ಬೆಂಗಳೂರು, (ಅಕ್ಟೋಬರ್ 13): ರಾಜ್ಯದಲ್ಲಿ ನಡೆಸಲಾಗಿರುವ ಜಾತಿಗಣತಿ ವರದಿ ( Karnataka Caste census Report) ಬಹಿರಂಗಕ್ಕೆ ಸರ್ಕಾರ ರಂಗತಾಲೀಮು ನಡೆಸುತ್ತಿದೆ. ಆದ್ರೆ, ಸಮುದಾಯಗಳಲ್ಲಿ ಪರ-ವಿರೋಧ ಕಿಡಿ ಸ್ಫೋಟಗೊಂಡಿದ್ದು, ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ಜಾತಿಗಣತಿ ಪ್ರಶ್ನಿಸಿ ಅಕ್ಟೋಬರ್ 20ಕ್ಕೆ ಒಕ್ಕಲಿಗರ ಸಂಘದ ಸಭೆ ನಡೆಯಲಿದ್ದು, ಒಕ್ಕಲಿಗ ಸಮುದಾಯ ವಿರೋಧಿಸುವ ಸಾಧ್ಯತೆ ಇದೆ. ವಿಷಯ ಅಂದ್ರೆ, ಈ ಸಭೆಗೂ ಮುನ್ನ ಇವತ್ತು ಒಕ್ಕಲಿಗ ನಾಯಕರು, ಡಿಸಿಎಂ ಡಿಕೆ ಶಿವಕುಮಾರ್‌ರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಅಕ್ಟೋಬರ್ 20ರ ಒಕ್ಕಲಿಗ ಸಭೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನ ಆಹ್ವಾನಿಸಿದ್ದಾರೆ.
ಜಾತಿ ಗಣತಿ ವಿಚಾರವಾಗಿ ಈ ಹಿಂದೆಯೇ ಒಕ್ಕಲಿಗ ಸಮುದಾಯ ಸಾಕಷ್ಟು ಸಂಶಯವನ್ನ ವ್ಯಕ್ತಪಡಿಸಿತ್ತು. ಅದರಲ್ಲೂ ಜಾತಿ ಗಣತಿ ಮಾಡಿರುವ ಪದ್ದತಿ ವೈಜ್ಞಾನಿಕವೇ ಎಂಬುದನ್ನ ಸಹ ಪ್ರಶ್ನೆ ಮಾಡಿತ್ತು. ಸಮುದಾಯದ ಸ್ವಾಮಿಜಿಗಳು ಜಾತಿ ಗಣತಿ ಬಗ್ಗೆ ಅಪಸ್ವರ ವ್ಯಕ್ತಪಡಿಸಿದ್ರು. ಈಗ ಸಮುದಾಯ ಸಂಘಟನೆಯ ಮೂಲಕ ಒಂದಾಗ್ತಾ ಇದೆ. ಅಕ್ಟೋಬರ್ 20 ರಂದು ಸಭೆ ನಡಿಸಿ, ಜಾತಿ ಗಣತಿ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಅಂದಹಾಗೇ ಈಗಾಗಲೇ ಸಂಘ ಆಂತರಿಕವಾಗಿ ಎರಡು ಮೂರ ಸಭೆಗಳನ್ನ ನಡೆಸಿದ್ದು, ಜಾತಿ ಗಣತಿಗೆ ತಾತ್ವಿಕ ವಿರೋಧದ ನಿಲುವನ್ನ ಹೊಂದಿದೆ. ಜಾತಿ ಗಣತಿ ಮೂಲಕ ನಿರ್ದಿಷ್ಟವಾಗಿ ಕೆಲ ಸಮುದಾಯಗಳನ್ನೇ ಟಾರ್ಗೇಟ್ ಮಾಡಲಾಗ್ತಾ ಇದೆ ಎಂಬುದು ಸಂಘದ ಸಂಶಯ. ಅಲ್ಲದೇ ಜಾತಿ ಗಣತಿ ಮಾಡಿರುವ ವೇಳೆ ಸಮುದಾಯದ ಮನೆಗಳಿಗೆ ಸರ್ವೆ ಮಾಡುವವರು ಸರಿಯಾಗಿ ಬಂದಿಲ್ಲ ಎಂಬ ಮಾತು ಕೂಡ ಹಿಂದೆಯೇ ಕೇಳಿ ಬಂದಿತ್ತು. ಹೀಗಾಗಿ ಈಗ ಜಾತಿ ಗಣತಿ ವರದಿಯನ್ನ ತಿರಸ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಒಕ್ಕಲಿಗರ ಸಂಘ ನಿರ್ಧರಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಜಾತಿ ಜನಗಣತಿ ವರದಿ ಬಿಡುಗಡೆ ವಿರೋಧಿಸಲು ವಿಪಕ್ಷ ಬಿಜೆಪಿ ಪ್ಲಾನ್
ಇದೇ ವಿಚಾರ ಚರ್ಚಿಸಲು ಸಮಾಜದ ರಾಜಕೀಯ ಮುಖಂಡರಾದ ಡಿ.ಕೆ.ಶಿವಕಮಾರ್, ಹೆಚ್.ಡಿ.ಕುಮಾರಸ್ವಾಮಿ, ಆರ್.ಅಶೋಕ್, ಅಶ್ವಥ್ ನಾರಾಯಣ್ ಸೇರಿದಂತೆ ಇತರರಿಗೂ ಸಭೆಗೆ ಆಹ್ವಾನಿಸಲಾಗಿದೆ. ಮುಂದೇನು ಮಾಡಬೇಕು ಎನ್ನುವ ನಿರ್ಣಯದ ಬಗ್ಗೆ ಸಭೆಯಲ್ಲಿ ನಿರ್ಧಾರವಾಗಲಿದೆ. ಇದರ ನಡುವೆ ಒಕ್ಕಲಿಗರ ಸಂಘದ ಮುಖಂಡರು ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.ಈ ವೇಳೆ ಲಿಂಗಾಯತ ಹಾಗೂ ಒಕ್ಕಲಿಗ ಸಮಾಜ ಜೊತೆಯಾಗಿ ಹೋರಾಟ ನಡೆಸುವ ಬಗ್ಗೆ ಚರ್ಚೆಯಾಗಿದೆ ಎನ್ನಲಾಗಿದ್ದು, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯ ಜಾತಿಗಣತಿ ವಿಚಾರದಲ್ಲಿ ಒಂದಾಗುತ್ತಿರುವುದಕ್ಕೂ ಪ್ರಬಲ ಕಾರಣವಿದೆ.
ಕೆ.ಸಿ.ರೆಡ್ಡಿಯವರಿಂದ ಹಿಡಿದು ಹೆಚ್.ಡಿ.ಕುಮಾರಸ್ವಾಮಿವರೆಗೆ 7 ಮಂದಿ ಒಕ್ಕಲಿಗ ಮುಖ್ಯಮಂತ್ರಿಗಳು ರಾಜ್ಯ ಭಾರ ಆಳಿದ್ರೆ, ನಿಜಲಿಂಗಪ್ಪನವರಿಂದ ಆದಿಯಾಗಿ ಬಸವರಾಜ ಬೊಮ್ಮಾಯಿವರೆಗೆ 10 ಮಂದಿ ಲಿಂಗಾಯಿತ ಸಿಎಂಗಳು ರಾಜ್ಯ ಭಾರ ಮಾಡಿದ್ದಾರೆ. ರಾಜ್ಯದ ಬಹುತೇಕ ಸಿಎಂಗಳು ಒಕ್ಕಲಿಗ, ಲಿಂಗಾಯತ ಸಮುದಾಯದವರೇ ಆಗಿದ್ದಾರೆ. ಈಗ ಜಾತಿ ಗಣತಿಯಿಂದ ಸಮುದಾಯದ ಸಂಖ್ಯೆಯನ್ನ ದುರುದ್ದೇಶ ಪೂರ್ವಕವಾಗಿ ಕಡಿಮೆ ತೋರಿಸಲಾಗುತ್ತೆ ಎಂಬ ಅನುಮಾನವನ್ನ ಈ ಎರಡು ಸಮುದಾಯಗಳು ವ್ಯಕ್ತಪಡಿಸಿವೆ. ಹಾಗೇನಾದರೂ ಆದರೆ ರಾಜ್ಯ ರಾಜಕಾರಣದ ಚಿತ್ರಣವೇ ಬದಲಾಗಿ ಹೋಗಲಿದೆ. ಬದಲಾದ ಜಾತಿ ಸಮೀಕರಣದಿಂದ ಪವರ್ ಪಾಲಿಟಿಕ್ಸ್ ನ ಲೆಕ್ಕಾಚಾರಗಳ ಬದಲಾಗಲಿದ್ದು, ರಾಜಕಾರಣದ ಮೇಲಿನ ಸಮುದಾಯಗಳ ಹಿಡಿತ ಕೈ ತಪ್ಪುವ ಆತಂಕ ಸಹ ಇದೆ. ಹೀಗಾಗಿ ಸತ್ಯಾಸತ್ಯತೆ ಮನವರಿಕೆಯಾಗುವವರೆಗೂ ವರದಿ ಒಪ್ಪಲು ಸಿದ್ದರಿಲ್ಲ ಎಂಬ ನಿಲುವನ್ನ ಎರಡು ಸಮುದಾಯಗಳು ಹೊಂದಿವೆ.
ಇತ್ತ ಪ್ರಬಲ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಸರ್ಕಾರಕ್ಕೆ ಸೆಡ್ಡು ಹೊಡಿತಿದ್ರೆ, ಅತ್ತ ಹಿಂದುಳಿದ ಮತ್ತು ದಲಿತ ವರ್ಗಗಳು ಜಾತಿ ಗಣತಿ ಜಾರಿಗೆ ಇನ್ನಿಲ್ಲದ ಒತ್ತಡ ಹೇರಿವೆ. ಹೀಗಾಗಿ ಜಾತಿ ಸಂಕಷ್ಟ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜೋರಾಗ್ತಾನೇ ಇದೆ. ಒಂದೆಂತು ಸತ್ಯ.. ಸಮ ಸಮಾಜ ನಿರ್ಮಿಸಲೇ ಬೇಕು ಆದರೆ ಜಾತಿ ಹಕ್ಕಿನ ಹೆಸರಲ್ಲಿ ಬಣ ಬಡಿದಾಟಗಳು ನಡೆಸುವುದು ಸರಿಯೇ ಎಂಬುದು ಪ್ರಶ್ನೆ? ಸಬ್ ಜನಮೇ ಏಕ್ ಹಿ ಬೀಜ್, ಸಬ್ ಜನಕಾ ಮಿಟ್ಟಿ ಏಕ್… ಎಂಬ ಸಂತ ಕಬೀರರ ಸಾಲುಗಳು ಈಗಿನ ಪ್ರಸ್ತುತೆಯನ್ನ ಹೇಳುತ್ತಿವೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:07 am, Fri, 13 October 23