮುಂದೆ ಕಾಂಗ್ರೆಸ್ನ ಎಂಕ, ನಾಣಿ, ಸೀನ ಯಾವ ಲೆಕ್ಕ ಎಂದು ಕುಹಕವಾಡಿದರು.
ರಾಜ್ಯವನ್ನು ದಿವಾಳಿ ಸ್ಥಿತಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಅಂಥವರು ಮತ್ತೆ ಅಧಿಕಾರಕ್ಕೆ ಬರಬೇಕೆಂದು ಮೀಸೆ ತಿರುವುತ್ತಾರೆ. ನಮ್ಮ ಗೆಲುವನ್ನು ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ. ಮಹದೇಶ್ವರನ ಆಶೀರ್ವಾದದಿಂದ ವಿಜಯ ಸಂಕಲ್ಪ ಯಾತ್ರೆ ಶುರುವಾಗಿದೆ. ಪ್ರತಿ ಮನೆಗೆ ಹೋಗಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಜನರ ಪ್ರೀತಿ, ವಿಶ್ವಾಸವನ್ನು ಗಳಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಯಡಿಯೂರಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು.
ಕಾಂಗ್ರೆಸ್ಸಿಗರು ಹಣ, ಹೆಂಡ, ಜಾತಿಯ ವಿಷಬೀಜ ಬಿತ್ತಲು ಮುಂದಾಗಿದ್ದಾರೆ. ರಾಜ್ಯದ ಜನರು ಮತ್ತೊಮ್ಮೆ ಬಿಜೆಪಿಗೆ ಅವಕಾಶ ನೀಡಬೇಕು. ನಾನು, ವಿಜಯೇಂದ್ರ, ಬೊಮ್ಮಾಯಿ ಮತ್ತೊಮ್ಮೆ ಹನೂರಿಗೆ ಬರುತ್ತೇವೆ. ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲು ಕೃಷಿ ಬಜೆಟ್ ಮಂಡಿಸಿದ್ದೆ. ಕೇಂದ್ರ ಸರ್ಕಾರ ರೈತರಿಗೆ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಬಸವರಾಜ ಬೊಮ್ಮಾಯಿ ಸಹ ರೈತರಿಗೆ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ವೀರಶೈವ ಬಂಧುಗಳು ಬಿಜೆಪಿಗೆ ಮತ ನೀಡಿ; ಬಿಎಸ್ವೈ ಮನವಿ
ನಾನೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು. ಯಡಿಯೂರಪ್ಪನಿಗೆ ಪಕ್ಷ ಅನ್ಯಾಯ ಮಾಡಿಲ್ಲ. ನನಗೆ ಪಕ್ಷ ತುಂಬಾ ದೊಡ್ಡ ಸ್ಥಾನ ಕೊಟ್ಟಿದೆ. ಕೋರ್ ಕಮಿಟಿಯಲ್ಲಿ ನಾನಿದ್ದೇನೆ. ವೀರಶೈವ ಬಂಧುಗಳು ತಪ್ಪು ಭಾವನೆ ಇಟ್ಟುಕೊಳ್ಳುವುದು ಬೇಡ. ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ತಪ್ಪು ತಿಳಿಯುವುದು ಬೇಡ. ಬಿಜೆಪಿಯನ್ನು ಈ ಬಾರಿ ಅಧಿಕಾರಕ್ಕೆ ತರಬೇಕು ಎಂದು ಯಡಿಯೂರಪ್ಪ ಕರೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ