
ಬೆಂಗಳೂರು, ಮೇ,30: ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯ ಬಗ್ಗೆ ಸತೀಶ್ ಜಾರಕಿಹೊಳಿ ಅವರು ಮಾತನಾಡಿದ್ದಾರೆ. “ಇವತ್ತಿನ ಸಿಎಲ್‌ಪಿ ಸಭೆಯದ್ದು ಕೇವಲ ಒನ್‌ಲೈನ್ ಅಜೆಂಡಾ (One-line Agenda), ಅದರಲ್ಲಿ ಎರಡನೇ ಮಾತಿಲ್ಲ. ಡಿ.ಕೆ. ಶಿವಕುಮಾರ್ ಅವರೇ ನೂತನ ಮುಖ್ಯಮಂತ್ರಿಯಾಗುವುದು ನೂರಕ್ಕೆ ನೂರರಷ್ಟು ಪಕ್ಕಾ ಆಗಿದೆ” ಎಂದು ಪ್ರಭಾವಿ ನಾಯಕ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅಧಿಕೃತವಾಗಿ ಘೋಷಿಸಿದ್ದಾರೆ. ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಒಳಗಿನ ಪ್ರಮುಖ ಬೆಳವಣಿಗೆಗಳ ಸುಳಿವು ನೀಡಿದರು.
ಸಿದ್ದರಾಮಯ್ಯ ಅವರ ರಾಜೀನಾಮೆಯ ನಂತರದ ಮುಂದಿನ ಪ್ರಕ್ರಿಯೆಗಳ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, “ಸಿದ್ದರಾಮಯ್ಯನವರೇ ಈಗಾಗಲೇ ಎಲ್ಲವನ್ನೂ ಅನೌನ್ಸ್ ಮಾಡಿದ್ದಾರೆ. ಡಿಕೆಶಿ ಸಿಎಂ ಆಗುವುದು ಖಚಿತವಾಗಿರುವುದರಿಂದ, ಪ್ರಮಾಣ ವಚನ ಸ್ವೀಕಾರದ ನಿಖರವಾದ ಸಮಯ ಮತ್ತು ಸ್ಥಳವನ್ನು ನಿಗದಿಪಡಿಸುವ ಸಲುವಾಗಿಯೇ ನಾಯಕರು ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಾ. ಜಿ. ಪರಮೇಶ್ವರ್ ಅವರ ಹೆಸರು ಕೇಳಿಬರುತ್ತಿರುವ ಹಾಗೂ ತಮಗೂ ಅಧ್ಯಕ್ಷ ಪಟ್ಟದ ಜೊತೆಗೆ ಸಚಿವ ಸ್ಥಾನ ಸಿಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಯಾವುದೇ ದೊಡ್ಡ ಪೋಸ್ಟ್ ಇದ್ದರೂ ಅಲ್ಲಿ ಎರಡು ಮೂರು ಹೆಸರುಗಳು ಚರ್ಚೆಯಲ್ಲಿ ಇರುವುದು ಸಹಜ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಹೊಸ ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ಬಿಡಬೇಕು ಎಂಬುದನ್ನು ಎಐಸಿಸಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಕ್ಯಾಬಿನೆಟ್‌ನಲ್ಲಿ ಹಳಬರು ಮತ್ತು ಹೊಸಬರು ಇಬ್ಬರೂ ಇರಬೇಕಾಗುತ್ತದೆ” ಎಂದರು.
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ಗೆ ಮತ್ತೊಂದು ಹೆಸರು ಸಪ್ರೈಸ್ ಎಂಟ್ರಿ: ಸತೀಶ್ಗೆ ಮುಳುವಾಗುತ್ತಾ 2 ಸ್ಥಾನಗಳ ಬೇಡಿಕೆ?
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಯಾವ ದೊಡ್ಡ ಜವಾಬ್ದಾರಿ ನೀಡಲಾಗುತ್ತದೆ ಎಂಬ ಕುರಿತು ಮಾತನಾಡಿದ ಸಚಿವರು, “ಸಿದ್ದರಾಮಯ್ಯ ಅವರಿಗೆ ಹುದ್ದೆ ನೀಡುವ ವಿಚಾರವಾಗಿ ಇಂದಿನ ಶಾಸಕಾಂಗ ಪಕ್ಷದ (CLP) ಸಭೆಯಲ್ಲೇ ಪ್ರಮುಖ ತೀರ್ಮಾನ ಕೈಗೊಳ್ಳಲಾಗುತ್ತದೆ. ಇನ್ನು ಎರಡು ಮೂರು ದಿನಗಳಲ್ಲಿ ಎಲ್ಲವೂ ಸಂಪೂರ್ಣವಾಗಿ ಸ್ಪಷ್ಟವಾಗಲಿದ್ದು, ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ” ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:01 pm, Sat, 30 May 26