ಬೆಂಗಳೂರು, ಏಪ್ರಿಲ್ 15: ರಾಜ್ಯದ ಹಣ ಲೂಟಿಯಾಗುತ್ತಿದೆ. ಕಾಂಗ್ರೆಸ್ ಸರ್ಕಾರ (Congress Government) ಜನರ ತಲೆ ಮೇಲೆ ಸಾಲದ ಹೊರೆ ಹೊರಸುತ್ತಿದೆ. ಗ್ಯಾರಂಟಿಗಳಿಗೆ ಮಾರುಹೋಗಿ ದಾರಿ ತಪ್ಪಬೇಡಿ ಎಂದಿದ್ದೇನೆ. ದಾರಿ ತಪ್ಪುವುದು ಎಂಬ ಪದ ಅಶ್ಲೀಲನಾ? ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸ್ತೇನೆ ಎಂದು ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂಬ ತಮ್ಮ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ವಿಷಾದ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತುಮಕೂರಿನಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದಾಗ, ಹಲವಾರು ವಿಚಾರ ಪ್ರಸ್ತಾಪ ಮಾಡಿದೆ. ಈ ಸಂದರ್ಭದಲ್ಲಿ ನಾನು ನಾಡಿನ ಮಹಿಳೆಯರಿಗೆ ಅಪಮಾನ ಮಾಡಿದ್ದೇನೆ ಅಂತ ಕಾಂಗ್ರೆಸ್ನವರು ಆರೋಪ ಮಾಡುತ್ತಿದ್ದಾರೆ.
ಪಿಕ್ ಪಾಕೆಟ್ ಮಾಡಿ, ಗ್ಯಾರಂಟಿ ಎರಡು ಸಾವಿರ ಕೊಟ್ಟಿದ್ದಾರೆ. ಅದಕ್ಕೆ ದಾರಿ ತಪ್ಪಬೇಡಿ ಅಂತ ಹೇಳಿದ್ದೇನೆ. ನನ್ನ ಅವಧಿಯಲ್ಲಿ ಸಾರಾಯಿ ನಿಷೇಧ ಮಾಡಿದೆ. ಮಹಿಳೆಯರಿಗೆ ಗೌರವ ಕೊಡಲು ನಾನು ಸಾರಾಯಿ ನಿಷೇಧ ಮಾಡಿದ್ದು ತಪ್ಪಾ. ಹೌದು, ನಾನು ದಾರಿತಪ್ಪಿದ್ದೆ, ಅದನ್ನು ಈ ಹಿಂದೆಯೇ ಸದನದಲ್ಲೇ ಹೇಳಿದ್ದೇನೆ. ನನ್ನ ಪತ್ನಿ ನನ್ನನ್ನು ತಿದ್ದಿದ್ದಾಳೆ ಎಂದರು.
ಕೆಲವು ಕುಟುಂಬದ ಹೆಣ್ಣು ಮಕ್ಕಳನ್ನು ಅಪಹರಿಸಿ, ಜಮೀನು ಬರೆಸಿಕೊಂಡಾಗ ಅವರಿಗೆ ಕಣ್ಣೀರು ಬರಲಿಲ್ಲ. ಡಿಕೆ ಶಿವಕುಮಾರ್ ಅವರೇ, ನಿಮ್ಮ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬಿಜೆಪಿ ಸಂಸದೆ ಹೇಮಾ ಮಾಲಿನಿ ಬಗ್ಗೆ ಅಶ್ಲೀಲ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯನ್ನು ಕನ್ನಡದಲ್ಲಿ ಹೇಳಲು ಸಾಧ್ಯವಿಲ್ಲ. ಹೇಮಾ ಮಾಲಿನಿಗೆ ಬಿಜೆಪಿ ಟಿಕೆಟ್ ಕೊಟ್ಟಿರುವುದು ಲಿಫ್ ಮಾಡಲಿಕ್ಕೆ ಅಂತ ಸುರ್ಜೆವಾಲ ಹೇಳಿದ್ದಾರೆ. ಇದು ಅತ್ಯದ್ಭುತ ಹೇಳಿಕೆ ಅಲ್ಲವೇ ಡಿಕೆ ಶಿವಕುಮಾರ್ ಅವರೇ ಎಂದು ಪ್ರಶ್ನಿಸಿದರು.
ಕಂಗನ ರಾವತ್ ಅವರಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಮಹಿಳೆಯರಿಗೆ ರೆಟ್ ಫಿಕ್ಸ್ ಮಾಡಿದ್ರಿ ಅಂತ ಹೇಳಿದ್ರಿ. ಇದಕ್ಕೆ ನಿಮ್ಮ ಸೋನಿಯ ಗಾಂಧಿ ಏನು ಹೇಳುತ್ತಾರೆ. ವಿಧಾನಸಭೆ ಕಲಾಪದಲ್ಲಿ ರಮೇಶ್ ಕುಮಾರ್ ಅತ್ಯಾಚಾರ ಅನಿವಾರ್ಯವಾದರೆ ಆನಂದಿಸಿ ಎಂದು ಹೇಳಿದ್ದರು. ರಮೇಶ್ ಕುಮಾರ್ ಹೇಳಿದ್ದನ್ನ ನೀವು ಮರೆತು ಬಿಟ್ರಾ? ಶಾಮನೂರು ಶಿವಶಂಕರಪ್ಪನವರು ಇತ್ತೀಚೆಗೆ ಹೆಣ್ಮಕ್ಕಳು ಅಡುಗೆ ಮನೆಯಿಂದ ಹೊರಬರಬಾರದು ಅಂದರು. ನಿಮ್ಮ ಪಕ್ಷದವರ ಹೇಳಿಕೆ ಕುರಿತು ನೂರಾರು ನಿದರ್ಶನಗಳನ್ನು ಕೊಡಬಲ್ಲೆ. ನಿಮ್ಮಿಂದ ನಾನು ಕಲಿಯಬೇಕಾ? ಮಹಿಳಾ ಆಯೋಗಕ್ಕೂ ಕಾಂಗ್ರೆಸ್ನವರು ದೂರು ನೀಡಿದ್ದಾರಂತೆ. ನನಗೆ ನೋಟಿಸ್ ಕೊಡಲಿ ನಾನು ಉತ್ತರ ಕೊಡುತ್ತೇನೆ ಎಂದರು.
ಇದನ್ನೂ ಓದಿ: ನಾನೆ ಮುಂದಿನ ಒಕ್ಕಲಿಗರ ನಾಯಕ: ಪರೋಕ್ಷವಾಗಿ ಡಿಕೆ ಶಿವಕುಮಾರ್ ಹೇಳಿಕೆ, ಕುಮಾರಸ್ವಾಮಿ, ದೇವೇಗೌಡಗೆ ಗುದ್ದು
ಸಾವಿರ ಎಕರೆ ಭೂಮಿ ಇದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆ ಪ್ರತಿಕ್ರಿಯಿಸಿದ ಅವರು, ನನ್ನದು 48 ಎಕರೆ ಭೂಮಿ ಇದೆ. ರಾಜಕಾರಣಕ್ಕೂ ಬರುವ ಮೊದಲೇ ನಾನು ಆಸ್ತಿ ಖರೀದಿಸಿದ್ದೆ. ಚಿತ್ರರಂಗದಲ್ಲಿ ನಿರ್ಮಾಪಕ, ಹಂಚಿಕೆದಾರನಾಗಿದ್ದಾಗ ಆಸ್ತಿ ಖರೀದಿ ಮಾಡಿದ್ದೇನೆ. ಬಂದು ನೋಡಪ್ಪ. 50 ಟನ್ ಕಲ್ಲಂಗಡಿ ಬೆಳೆದಿದ್ದೇನೆ, ವಿಡಿಯೋ ಮಾಡಿದ್ದೇನೆ. 55 ಲಕ್ಷ ಮೌಲ್ಯದ ಬಾಳೆ ಹಣ್ಣು ಬೆಳೆದಿದ್ದೇನೆ. 20 ಟನ್ ಕೊಬ್ಬರಿ ಬೆಳೆದು ಸ್ಟಾಕ್ ಇಟ್ಟಿದ್ದೇನೆ. ನಾನು ಬೆಳೆದ ಬೆಳೆಯ ಎಲ್ಲ ವಿಡಿಯೋ ಮಾಡಿಟ್ಟಿದ್ದೇನೆ. ಕಷ್ಟಪಟ್ಟು ದುಡಿದು ಹಣ, ಆಸ್ತಿ ಸಂಪಾದನೆ ಮಾಡಿದ್ದೇನೆ ಎಂದು ತಿರುಗೇಟು ನೀಡಿದರು.
ಇವತ್ತು ನನ್ನ ವಿರುದ್ಧ ಮಂಡ್ಯದಲ್ಲಿ ಗೋ ಬ್ಯಾಕ್ ಮಾಡುತ್ತಿದ್ದಾರೆ. ಇದಕ್ಕೆ ನಾನು ಹೆದರಿಕೊಳ್ಳಬೇಕಾ?ಅಪಾರ್ಟ್ಮೆಂಟ್ಗೆ ಎನ್ಓಸಿ ನೀಡಬೇಕಾದರೆ ನನ್ನ ತಮ್ಮನಿಗೆ ಮತ ಹಾಕಿ, ನೀರು ಕೊಡಬೇಕಾದರೆ ತಮ್ಮನಿಗೆ ಮತ ಹಾಕಿ ಅಂತ ಹೇಳುತ್ತಿದ್ದಾರೆ. ಕಾಂಗ್ರೆಸ್ ಮಹಿಳಾ ಮಣಿಯರಿಗೆ ನೋವು ಆಗಿದ್ದರೆ ಕ್ಷಮೆ ಕೇಳುತ್ತೇನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:45 am, Mon, 15 April 24