ನಾನು ಕೂಡ ಮುಖ್ಯಮಂತ್ರಿ ಆಕಾಂಕ್ಷಿ: ಎಐಸಿಸಿ ಸದಸ್ಯ ದೀಪಕ್ ಚಿಂಚೋರೆ
ನಾನು ಕೂಡ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದೇನೆ ಎಂದು ಎಐಸಿಸಿ ಸದಸ್ಯ ದೀಪಕ್ ಚಿಂಚೋರೆ ಧಾರವಾಡದಲ್ಲಿ ನಡೆದ ನವ ಸಂಕಲ್ಪ ಚಿಂತನಾ ಶಿಬಿರದಲ್ಲಿ ಹೇಳಿದ್ದಾರೆ.

ಧಾರವಾಡ: ನಾನು ಕೂಡ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದೇನೆ ಎಂದು ಎಐಸಿಸಿ ಸದಸ್ಯ ದೀಪಕ್ ಚಿಂಚೋರೆ ಧಾರವಾಡದಲ್ಲಿ ನಡೆದ ನವ ಸಂಕಲ್ಪ ಚಿಂತನಾ ಶಿಬಿರದಲ್ಲಿ ಹೇಳಿದ್ದಾರೆ. ಪಕ್ಷದ ಪ್ರತಿ ಕಾರ್ಯಕರ್ತನೂ ಸಿಎಂ ಆಗಲು ಅರ್ಹನಾಗಿದ್ದಾನೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಬಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಬಣ ಅನ್ನೋದೇನೂ ಇಲ್ಲ. ವಿವಿಧತೆಯಲ್ಲಿ ಏಕತೆ ಅನ್ನೋದು ಪಕ್ಷದ ಸಿದ್ಧಾಂತವಾಗಿದೆ. ಪ್ರತಿ ಕಾಂಗ್ರೆಸ್ಸಿಗ ಸಿಎಂ ಆಗಲು ಅರ್ಹನಾಗಿದ್ದಾನೆ.
ಹೀಗಾಗಿ ನಾನೇಕೆ ಆಗಲು ಸಾಧ್ಯವಿಲ್ಲ? ನನಗೆ ಸಿಎಂ ಆಗಲು ಅವಕಾಶ ಸಿಕ್ಕಿಲ್ಲ. ನಮ್ಮಲ್ಲಿ ಯಾರು ಬೇಕಾದರೂ ಸಿಎಂ ಆಗಬಹುದು. ಕಾಂಗ್ರೆಸ್ ಹೂವಿನ ತೋಟವಿದ್ದಂತೆ. ಅಲ್ಲಿ ಯಾವ ಹೂ ಆಕರ್ಷಕವಾಗಿತ್ತೋ ಅದನ್ನು ಎತ್ತಿಕೊಳ್ಳಲಾಗುತ್ತೆ. ಅಂಥವರೇ ಸಿಎಂ ಆಗುತ್ತಾರೆ. ಸಿದ್ದರಾಮಯ್ಯ ಸಿಎಂ ಇದ್ದಾಗ ಐದು ವರ್ಷ ಒಬ್ಬರೇ ಇದ್ದರು ಇದೀಗ ಬಿಜೆಪಿ ಎರಡು ವರ್ಷದಲ್ಲಿ ಇಬ್ಬರನ್ನು ಸಿಎಂ ಮಾಡಿದೆ ಎಂದು ಕಾಲೆಳೆದಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕಷ್ಟದಲ್ಲಿದೆ ಎಂದು ಕಾಂಗ್ರೆಸ್ ಅಧಿಕಾರಕ್ಕಾಗಿ ಹುಟ್ಟಿದ ಪಕ್ಷವಲ್ಲ. ಕಾಂಗ್ರೆಸ್ ಸಿದ್ಧಾಂತ ಸಮಾಜದ ಎಲ್ಲ ವರ್ಗಗಳ ಹಿತ ಕಾಪಾಡುತ್ತದೆ. ಇವತ್ತು ದೇಶದಲ್ಲಿ ಏನಾಗುತ್ತಿದೆ ಅನ್ನೋದನ್ನು ಮನೆ ಮನೆಗೆ ತಲುಪಿಸಬೇಕಿದೆ. ಈ ಜವಾಬ್ದಾರಿಯ ಸಂಕಲ್ಪ ನಾವು ಮಾಡಬೇಕಿದೆ. ಪಕ್ಷ ಕಟ್ಟುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಹೇಳಿದರು.
ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡಬೇಕಿದೆ. 40 ಪರ್ಸೆಂಟೇಜ್ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಿದೆ. ವಿಧಾನಸಭೆ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದ ಸಂಕಲ್ಪ ಮಾಡಬೇಕಿದೆ. ಸಂವಿಧಾನದ ರಕ್ಷಣೆ ಮಾಡುವ ಸಂಕಲ್ಪ ಮಾಡಬೇಕಿದೆ ಎಂದು ತಿಳಿಸಿದರು.




