ಸುವರ್ಣಸೌಧದಲ್ಲಿ ಹಲ್ಲೆ ಯತ್ನ ಆರೋಪ: ಸಿಐಡಿ ವಿಚಾರಣೆ ಬಳಿಕ ಸಿಟಿ ರವಿ ಹೇಳಿದ್ದಿಷ್ಟು
ಸುವರ್ಣಸೌಧದಲ್ಲಿ ಪರಿಷತ್ ಸದಸ್ಯ ಸಿಟಿ ರವಿ ಮೇಲೆ ಹಲ್ಲೆ ಯತ್ನ ನಡೆದ ಆರೋಪದ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ. ಜನವರಿ 19 ರಂದು ನಡೆದ ಘಟನೆ ಸಂಬಂಧ ಸಿಟಿ ರವಿ ಅವರನ್ನು ಸಿಐಡಿ ವಿಚಾರಣೆಗೆ ಕರೆದಿತ್ತು. ವಿಚಾರಣೆಯ ಬಳಿಕ ಮಾತನಾಡಿದ್ದು ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.
ಬೆಂಗಳೂರು, ಜನವರಿ 09: ಸಿ.ಟಿ ರವಿ (CT Ravi) ವರ್ಸಸ್ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಮಾತಿನ ಯುದ್ಧದ ತನಿಖೆ ಚುರುಕುಗೊಂಡಿದೆ. ಪರಿಷತ್ನ ಬಿಜೆಪಿ ಸದಸ್ಯರಾದ ಎಸ್.ವಿ.ಸಂಕನೂರ್ ಮತ್ತು ಡಿಎಸ್ ಅರುಣ್ ಕಿಶೋರ್ ಕುಮಾರ್ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಸಿಐಡಿ ಕಚೇರಿಗೆ ಸಿ.ಟಿ.ರವಿ ವಿಚಾರಣೆಗೆ ಹಾಜರಾಗಿದ್ದರು. ಹಲ್ಲೆಗೆ ಯತ್ನಿಸಿದ್ದ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಹೇಳಿದ್ದಾರೆ.
ಸಿಐಡಿ ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಮೇಲಿನ ಹಲ್ಲೆ ಸಂಬಂಧ ಸಭಾಪತಿಗೆ ದೂರು ಕೊಟ್ಟಿದ್ದರು. ಈ ಬಗ್ಗೆ ತನಿಖೆ ನಡೆಸಲು ಸಭಾಪತಿ ಸೂಚಿಸಿದ್ದರು. ಸುವರ್ಣಸೌಧದ ಪಶ್ಚಿಮದ್ವಾರದ ಸಮೀಪ ಹಲ್ಲೆಗೆ ಯತ್ನಿಸಿದ್ದರು. ಪರಿಷತ್ ಸಭಾಂಗಣಕ್ಕೆ ತೆರಳುವಾಗ ಮತ್ತೆ ಹಲ್ಲೆಗೆ ಮುಂದಾಗಿದ್ದರು. ಈ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಸದನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಅಶ್ಲೀಲ ಪದದಿಂದ ನಿಂದಿಸಿದ್ರಾ ಸಿಟಿ ರವಿ? ಅಷ್ಟಕ್ಕೂ ಆಗಿದ್ದೇನು?
ಲಕ್ಷ್ಮಿ ಹೆಬ್ಬಾಳ್ಕರ್ ಅವರ ದೂರು ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಅದಕ್ಕೆ ಸಂಭವಿಸಿದ ಹಾಗೆ, ವ್ಯಾಪ್ತಿ ನಿರ್ಧಾರ ಮಾಡಿಲ್ಲ. ಅದು ಆಗಬೇಕು. ಅದಕ್ಕೆ ಕರೆದರೂ ಬರುತ್ತೇನೆ. ಈ ಘಟನೆ ನಡೆದಿದ್ದು ಹತ್ತೊಂಬತ್ತೆರಂದು. ಒಂದು ದೂರು ಕೊಟ್ಟಿದ್ದೇವೆ. ಅದಕ್ಕೆ ಇನ್ನೂ ಕೇಸ್ ದಾಖಲು ಮಾಡಿಲ್ಲ ಎಂದು ಹೇಳಿದ್ದಾರೆ.
ಡಿ.19ರಂದು ಸುವರ್ಣಸೌಧದಲ್ಲಿ ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನಿಸಲಾಗಿತ್ತು. ಪರಿಷತ್ ಸಭಾಪತಿಗೆ ಮೂವರು ಬಿಜೆಪಿ ಸದಸ್ಯರು ದೂರು ನೀಡಿದ್ದರು. ನಂತರ ಬೆಳಗಾವಿಯ ಹಿರೇಬಾಗೇವಾಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆನಂತರ ಹಿರೇಬಾಗೇವಾಡಿ ಠಾಣೆ ಕೇಸ್ ಸಿಐಡಿಗೆ ವರ್ಗಾವಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ಸಿ.ಟಿ.ರವಿಗೆ ಸಿಐಡಿ ನೋಟಿಸ್ ನೀಡಿತ್ತು.
ಇದನ್ನೂ ಓದಿ: ಮಾನವಹಕ್ಕುಗಳ ಆಯೋಗಕ್ಕೆ ಸಿಟಿ ರವಿ ದೂರು: ಡಿಕೆಶಿ, ಬಾದರ್ಲಿ, ಹೆಬ್ಬಾಳ್ಕರ್ ವಿರುದ್ಧ ಗಂಭೀರ ಆರೋಪ
ಜನವರಿ 6ರಂದು ಮೊದಲ ಬಾರಿಗೆ ಸಿ.ಟಿ.ರವಿಗೆ ದೂರು ನೀಡಿದ್ದ ಸಿಐಡಿ, ಮೊದಲ ನೋಟಿಸ್ ನೀಡಿದ್ದಾಗ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ 2ನೇ ಬಾರಿಗೆ ನೋಟಿಸ್ ಜಾರಿಮಾಡಿದ ಬೆನ್ನಲ್ಲೇ ಇಂದು ವಿಚಾರಣೆಗೆ ಹಾಜರಾಗಿದ್ದರು.
ದೂರುದಾರರಿಗೂ ವಿಚಾರಣೆಗೆ ಹಾಜರಾಗಲು ಸಿಐಡಿ ನೋಟಿಸ್
ಇನ್ನು ಈ ಪ್ರಕರಣದ ದೂರುದಾರರಿಗೂ ವಿಚಾರಣೆಗೆ ಹಾಜರಾಗಲು ಸಿಐಡಿ ನೋಟಿಸ್ ನೀಡಿದೆ. ದೂರುದಾರ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ್, ಡಿ.ಎಸ್. ಅರುಣ್ ಮತ್ತು ಕಿಶೋರ್ ಕುಮಾರ್ ಪುತ್ತೂರು ಅವರಿಗೆ ನೋಟಿಸ್ ನೀಡಲಾಗಿದ್ದು, ಇಂದು ಸಂಜೆ 4.30ಕ್ಕೆ ಸಿಐಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.