ಈಶ್ವರಪ್ಪ ಬಂಡಾಯದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಬಿವೈ ರಾಘವೇಂದ್ರ
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ನಾಯಕ ಕೆಎಸ್ ಈಶ್ವರಪ್ಪ ಬಂಡಾಯ ಎದ್ದಿದ್ದು, ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಮಧ್ಯೆ ಈಶ್ವರಪ್ಪ ಮನವೊಲಿಕೆಗೆ ಕಸರತ್ತು ನಡೆಯುತ್ತಿದೆ ಎಂದಿರುವ ಬಿವೈ ರಾಘವೇಂದ್ರ, ಆಚ್ಚರಿಯ ಹೇಳಿಕೆ ಒಂದನ್ನು ನೀಡಿದ್ದಾರೆ.
ಶಿವಮೊಗ್ಗ, ಮಾರ್ಚ್ 16: ಶಿವಮೊಗ್ಗ ಕ್ಷೇತ್ರದಲ್ಲಿ (Shivamogga) ಮಗ ಕಾಂತೇಶ್ಗೆ ಟಿಕೆಟ್ ಕೈ ತಪ್ಪಿದ ಕಾರಣ ಬಂಡಾಯವೆದ್ದಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಬಿವೈ ರಾಘವೇಂದ್ರ (BY Raghavendra) ವಿರುದ್ಧ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಆದರೆ ಈಶ್ವರಪ್ಪ ಬಂಡಾಯದ ಬಗ್ಗೆ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಇದೀಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ‘ಟಿವಿ9’ಗೆ ಪ್ರತಿಕ್ರಿಯೆ ನೀಡಿರುವ ರಾಘವೇಂದ್ರ, ಈಶ್ವರಪ್ಪ ಅವರ ಮನವೊಲಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಈಶ್ವರಪ್ಪ ಅವರಿಗೆ ಬೇಸರ ಆಗಿರುವುದು ನಿಜ. ಅದನ್ನು ಸರಿಪಡಿಸುತ್ತೇವೆ. ಈಶ್ವರಪ್ಪ ಎಂದೆಂದಿಗೂ ನಮ್ಮ ನಾಯಕರು. ನಾನು ಅವರ ಜೊತೆ ನಿತ್ಯ ಎರಡು ಮೂರು ಬಾರಿ ದೂರವಾಣಿಯಲ್ಲಿ ಮಾತುಕತೆ ನಡೆಸುತ್ತಿರುತ್ತೇನೆ. ಈಶ್ವರಪ್ಪ ಪಕ್ಷದಲ್ಲೇ ಇರಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಶಿವಮೊಗ್ಗದ ಚುನಾವಣಾ ಪ್ರಚಾರ ಕಾರ್ಯಕ್ರಮ ಕೂಡ ಯಶಸ್ವಿಯಾಗಿ ನಡೆಯಲಿದೆ. ಮೂರನೇ ಬಾರಿ ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಇದೇ ವೇಳೆ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಜನ ಸೇರುವ ನಿರೀಕ್ಷೆ ಇದೆ. ಬಿಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಹಿರಿಯ ಬಿಜೆಪಿ ನಾಯಕರು ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಘವೇಂದ್ರ ಹೇಳಿದ್ದಾರೆ.
ಆದರೆ, ಮತ್ತೊಂದೆಡೆ ಈಶ್ವರಪ್ಪ ಮುನಿಸು ಮುಂದುವರಿದಿದೆ. ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆ ಸ್ಪರ್ಧಿಸುವುದು ಶತಸಿದ್ಧ. ತಂದೆ ಮಕ್ಕಳ ಕೈಯ ಹಿಡಿತದಲ್ಲಿ ಪಕ್ಷವಿದ್ದು, ಕಾರ್ಯಕರ್ತರು ಪರದಾಡುವಂತೆ ಆಗಿದೆ. ಪಕ್ಷ ಉಳಿಸುವುದಕ್ಕಾಗಿ ನಾನು ಈ ಹೋರಾಟ ಮಾಡುತ್ತಿದ್ದೇನೆ ಎಂದು ಶಿವಮೊಗ್ಗದಲ್ಲಿ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಸ್ಪರ್ಧೆ ಬಗ್ಗೆ ಘೋಷಣೆ ಬಳಿಕ ರಾಜ್ಯಾದ್ಯಂತ ಬೆಂಬಲ ಸಿಗುತ್ತಿದೆ. ರಾಜ್ಯದ ವಿವಿಧ ಭಾಗದಿಂದ ಜನ ಬಂದು ಚುನಾವಣೆ ಎದುರಿಸಲು ನೆರವಾಗುತ್ತಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ತಂದೆ ಮಕ್ಕಳ ಕೈಗೆ ಪಕ್ಷ ಸಿಕ್ಕಿ, ಕಾರ್ಯಕರ್ತರು ಪರದಾಡ್ತಿದ್ದಾರೆ; ಪಕ್ಷ ಉಳಿಸಲು ನನ್ನ ಈ ಹೋರಾಟ -ಕೆ.ಎಸ್.ಈಶ್ವರಪ್ಪ
ಇನ್ನು ಮಾರ್ಚ್ 17 ರಂದು ಭಾನುವಾರ ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಪ್ರಧಾನಿ ಅವರ ಚುನಾವಣಾ ಪ್ರಚಾರ ಅಭಿಯಾನವು ಕರ್ನಾಟಕದಲ್ಲಿ ಇಂದು ಕಲಬುರಗಿಯ ರೋಡ್ ಶೋ ಮೂಲಕ ಆರಂಭಗೊಳ್ಳಲಿದೆ. ಈ ಮಧ್ಯೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿತಟ್ಟುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ