ಬಿಜೆಪಿ ಮುಸ್ಲಿಂ ವಿರೋಧಿಯಲ್ಲ, ಹಾಗೆ ಬಿಂಬಿಸಲಾಗುತ್ತಿದೆ; ಛಲವಾದಿ ನಾರಾಯಣಸ್ವಾಮಿ ಕೊಟ್ಟ ಕಾರಣ ಇಲ್ಲಿದೆ ನೋಡಿ

| Updated By: Ganapathi Sharma

Updated on: Sep 30, 2023 | 4:27 PM

Chalavadi Narayanaswamy; ಬಿಜೆಪಿ ಮುಸ್ಲಿಂ ವಿರೋಧಿಯಲ್ಲ. ಕಾಂಗ್ರೆಸ್​​ನವರು ಮಕ್ಕಳನ್ನು ಗುಮ್ಮ ತೋರಿಸಿ ಹೆದರಿಸಿದಂತೆ, ಬಿಜೆಪಿ ತೋರಿಸಿ ಹೆದರಿಸಿದ್ದಾರೆ ಎಂದು ಹೇಳಿದ್ದಾರೆ. ಜೆಡಿಎಸ್ ಜತೆ ಪಕ್ಷ ಮೈತ್ರಿ ಮಾಡಿಕೊಂಡ ಕೆಲವೇ ದಿನಗಳಲ್ಲಿ ಅವರು ಈ ಹೇಳಿಕೆ ನೀಡಿರುವುದು ಗಮನಾರ್ಹ.

ಬಿಜೆಪಿ ಮುಸ್ಲಿಂ ವಿರೋಧಿಯಲ್ಲ, ಹಾಗೆ ಬಿಂಬಿಸಲಾಗುತ್ತಿದೆ; ಛಲವಾದಿ ನಾರಾಯಣಸ್ವಾಮಿ ಕೊಟ್ಟ ಕಾರಣ ಇಲ್ಲಿದೆ ನೋಡಿ
ಛಲವಾದಿ ನಾರಾಯಣಸ್ವಾಮಿ
Follow us on

ಬೆಂಗಳೂರು, ಸೆಪ್ಟೆಂಬರ್ 30: ಬಿಜೆಪಿ (BJP) ಯಾವುದೇ ಕಾರಣಕ್ಕೂ ಮುಸ್ಲಿಂ (Muslim) ವಿರೋಧಿ ಅಲ್ಲ. ಆದರೆ, ಕಾಂಗ್ರೆಸ್​​ನವರು ಹಾಗೆ ಬಿಂಬಿಸುತ್ತಿದ್ದಾರಷ್ಟೆ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಮುಸ್ಲಿಂ ವಿರೋಧಿಯಲ್ಲ. ಕಾಂಗ್ರೆಸ್​​ನವರು ಮಕ್ಕಳನ್ನು ಗುಮ್ಮ ತೋರಿಸಿ ಹೆದರಿಸಿದಂತೆ, ಬಿಜೆಪಿ ತೋರಿಸಿ ಹೆದರಿಸಿದ್ದಾರೆ ಎಂದು ಹೇಳಿದ್ದಾರೆ. ಜೆಡಿಎಸ್ ಜತೆ ಪಕ್ಷ ಮೈತ್ರಿ ಮಾಡಿಕೊಂಡ ಕೆಲವೇ ದಿನಗಳಲ್ಲಿ ಅವರು ಈ ಹೇಳಿಕೆ ನೀಡಿರುವುದು ಗಮನಾರ್ಹ.

ಕೆಜಿಹಳ್ಳಿ, ಡಿಜೆಹಳ್ಳಿ ಗಲಭೆ ತನಿಖಾ ವರದಿ ಅಂಗೀಕಾರ: ಕಾಂಗ್ರೆಸ್ ದ್ವಿಮುಖ ನಡೆ ಎಂದ ಛಲವಾದಿ

ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖಾ ವರದಿಯನ್ನು ಅಂಗೀಕರಿಸಿರುವುದನ್ನು ಛಲವಾದಿ ನಾರಾಯಣ ಸ್ವಾಮಿ ಟೀಕಿಸಿದ್ದಾರೆ. ಪ್ರಾಣ ರಕ್ಷಣೆಗೆ ಗೋಲಿಬಾರ್ ಮಾಡಿದ್ದಾರೆ ಅಂತ ವರದಿಯಲ್ಲಿ ಹೇಳಲಾಗಿದೆ. ಅದನ್ನು ಈಗ ಕಾಂಗ್ರೆಸ್ ಸರ್ಕಾರ ಒಪ್ಪಿದೆ. ಈ ಹಿಂದೆ ಅಮಾಯಕರ ಮೇಲೆ ಗೋಲಿಬಾರ್ ನಡೆದಿದೆ ಅಂತ ಹೇಳಿದ್ದರು. ಇದು ಕಾಂಗ್ರೆಸ್ ದ್ವಿಮುಖ ನಡೆಯನ್ನು ತೋರುತ್ತಿದೆ. ಇವರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದ್ದ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಆಗಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪಗಳನ್ನು ಮಾಡಿತ್ತು. ಘಟನೆಯಲ್ಲಿ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಲಾಗಿತ್ತು. ಹೀಗಾಗಿ ಬಿಜೆಪಿ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಿತ್ತು. ಸದ್ಯ ಈಗ ಮ್ಯಾಜಿಸ್ಟ್ರೇಟ್ ತನಿಖಾ ವರದಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಅಂಗೀಕರಿಸಿದೆ.

ಮೈತ್ರಿಗೆ ಇಬ್ರಾಹಿಂ ಅಸಾಮಾಧಾನ ಜೆಡಿಎಸ್ ಆಂತರಿಕ ವಿಚಾರ

ಮೈತ್ರಿ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅಸಮಾಧಾನ ವ್ಯಕ್ತಪಡಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಛಲವಾದಿ, ಅದು ಅವರ ಪಕ್ಷದ ಆಂತರಿಕ ವಿಚಾರ. ಅದರಲ್ಲಿ ಬಿಜೆಪಿ ಮೂಗು ತೂರಿಸುವುದಿಲ್ಲ. ಬಿಜೆಪಿ ಜೊತೆ ಜೆಡಿಎಸ್ ವಿಲೀನ ಆಗಿಲ್ಲ. ರಾಷ್ಟ್ರದ ಹಿತದೃಷ್ಟಿಯಿಂದ ಕೈ ಜೋಡಿಸಿದ್ದಾರೆ. ಎನ್​ಡಿಎ ಜೊತೆ ಬೇರೆ ಪಕ್ಷಗಳು ಕೈ ಜೋಡಿಸಿದಂತೆ ಇದೂ ಕೂಡ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೆಜಿಹಳ್ಳಿ, ಡಿಜೆಹಳ್ಳಿ ಗಲಭೆ ಪ್ರಕರಣ; ಮ್ಯಾಜಿಸ್ಟ್ರೇಟ್ ತನಿಖಾ ವರದಿ ಅಂಗೀಕರಿಸಿದ ರಾಜ್ಯ ಸರ್ಕಾರ

ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಇಬ್ರಾಹಿಂ, ಹೆಚ್​ಡಿ ಕುಮಾರಸ್ವಾಮಿ ಅವರು ತಮ್ಮ ಬಳಿ ಒಂದು ಮಾತೂ ಚರ್ಚಿಸದೆ ಹೋಗಿದ್ದಾರೆ. ಪಕ್ಷದಲ್ಲಿ ಚರ್ಚೆ ಆಗಿ ನಿರ್ಣಯ ಆದ ಮೇಲೆ ರಾಜ್ಯಾಧ್ಯಕ್ಷನಾಗಿ ನಾನು ಸಹಿ ಹಾಕಬೇಕು. ಕೋರ್ ಕಮಿಟಿ ಪ್ರವಾಸ ಶುರು ಮಾಡಿಲ್ಲ, ಆಗಲೇ ಹೋಗಿ ಭೇಟಿ ಮಾಡಿ ಬಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.