ಬೆಂಗಳೂರು/ಕೋಲಾರ, (ಮಾರ್ಚ್ 27): ಕೋಲಾರ ಲೋಕಸಭೆ ಕ್ಷೇತ್ರದಲ್ಲಿ (Kolar constituency) ಕಾಂಗ್ರೆಸ್ ಪಕ್ಷದಿಂದ (Congress) ಸ್ಪರ್ಧಿಸುವ (Lok Sabha Election) ಅಭ್ಯರ್ಥಿಯ ಹೆಸರು ಫೈನಲ್ ಆಗಿದ್ದು, ವರಿಷ್ಠರು ಅಳೆದು ತೂಗಿ ಕೆ.ಎಚ್. ಮುನಿಯಪ್ಪ (K.H. Muniyappa) ಅವರ ಅಳಿಯ ಚಿಕ್ಕಪೆದ್ದಣ್ಣಗೆ ಕೋಲಾರ ಟಿಕೆಟ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದ್ದು, ರಮೇಶ್ ಕುಮಾರ್ (Ramesh Kumar) ಟೀಮ್ ಕೆರಳಿದೆ. ಅಲ್ಲದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಹೋಗಿದೆ. ಈ ಹಿನ್ನೆಲೆಯಲ್ಲಿ ಕ್ಷಣ ಕ್ಷಣಕ್ಕೂ ಕಾಂಗ್ರೆಸ್ಕೋಲಾರ ಟಿಕೆಟ್ ಕೋಲಾಹಲ ಸೃಷ್ಟಿಸುತ್ತಿದೆ. ಹೀಗಾಗಿ ಕೋಲಾರ ಟಿಕೆಟ್ ಕಗ್ಗಂಟು ಬಿಡಿಸಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅಖಾಡಕ್ಕಿಳಿದಿದ್ದು, ಇಂದು (ಮಾರ್ಚ್ 27) ರಾತ್ರಿ ಸಭೆ ಕರೆದಿದ್ದಾರೆ.
ಕೋಲಾರ ಟಿಕೆಟ್ಗಾಗಿ ಸಚಿವ ಕೆಎಚ್ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣದ ನಡುವೆ ಪೈಪೋಟಿ ನಡೆದಿದೆ. ಮುನಿಯಪ್ಪ ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಕೊಡಿಸಲು ಕಸರತ್ತು ನಡೆಸಿದ್ದರೆ, ಇದಕ್ಕೆ ರಮೇಶ್ ಕುಮಾರ್ ಬಣ ವಿರೋಧ ವ್ಯಕ್ತಪಡಿಸುತ್ತಿದೆ. ನಿನ್ನೆ(ಮಾರ್ಚ್ 26) ಮುನಿಯಪ್ಪ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದಾದ ಬೆನ್ನಲ್ಲೇ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಲು ಖರ್ಗೆ ಸಮ್ಮತಿಸಿದ್ದಾರೆ. ಇದರಿಂದ ರಮೇಶ್ ಕುಮಾರ್ ಬಣ ರೊಚ್ಚಿಗೆದ್ದಿದೆ.
ಇದನ್ನೂ ಓದಿ: ವಿಧಾನಪರಿಷತ್ ಸಭಾಪತಿ ಕಚೇರಿಯಲ್ಲಿ ಹೈಡ್ರಾಮಾ: ಕಾಂಗ್ರೆಸ್ ಸದಸ್ಯರ ರಾಜೀನಾಮೆ ಪ್ರಹಸನ
ಮುನಿಯಪ್ಪ ಅಳಿಯಗೆ ಟಿಕೆಟ್ ಖಚಿತವಾಗಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ಕೆರಳಿರುವ ರಮೇಶ್ ಕುಮಾರ್ ಟೀಮ್ ರಾಜೀನಾಮೆ ಬೆದರಿಕೆ ಅಸ್ತ್ರ ಪ್ರಯೋಗ ಮಾಡಿದೆ. ಹಾಲಿ ಎಂಎಲ್‌ಸಿ, ಹಾಲಿ ಶಾಸಕರು ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ. ತಮ್ಮ ಬೇಡಿಕೆಗೆ ಹೈಕಮಾಂಡ್ ಮಣಿಯದಿದ್ದರೆ ರಾಜೀನಾಮೆ ಕೊಡುತ್ತೇವೆ ಎಂದು ಕೋಲಾರ ಶಾಸಕರು ಬಹಿರಂಗವಾಗಿ ಹೇಳಿದ್ದಾರೆ.
ಎಂಎಲ್‌ಸಿಗಳಾದ ಅನಿಲ್ ಕುಮಾರ್, ನಜೀರ್ ಅಹ್ಮದ್, ಮಾಲೂರು ಶಾಸಕ ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಸೇರಿ ಪ್ರಮುಖ ಶಾಸಕರು, ಮುನಿಯಪ್ಪ ಅಳಿಯನಿಗೆ ಟಿಕೇಟ್ ನೀಡಿದರೆ ರಾಜೀನಾಮೆ ಕೊಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೋಲಾರ ಟಿಕೆಟ್ಗಾಗಿ ನಾಯಕ ನಡುವೆ ಅಸಮಾಧಾನ ತಾರಕ್ಕೇರಿದ ಬೆನ್ನಲ್ಲೇ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಇದಕ್ಕೆ ಒಂದು ಅಂತ್ಯ ಹಾಡಬೇಕೆಂದು ಇಂದು (ಮಾರ್ಚ್ 27) ರಾತ್ರಿ ಹೈ ವೋಲ್ಟೇಜ್ ಮೀಟಿಂಗ್ ಕರೆದಿದ್ದಾರೆ. ರಾತ್ರಿ 10 ಗಂಟೆಗೆ ಸಿಎಂ ನಿವಾಸದಲ್ಲಿ ಕೋಲಾರ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ಮೂಲಕ ಸಿಎಂ ಡಿಸಿಎಂ ಮತ್ತೊಂದು ಸುತ್ತಿನ ಸಂಧಾನ ಮಾತುಕತೆಗೆ ಮುಂದಾಗಿದ್ದಾರೆ. ಆದ್ರೆ, ಸಿಎಂ, ಡಿಸಿಎಂ ಸಂಧಾನಕ್ಕೆ ರಮೇಶ್ ಕುಮಾರ್ ಬಣ ಬಗ್ಗುತ್ತಾ? ಅಂತಿಮವಾಗಿ ಮುನಿಯಪ್ಪ ಅಳಿಯನಿಗೆ ಟಿಕೆಟ್ ಸಿಗುತ್ತಾ? ಅಥವಾ ಅಭ್ಯರ್ಥಿ ಬದಲಾಗ್ತಾರಾ? ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Wed, 27 March 24