Lok Sabha Election: ಶ್ರೀರಾಮುಲು ವಿರುದ್ಧ ತೊಡೆ ತಟ್ಟಿದ ಮಾಜಿ ಶಾಸಕ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಎಸ್ ತಿಪ್ಪೇಸ್ವಾಮಿ ನಿರ್ಧಾರ
ನಾನು ಬಳ್ಳಾರಿ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದೆ. ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಶ್ರೀರಾಮುಲು ಜೊತೆಗೂ ಚರ್ಚಿಸಿದ್ದೆ. ನನ್ನ ಜತೆ ಚರ್ಚೆ ಮಾಡದೆ ಶ್ರೀರಾಮುಲುಗೆ ಟಿಕೆಟ್ ಘೋಷಿಸಿದ್ದಾರೆ. ಹಾಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಹೇಳಿದರು.
ಚಿತ್ರದುರ್ಗ, ಮಾರ್ಚ್ 17: ಲೋಕಸಭೆ ಚುನಾವಣೆಗೆ (Lok Sabha Election) ಅಖಾಡ ಸಿದ್ದವಾಗಿದೆ. ರಾಜ್ಯದಲ್ಲಿ ಬಂಡಾಯದ ರಾಜಕೀಯ ಆರಂಭವಾಗಿದೆ. ಅಸಮಾಧಾನಿತರು ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರದ (Ballary Lok Sabha Constituency) ಟಿಕೆಟ್ ತಪ್ಪಿದ್ದಕ್ಕೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ (S Tippeswamy) ಅಸಮಾಧಾನಗೊಂಡಿದ್ದು, ಬಿ ಶ್ರೀರಾಮುಲು (B Sriramulu) ವಿರುದ್ಧ ತೊಡೆ ತಟ್ಟಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಬಳ್ಳಾರಿ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದೆ. ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಶ್ರೀರಾಮುಲು ಜೊತೆಗೂ ಚರ್ಚಿಸಿದ್ದೆ. ಯಡಿಯೂರಪ್ಪ ಬಳಿ ಹೋಗೋಣ ಎಂದು ಶ್ರೀರಾಮುಲು ಹೇಳಿದ್ದರು. ನನ್ನ ಜತೆ ಚರ್ಚೆ ಮಾಡದೆ ಶ್ರೀರಾಮುಲುಗೆ ಟಿಕೆಟ್ ಘೋಷಿಸಿದ್ದಾರೆ. ಹಾಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಜೆಡಿಎಸ್ಗೆ ಮೂರು ಕ್ಷೇತ್ರ; ಮಂಡ್ಯದಿಂದ ಸ್ಪರ್ಧಿಸುವಂತೆ ಹೆಚ್ಡಿ ಕುಮಾರಸ್ವಾಮಿಗೆ ಅಮಿತ್ ಶಾ ಸಲಹೆ
ಎಸ್. ತಿಪ್ಪೇಸ್ವಾಮಿ 2013ರಲ್ಲಿ ಬಿಎಸ್ಆರ್ ಪಕ್ಷದಿಂದ ಮೊಳಕಾಲ್ಮೂರು ಕ್ಷೇತ್ರದಿಂದ ಗೆದ್ದಿದ್ದರು. ಬಳಿಕ ಶ್ರೀರಾಮುಲು ಅವರ ಮೂಲಕ ಬಿಜೆಪಿಯನ್ನು ಬೆಂಬಲಿಸಿದ್ದರು. ನಂತರ 2018ರಲ್ಲಿ ಎಸ್ ತಿಪ್ಪೇಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿತ್ತು. ಮೊಳಕಾಲ್ಮೂರು ಕ್ಷೇತ್ರದ ಟಿಕೆಟ್ ಅನ್ನು ಬಿಜೆಪಿ ಶ್ರೀರಾಮುಲು ಅವರಿಗೆ ನೀಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಎಸ್ ತಿಪ್ಪೇಸ್ವಾಮಿ ಪಕ್ಷೇತರ ಅಭ್ಯರ್ಥಿಯಾಗಿ ಶ್ರೀರಾಮುಲು ವಿರುದ್ಧ ಸ್ಪರ್ಧಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಬಿ ಶ್ರೀರಾಮುಲು ಗೆದ್ದಿದ್ದರು.
ನಂತರ ದಿನಗಳಲ್ಲಿ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಕಾಂಗ್ರೆಸ್ ಪಕ್ಷ ಸೇರಿದ್ದರು. ಆದರೆ 2023ರಲ್ಲಿ ಕೈ ಬಿಟ್ಟು ಕಮಲ ಹಿಡಿದರು. ಎಸ್ ತಿಪ್ಪೇಸ್ವಾಮಿಯನ್ನು ಬಿಜೆಪಿಗೆ ಕರೆ ತರಲುವಲ್ಲಿ ಶ್ರೀರಾಮುಲು ಪ್ರಮುಖ ಪಾತ್ರವಹಿಸಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಎಸ್.ತಿಪ್ಪೇಸ್ವಾಮಿಗೆ ಬಿಜೆಪಿ ಟಿಕೆಟ್ ನೀಡಲಾಗಿತ್ತು. ಈ ಚುನಾವಣೆಯಲ್ಲಿ ಎಸ್.ತಿಪ್ಪೇಸ್ವಾಮಿ ಪರಾಭವಗೊಂಡರು. ಇದೀಗ ಮತ್ತೆ ಶ್ರೀರಾಮುಲು ವಿರುದ್ಧ ಎಸ್.ತಿಪ್ಪೇಸ್ವಾಮಿ ಸಮರ ಸಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ