ಚುನಾವಣಾ ನಿವೃತ್ತಿಗೆ ಹೈಕಮಾಂಡ್ ಸೂಚನೆ: ಯಡಿಯೂರಪ್ಪ ಹೇಳಿಕೆಗೆ ಡಿವಿ ಸದಾನಂದಗೌಡ ಹೇಳಿದ್ದೇನು?

ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸುವಂತೆ ಮಾಜಿ ಕೇಂದ್ರ ಸಚಿವ, ಬಿಜೆಪಿ ಸಂಸದ ಡಿವಿ ಸದಾನಂದ ಗೌಡ ಅವರಿಗೆ ಹೈಕಮಾಂಡ್ ಸೂಚನೆ ಕೊಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸದಾನಂದಗೌಡ, ಯಡಿಯೂರಪ್ಪ ಹೇಳಿರುವುದು ನನಗೆ ಗೊತ್ತಿಲ್ಲ. ಆ ರೀತಿ ಸಾಧ್ಯವೇ ಇಲ್ಲ ಎಂದಿದ್ದಾರೆ.

ಚುನಾವಣಾ ನಿವೃತ್ತಿಗೆ ಹೈಕಮಾಂಡ್ ಸೂಚನೆ: ಯಡಿಯೂರಪ್ಪ ಹೇಳಿಕೆಗೆ ಡಿವಿ ಸದಾನಂದಗೌಡ ಹೇಳಿದ್ದೇನು?
ಡಿವಿ ಸದಾನಂದಗೌಡ ಮತ್ತು ಬಿಎಸ್ ಯಡಿಯೂರಪ್ಪImage Credit source: FILE PHOTO/PTI
Follow us
ಪ್ರಶಾಂತ್​ ಬಿ.
| Updated By: Rakesh Nayak Manchi

Updated on: Nov 09, 2023 | 2:56 PM

ಮಂಡ್ಯ, ನ.9: ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸುವಂತೆ ನನಗೆ ಯಾರೂ ಸೂಚನೆ ಕೊಟ್ಟಿಲ್ಲ ಎಂದು ಮಾಜಿ ಕೇಂದ್ರ ಸಚಿವ, ಬಿಜೆಪಿ ಸಂಸದ ಡಿ.ವಿ.ಸದಾನಂದಗೌಡ (D.V.Sadananda Gowda) ಸ್ಪಷ್ಟನೆ ನೀಡಿದ್ದಾರೆ. ನಿವೃತ್ತಿ ಘೋಷಿಸುವಂತೆ ಸದಾನಂದ ಗೌಡ ಅವರಿಗೆ ಹೈಕಮಾಂಡ್ ಸೂಚನೆ ಕೊಟ್ಟಿದೆ ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಹೇಳಿರುವುದು ನನಗೆ ಗೊತ್ತಿಲ್ಲ. ಆ ರೀತಿ ಸಾಧ್ಯವೇ ಇಲ್ಲ ಎಂದರು.

ಮಂಡ್ಯದ ಮದ್ದೂರಿನಲ್ಲಿ ಮಾತನಾಡಿದ ಅವರು, ನಾನು ಮೊನ್ನೇ ದೆಹಲಿಗೆ ಹೋಗುವಾಗಲೂ ಸಹಾ ಯಡಿಯೂರಪ್ಪ ಅವರ ಬಳಿ ಚರ್ಚೆ ಮಾಡಿದ್ದೇನೆ. ರಾಜಕೀಯ ‌ನಿವೃತ್ತಿ ಆದರೆ ನಿನ್ನೆ ಇವತ್ತು ಯಾಕೆ ಬರ ಅಧ್ಯಯನ ‌ಮಾಡಬೇಕು? ಸದಾನಂದಗೌಡ ನಡೆ ಸಂಶಯ ನಡೆ ಅಲ್ಲ. ನನ್ನ ಮೇಲೆ ಯಾರು ಒತ್ತಡ ಮಾಡಲು ಸಾಧ್ಯವಿಲ್ಲ. ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಒತ್ತಡದ ಆಧಾರದ ಮೇಲೆ ರಾಜಕಾರಣ ಮಾಡಿಲ್ಲ. ಹೇಳುವುದನ್ನ ನೇರವಾಗಿ ಹೇಳುತ್ತೇನೆ ಎಂದರು.

ಇದನ್ನೂ ಓದಿ: ಚುನಾವಣಾ ರಾಜಕೀಯ ನಿವೃತ್ತಿಗೆ ಹೈಕಮಾಂಡ್​ ಸೂಚನೆ ಕೊಟ್ಟಿದ್ಯಾ? ಈ ಬಗ್ಗೆ ಸದಾನಂದಗೌಡ, ಬಿಎಸ್​ವೈ ಹೇಳಿದ್ದಿಷ್ಟು

ಹೈಕಮಾಂಡ್ ಅಭ್ಯರ್ಥಿಗಳ ಅಯ್ಕೆ ಬಗ್ಗೆ ಇದುವರೆಗೂ ಯಾವುದೇ ಮಾತುಕತೆ ಮಾಡಿಲ್ಲ. ನಾನು ಪಕ್ಷಕ್ಕೆ ಮಾತ್ರ ಕೆಲಸ ಮಾಡಬೇಕು ಅಂದುಕೊಂಡಿದ್ದೇನೆ. ಜವಬ್ದಾರಿ ಬೇಡ ಅಂತಾನೇ ಹೋಗಿರುವುದು. ಬೇರೆ ರಾಜಕಾರಣಿಗಳ ತಟ್ಟೆಯಲ್ಲಿ ನನ್ನನ್ನು ತೂಗಬಾರದು. ನನ್ನನ್ನ ಪ್ರತ್ಯೇಕ ತಟ್ಟೆಯಲ್ಲಿ ತೂಗಬೇಕು. ಯಾವತ್ತು ತಪ್ಪು ಹೆಜ್ಜೆ ಇಟ್ಟಿಲ್ಲ ಎಂದರು.

ರಾಜಕಾರಣದಲ್ಲಿ ಸ್ವಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ: ಡಿವಿಎಸ್

ರಾಜಕಾರಣದಲ್ಲಿ ಸ್ವಾರ್ಥಿಗಳ ಸಂಖ್ಯೆ ಜಾಸ್ತಿಯಾಗಿದೆ ಎಂದು ಸದಾನಂದಗೌಡ ಹೇಳಿದ್ದಾರೆ. ಶವಯಾತ್ರೆವರೆಗೂ ರಾಜಕೀಯದಲ್ಲಿ ಇರಬೇಕು ಎಂಬ ಭಾವನೆ ಇದೆ. ರಾಜಕಾರಣದಲ್ಲಿ 40 ವರ್ಷಕ್ಕಿಂತ ಕೆಳಗಿನವರು ಶೇಕಡಾ 60 ರಷ್ಟಿದ್ದಾರೆ. ಹೊಸಬರು ಜಪ್ರತಿನಿಧಿಗಳು ಆಗಲಿ, ನನಗೆ ಎಲ್ಲಾ ಅವಕಾಶ ಸಿಕ್ಕಿದೆ. ಮುಂದೆ ನನಗೆ ಲೋಕಸಭಾ ಟಿಕೆಟ್ ಸಿಗಲ್ಲ ಎಂಬ ಆತಂಕ ಇಲ್ಲ. 2019ರಲ್ಲೇ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಅಂತಾ ನಾನು ಹೇಳಿದ್ದೆ. ನನ್ನ ಕ್ಷೇತ್ರದಲ್ಲಿ ಒಬ್ಬನೇ ಒಬ್ಬ ನಾನು ಸರಿ ಇಲ್ಲ ಎಂದು ಹೇಳಿಲ್ಲ ಎಂದರು.

ಬೆಂಗಳೂರು ಉತ್ತರ ಕ್ಷೇತ್ರದಿಂದ ಮಂಡ್ಯದ ಸಂಸದೆ ಸುಮಲತಾ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಸುಮಲತಾ ಸ್ಪರ್ಧೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈವರೆಗೂ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಯಾರೂ ಟವೆಲ್ ಹಾಕಿಲ್ಲ. ನಾನು ನಿವೃತ್ತಿ ಹೇಳಿದ್ದು ಚುನಾವಣಾ ರಾಜಕಾರಣಕ್ಕೆ ಅಷ್ಟೇ ಎಂದರು.

ಇದನ್ನೂ ಓದಿ: ಸದಾನಂದ ಗೌಡ ಚುನಾವಣಾ ರಾಜಕೀಯದಿಂದ ನಿವೃತ್ತಿ; ಹಾಸನದಲ್ಲಿ ಘೋಷಣೆ

ಬರ ಅಧ್ಯಯನ ಕುರಿತು ಹೇಳಿಕೆ ನೀಡಿದ ಸದಾನಂದಗೌಡ, ಕಳೆದ ಮೂರು ದಿನಗಳಿಂದ ಮಂಡ್ಯದಲ್ಲಿ ಮಳೆ ಬರುತ್ತಿದೆ. ಬಿಜೆಪಿ ಬರ ಅಧ್ಯಯನ ಬರುತ್ತೆ ಅಂತಾ ಮಳೆ ತಂಪು ಮಾಡಿದೆ. ಮಂಡ್ಯದಲ್ಲಿ ಚಿರತೆ ದಾಳಿ ಹೆಚ್ಚಳ ಇದೆ. ಮನೆಯಿಂದ ಹೊರಗೆ ಬರಲು ಹೆದರುವಂತ ಪರಿಸ್ಥಿತಿ ಇದೆ. ನಾವು ಗಲಾಟೆ ಮಾಡಿದ ಮೇಲೆ ಹಗಲು ಹೊತ್ತಿನಲ್ಲಿ ಕರೆಂಟ್ ಕೊಡುತ್ತಿದ್ದಾರೆ. ಕಣ್ಣೋರಿಸುವ ತಂತ್ರ ನಡೆಯುತ್ತಿದೆ. ಮಂಡ್ಯದಲ್ಲಿ ಈ ಪರಿಸ್ಥಿತಿ ಇದೆ. ಇನ್ನು ಬೇರೆ ಕಡೆ ಹೇಗೆ ಎಂದು ಪ್ರಶ್ನಿಸಿದರು.

ಅಕ್ಕಿ ಬೆಳೆಸುವ ರೈತರ ಬಗ್ಗೆ ಕಾಳಜಿ ಇಲ್ಲದ ಕಾಂಗ್ರೆಸ್ ಸರ್ಕಾರ, ಎರಡು ಮೂರು ಪಟ್ಟು ವಿದ್ಯುತ್ ಬಿಲ್, ಸಣ್ಣ ಗೂಡು ಅಂಗಡಿಯನ್ನ ಕಮರ್ಷಿಯಲ್ ಅಂತಾ ಮಾಡಿ ಲೂಟಿ ಮಾಡುತ್ತಿದೆ. ಭ್ರಷ್ಟಾಚಾರದಲ್ಲಿ ಲೂಟಿ ಮಾಡುವುದು ನಡೆಯುತ್ತಿದೆ. ರೈತರು ಬಿತ್ತನೆ ಮಾಡಿ ಒಂದು ಖರ್ಚು ಸಹಾ ಬರಲ್ಲ ಎಂದರು.

ಕೃಷಿ ಸಚಿವರಿಗೆ ಮಂಡ್ಯದ ಸಮಸ್ಯೆ ಗೊತ್ತಿಲ್ಲ. ಅವರು ಇರುವುದು ಬೆಂಗಳೂರಿನಲ್ಲಿ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಕಿಸಾನ್ ಸಮ್ಮಾನ್ ಯೋಜನೆ ಅಡಿ ನಾಲ್ಕು ಸಾವಿರವನ್ನು ರೈತರಿಗೆ ‌ಕೊಡುವುದು ನಿಲ್ಲಿಸಿದ್ದಾರೆ. ಇಂತಹ ಸರ್ಕಾರ ಬೇಕಾ ಎಂದು ಕೇಳಿದರು.

ನಾವು ನಾಟಕ ‌ಮಾಡುತ್ತಿದ್ದೇವೆ ಕಾಂಗ್ರೆಸ್ ಸರ್ಕಾರ ಆರೋಪ ಮಾಡಬಾರದು. ಮಂಡ್ಯಕ್ಕೆ ಶೋ ಮಾಡಲು ಬಂದಿಲ್ಲ. ನಾವು ಕೂಡ ಕೇಂದ್ರದ‌ ಮೇಲೆ ಹಣ ಬಿಡುಗಡೆಗೆ ಒತ್ತಡ ಹಾಕುತ್ತೇವೆ. ರೈತರು ಬೀದಿಗೆ ಇಳಿಯುವ ಪರಿಸ್ಥಿತಿ ನಿರ್ಮಾಣ ಆಗಬಾರದು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ