AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಗೆ ಮೈತ್ರಿ ಮುನಿಸಿನ ಸಂಕಷ್ಟ, ಕಾಂಗ್ರೆಸ್​ಗೆ ಬಣ ರಾಜಕೀಯದ ಬಿಸಿ: ಎಲ್ಲೆಲ್ಲಿ ಹೇಗಿದೆ ಸ್ಥಿತಿ? ಇಲ್ಲಿದೆ ವಿವರ

ಲೋಕಸಭೆ ಚುನಾವಣೆಗೆ ಜೆಡಿಎಸ್​ ಜತೆ ಮಾಡಿಕೊಂಡಿರುವ ಮೈತ್ರಿಯಿಂದ ಅಸಮಾಧನಗೊಂಡಿರುವ ಸ್ಥಳೀಯ ನಾಯಕರನ್ನು ಸಮಾಧಾನಪಡಿಸಿ ಚುನಾವಣೆಗೆ ಸಿದ್ಧಪಡಿಸುವ ಸವಾಲು ಬಿಜೆಪಿ ಹೈಕಮಾಂಡ್​ಗೆ ಎದುರಾಗಿದ್ದರೆ, ಅತ್ತ ಆಂತರಿಕ ಬೇಗುದಿ ಶಮನಗೊಳಿಸುವುದು ಕಾಂಗ್ರೆಸ್ ನಾಯಕರಿಗೆ ಸವಾಲಾಗಿ ಪರಿಣಮಿಸಿದೆ. ರಾಜ್ಯ ರಾಜಕೀಯದಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಸದ್ಯದ ಬಂಡಾಯದ ಬಿಸಿಗೆ ಸಂಬಂಧಿಸಿದ ವಿವರ ಇಲ್ಲಿದೆ.

ಬಿಜೆಪಿಗೆ ಮೈತ್ರಿ ಮುನಿಸಿನ ಸಂಕಷ್ಟ, ಕಾಂಗ್ರೆಸ್​ಗೆ ಬಣ ರಾಜಕೀಯದ ಬಿಸಿ: ಎಲ್ಲೆಲ್ಲಿ ಹೇಗಿದೆ ಸ್ಥಿತಿ? ಇಲ್ಲಿದೆ ವಿವರ
ಬಿಜೆಪಿಗೆ ಮೈತ್ರಿ ಮುನಿಸಿನ ಸಂಕಷ್ಟ, ಕಾಂಗ್ರೆಸ್​ಗೆ ಬಣ ರಾಜಕೀಯದ ಬಿಸಿ
ಕಿರಣ್​ ಹನಿಯಡ್ಕ
| Edited By: |

Updated on:Apr 09, 2024 | 11:07 AM

Share

ಬೆಂಗಳೂರು, ಏಪ್ರಿಲ್ 9: ಲೋಕಸಭಾ ಚುನಾವಣೆಗೆ (Lok Sabha Elections) ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದು ಇದೀಗ ಬಿಜೆಪಿ ಹೈಕಮಾಂಡ್​ಗೆ (BJP Highcommand) ತಲೆಬಿಸಿ ತಂದೊಡ್ಡಿದೆಯೇ ಎಂಬ ಪ್ರಶ್ನೆ ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳಿಂದಾಗಿ ಮೂಡಿದೆ. ರಾಜ್ಯ ನಾಯಕರ ಗಮನಕ್ಕೆ ತಾರದೆ ಏಕಾಏಕಿ ಬಿಜೆಪಿ ಹೈಕಮಾಂಡ್ ಜೆಡಿಎಸ್ ಜೊತೆ ಮೈತ್ರಿ (BJP JDS Alliance) ಮಾಡಿಕೊಂಡಿದೆ ಎಂದು ಹೇಳಲಾಗಿತ್ತು. ಅದರ ಪರಿಣಾಮ ಈಗ ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ಕಾಣಿಸತೊಡಗಿದೆ. ಹೈಕಮಾಂಡ್ ಸೂಚನೆ ಹೊರತಾಗಿಯೂ, ಮೈತ್ರಿ ನಡುವೆ ಸಮನ್ವಯ ಸಾಧಿಸಲು ಹಲವು ಸಭೆಗಳನ್ನು ನಡೆಸಿದ ನಂತರವೂ ಉಭಯ ಪಕ್ಷದ ತಳ ಮಟ್ಟದ ನಾಯಕರಲ್ಲಿ ಒಮ್ಮತ ಮೂಡಿರುವುದು ಕಾಣಿಸುತ್ತಿಲ್ಲ.

ಮೈತ್ರಿಯಾದ ಕ್ಷೇತ್ರಗಳಲ್ಲಿ ನಿಜವಾಗಿಯೂ ಬಿಜೆಪಿ-ಜೆಡಿಎಸ್ ತಳ ಮಟ್ಟದ ಮೈತ್ರಿ ಬಗ್ಗೆ ಅನುಮಾನ ಮೂಡುವಂತಿದೆ ಸದ್ಯದ ಪರಿಸ್ಥಿತಿ. ಇದರಿಂದಾಗಿ ಅಪನಂಬಿಕೆಯಲ್ಲೇ ಮೈತ್ರಿ ಮುನ್ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ರಾಜ್ಯ ನಾಯಕರ ಆಪ್ತರಿಂದಲೇ ಮೈತ್ರಿ ಪಾಲನೆ ಇಲ್ಲ!

ಬಿಜೆಪಿಯ ರಾಜ್ಯದ ಪ್ರಮುಖ ನಾಯಕರ ಆಪ್ತರೇ ಮೈತ್ರಿಯನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ವಿವಿಧ ಕಡೆಗಳಲ್ಲಿ ಜಿಲ್ಲಾ ಮಟ್ಟದ ನಾಯಕರು ವರಿಷ್ಠರ ಸೂಚನೆಯನ್ನು ಪಾಲಿಸದೆ ಅವರಷ್ಟಕ್ಕೆ ಕಾರ್ಯನಿರ್ವಹಿಸುತ್ತಿದ್ದಾರೆ. ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಅಗರ್​ವಾಲ್ ಅವರ ಸಂಧಾನದ ಹೊರತಾಗಿಯೂ ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರಕ್ಕೆ ಮಾಜಿ ಶಾಸಕ ಪ್ರೀತಂ ಗೌಡ ಒಪ್ಪಿಲ್ಲ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಕೈ ಜೋಡಿಸಿಲ್ಲ ಪ್ರೀತಂ ಗೌಡ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ‌ ವಿಜಯೆಂದ್ರ ಅತ್ಯಾಪ್ತ ಬಳಗದಲ್ಲಿದ್ದರೂ ಪ್ರೀತಂ ಗೌಡ ಮನವೊಲಿಸಲು ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಅಗರವಾಲ್ ಪರದಾಟ ಪಡುವಂತಾಗಿದೆ.

ಮತ್ತೊಂದೆಡೆ ಮಂಡ್ಯ ಹಾಲಿ ಸಂಸದೆ ಸುಮಲತಾರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೂ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಹೆಚ್​​ಡಿ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಅವರಿಗೆ ಇನ್ನೂ ಜವಾಬ್ದಾರಿ ವಹಿಸಿಲ್ಲ.

ಕಾಂಗ್ರೆಸ್​ಗೆ ಬಣ ರಾಜಕೀಯದ ಬಿಸಿ

ಬಿಜೆಪಿಗೆ ಮೈತ್ರಿ ಸಂಕಟ ಒಂದೆಡೆಯಾದರೆ, ಇತ್ತ ಕಾಂಗ್ರೆಸ್ಸಿಗೆ ಆಂತರಿಕ ಭಿನ್ನಮತ, ಬಂಡಾಯವೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬಾಗಲಕೋಟೆಯಲ್ಲಿ ಟಿಕೆಟ್ ವಂಚಿತ ವೀಣಾ ಕಾಶಪ್ಪನವರ್ ಮನವೊಲಿಸುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದರೂ ಇತರ ಕ್ಷೇತ್ರಗಳಲ್ಲಿ ಅಸಮಾಧಾನದ ಬೆಂಕಿ ಪೂರ್ಣವಾಗಿ ಶಮನವಾಗಿಲ್ಲ. ಚಿಕ್ಕಬಳ್ಳಾಪುರದಲ್ಲಿ ರಕ್ಷಾ ರಾಮಯ್ಯಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ, ಟಿಕೆಟ್ ಆಕಾಂಕ್ಷಿಗಳಾಗಿದ್ದ ಶಿವಶಂಕರ ರೆಡ್ಡಿ ಮತ್ತು ವೀರಪ್ಪ ಮೊಯ್ಲಿ ಮೌನದ ಮೊರೆ ಹೋಗಿದ್ದಾರೆ. ಪ್ರಚಾರ ಕಣದಲ್ಲಿ ಇವರಿಬ್ಬರೂ ಸಕ್ರಿಯವಾಗಿ ಕಾಣಿಸುತ್ತಿಲ್ಲ.

ಇದನ್ನೂ ಓದಿ: ಏಕಾಏಕಿ ಕೆಪಿಸಿಸಿ ಕಚೇರಿಗೆ ಬಂದು ಡಿಕೆಶಿ ಮುಂದೆ ಕಣ್ಣೀರಿಟ್ಟ ಬಿಜೆಪಿ ನಾಯಕ ಯೋಗೇಶ್ವರ್ ಪುತ್ರಿ

ಮತ್ತೊಂದು ಕಡೆ ಕೋಲಾರದಲ್ಲಿ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಸಿಗದೇ ನಿರಾಶರಾಗಿರುವ ಸಚಿವ ಮುನಿಯಪ್ಪ ಕೂಡ ಅಸಮಾಧಾನಗೊಂಡಿದ್ದಾರೆ. ಇದು ಚುನಾವಣೆಯ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂಬುದನ್ನು ಕಾದು ನೋಡಬೇಕಿದೆ. ಸಿಎಂ ಸಿದ್ದರಾಮಯ್ಯ ತವರು ವರುಣಾ ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಚಾಮರಾಜನಗರ ಕ್ಷೇತ್ರದಲ್ಲಿ ಅತೃತರನ್ನು ಒಲಿಸಿಕೊಂಡು ಸುನಿಲ್ ಬೋಸ್​​ಗೆ ಟಿಕೆಟ್ ನೀಡುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ. ಅದಾಗ್ಯೂ ಕೆಲವು ಕಡೆ ‘ಸುನಿಲ್ ಬೋಸ್ ಗೋ ಬ್ಯಾಕ್’ ಭಿತ್ತಿಪತ್ರಗಳು ಕಾಣಿಸಿಕೊಂಡಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:31 am, Tue, 9 April 24