ಬೆಂಗಳೂರು, ಜುಲೈ 12: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿನ ಕಾರಣಗಳ ಪರಾಮರ್ಶೆಗೆ ಕಾರಣಗಳನ್ನು ತಿಳಿಯಲು ಎಐಸಿಸಿ ರಚಿಸಿದ ಮಧುಸೂದನ್ ಮಿಸ್ತ್ರಿ ನೇತೃತ್ವದ ಸತ್ಯ ಶೋಧನಾ ಸಮಿತಿ ರಾಜ್ಯಕ್ಕೆ ಆಗಮಿಸಿದೆ. ಡಬಲ್ ಡಿಜಿಟ್ ಬಂದೇ ಬರುತ್ತೇವೆ ಎಂದು ತೊಡೆ ತಟ್ಟುತ್ತಿದ್ದ ಕಾಂಗ್ರೆಸ್ ನಾಯಕರು ಕೇವಲ 9 ಸೀಟಿಗೆ ಸೀಮಿತವಾಗಿದ್ದರು. ನಿರೀಕ್ಷಿತ ಗುರಿ ಮುಟ್ಟದ ಕಾಂಗ್ರೆಸ್ನ ಸೋಲಿನ ಹಿಂದಿನ ಅಸಲಿ ಕಾರಣಗಳನ್ನು ಪತ್ತೆ ಹಚ್ಚಲು ಮುಂದಾಗಿರುವ ಸತ್ಯ ಶೋಧನಾ ಸಮಿತಿ ಮುಂದೆ ಗಂಭೀರ ವಿಚಾರಗಳೇ ಪ್ರಸ್ತಾಪವಾಗಿವೆ. ಕೆಪಿಸಿಸಿಯಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಿರುವ ಮಧುಸೂದನ್ ಮಿಸ್ತ್ರಿ ಸಮಿತಿ ಲಿಖಿತ ರೂಪದಲ್ಲಿ ಎಐಸಿಸಿಗೆ ವರದಿ ನೀಡಲಿದೆ. ಗುರುವಾರ ನಡೆದ ಸಭೆಯಲ್ಲಿ ಸಿಡಬ್ಲ್ಯುಸಿ ಸದಸ್ಯರು, ಶಾಸಕರು, ಸಚಿವರು, ಹಿರಿಯ ನಾಯಕರು ಸಮಿತಿ ಮುಂದೆ ಹಾಜರಾಗಿ ತಮ್ಮ ತಮ್ಮ ಲೋಕಸಭಾ ಕ್ಷೇತ್ರದ ಸಮಸ್ಯೆ, ಲೋಪದೋಷ, ನಾಯಕರ ನಡವಳಿಕೆ ಬಗ್ಗೆಯೂ ಅಭಿಪ್ರಾಯ ತಿಳಿಸಿದ್ದಾರೆ.
ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಏಕಪಕ್ಷೀಯ ನಿರ್ಧಾರಗಳ ಬಗ್ಗೆಯೂ ಪ್ರಸ್ತಾಪವಾಗಿದೆ. ಅದುವೇ ಸೋಲಿಗೆ ಪ್ರಮುಖ ಕಾರಣವಾಯಿತು. ಕಾಂಗ್ರೆಸ್ ಎಂದರೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅಷ್ಟೇ ಅಲ್ಲ ಎಂದು ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೀಗೆ ಲೋಪದೋಷಗಳ ಸರಮಾಲೆಯೇ ಸಮಿತಿ ಮುಂದೆ ಪ್ರಸ್ತಾಪವಾಗಿದೆ. ಸಚಿವರು ತಮ್ಮ ತಮ್ಮ ಕ್ಷೇತ್ರದ ಸೋಲಿನ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಬಿಜೆಪಿ ಜೆಡಿಎಸ್ ಮೈತ್ರಿಯೇ ಲೋಕಸಭೆ ಹಿನ್ನಡೆಗೆ ಪ್ರಮುಖ ಕಾರಣ ಎಂದಿದ್ದಾರೆ.
ಇದನ್ನೂ ಓದಿ: ಅಭಿವೃದ್ಧಿಗೆ ಹಣವಿಲ್ಲ, ಸಿಎಂ ಹಿಂದೆ ಇರುವುದಕ್ಕೆ ನನಗೆ ಹಣ ಬಂದಿದೆ: ಸತ್ಯ ಒಪ್ಪಿಕೊಂಡ ಆರ್ಥಿಕ ಸಲಹೆಗಾರ ರಾಯರೆಡ್ಡಿ
ಇಂದು ಕೂಡ ಸತ್ಯ ಶೋಧನಾ ಸಮಿತಿ ಸೋಲಿನ ಪರಾಮರ್ಶೆ ಮುಂದುವರಿಸಲಿದೆ. ಇಂದು ಕೆಪಿಸಿಸಿ ಪದಾಧಿಕಾರಿಗಳು, 2024 ಲೋಕಸಭೆ ಅಭ್ಯರ್ಥಿಗಳು, ವಿಧಾನಸಭಾ ಅಭ್ಯರ್ಥಿಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು, ನಿಗಮಮಂಡಳಿ ಅಧ್ಯಕ್ಷರು, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳಿಗೆ ಸಮಯ ನಿಗದಿ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:38 am, Fri, 12 July 24