Siddaramaiah: ಕೋಲಾರ ಕಣದಿಂದ ಹಿಂದೆ ಸರಿದ ಸಿದ್ದರಾಮಯ್ಯ; ಎರಡು ದಿನಗಳಲ್ಲಿ ಅಂತಿಮ ನಿರ್ಧಾರ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧಿಸಲಿದ್ದೇನೆ ಎಂದು ಈ ಹಿಂದೆ ಘಂಟಾಘೋಷವಾಗಿ ಹೇಳಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಇದೀಗ ಮನಸು ಬದಲಾಯಿಸಿದ್ದಾರೆ.

Siddaramaiah: ಕೋಲಾರ ಕಣದಿಂದ ಹಿಂದೆ ಸರಿದ ಸಿದ್ದರಾಮಯ್ಯ; ಎರಡು ದಿನಗಳಲ್ಲಿ ಅಂತಿಮ ನಿರ್ಧಾರ
ಸಿದ್ದರಾಮಯ್ಯ

Updated on: Mar 18, 2023 | 3:59 PM

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದಲೇ (Kolar) ಸ್ಪರ್ಧಿಸಲಿದ್ದೇನೆ ಎಂದು ಈ ಹಿಂದೆ ಘಂಟಾಘೋಷವಾಗಿ ಹೇಳಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಇದೀಗ ಹೈಕಮಾಂಡ್ ಸೂಚನೆ ಮೇರೆಗೆ ಮನಸು ಬದಲಾಯಿಸಿದ್ದಾರೆ. ಕೋಲಾರ ಬಿಟ್ಟು ಬೇರೆಡೆ ಸ್ಪರ್ಧಿಸುವಂತೆ ಹೈಕಾಂಡ್ ಸಲಹೆ ನೀಡಿದ ಬೆನ್ನಲ್ಲೇ ಶನಿವಾರ ಮಧ್ಯಾಹ್ನ ಬೆಂಗಳೂರಿನ ನಿವಾಸದಲ್ಲಿ ಬೆಂಬಲಿಗರ ಹಾಗೂ ಪಕ್ಷದ (Congress) ನಾಯಕರ ಜತೆ ಸಭೆ ನಡೆಸಿದ ಅವರು, ಎಲ್ಲಿಂದ ಕಣಕ್ಕಿಳಿಯುವುದು ಎಂಬ ಬಗ್ಗೆ ಮುಂದಿನ ಎರಡು ದಿನಗಳಲ್ಲಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ. ಕೋಲಾರದಿಂದ ಸ್ಪರ್ಧಿಸುವುದು ಅಸಾಧ್ಯ ಎಂಬ ಸುಳಿವನ್ನೂ ನೀಡಿದ್ದಾರೆ. ಇದರೊಂದಿಗೆ, ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದ ಕಣಕ್ಕಿಳಿಯುವುದಿಲ್ಲ, ಕೊನೇ ಕ್ಷಣದಲ್ಲಿ ಅವರು ವರುಣಾದಿಂದ ಕಣಕ್ಕಿಳಿಯಬಹುದು ಎಂಬ ಬಿಜೆಪಿ ನಾಯಕರ ಹೇಳಿಕೆಗಳು ಕೊನೆಗೂ ನಿಜವಾಗುವ ಲಕ್ಷಣ ಗೋಚರಿಸಿದೆ. ಶುಕ್ರವಾರ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದಿದ್ದ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ವೇಳೆ, ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಹಾಗೂ ಕೋಲಾರದಿಂದ ಹಿಂದೆ ಸರಿಯುವಂತೆ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ ಎನ್ನಲಾಗಿತ್ತು.

ಎಂಎಲ್​ಸಿ ಅನಿಲ್ ಕುಮಾರ್, ಎಂಆರ್ ಸೀತಾರಾಮು, ನಜೀರ್ ಅಹ್ಮದ್, ಹೆಚ್.ಎಂ. ರೇವಣ್ಣ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.

ಸಿದ್ದರಾಮಯ್ಯ ಜೊತೆ ಕೆಲ ನಾಯಕರ ವಾಗ್ವಾದ

ಸಭೆಯಲ್ಲಿ ಸಿದ್ದರಾಮಯ್ಯ ಕೋಲಾರದ ಕೆಲವು ನಾಯಕರು ಜೊತೆ ವಾಗ್ವಾದಕ್ಕಿಳಿದರು. ನೀವು ಕೋಲಾರಕ್ಕೆ ಬರಲೇಬೇಕು. ನಿಮ್ಮ ನಿರ್ಧಾರ ಒಪ್ಪಲು ಸಾಧ್ಯವಿಲ್ಲ. ನೀವು ಕೋಲಾರಕ್ಕೆ ಬಾರದೇ ಇದ್ದರೆ ನಾವು ಪಕ್ಷದಿಂದ ಅಂತರ ಕಾಯ್ದು ಕೊಳ್ಳಬೇಕಾಗುತ್ತದೆ ಎಂದು ಕೆಲವು ನಾಯಕರು ಹೇಳಿದ್ದಾರೆ. ಕೋಲಾರ ಭಾಗದಲ್ಲಿ ಆರಕ್ಕೆ ಆರು ಕ್ಷೇತ್ರಗಳನ್ನೂ ಸೋಲಿಸುತ್ತೇವೆ ಎಚ್ಚರವಿರಲಿ ಎಂದೂ ಕೆಲವು ಹೇಳಿದ್ದಾರೆ ಎನ್ನಲಾಗಿದೆ. ಆದರೆ ನಾಯಕರ ಮಾತಿಗೆ ಗರಂ ಆದ ಸಿದ್ದರಾಮಯ್ಯ, ಸುಮ್ನಿರಿ, ನೀವೆಲ್ಲ ಏನ್ ಪಕ್ಷ ಬಿಡೋದು. ಎಲ್ಲಾ ನಮ್ಮವರೇ ಆಗಿ ಏನೇನೋ ಮಾತಾಡ್ತಿರಲ್ಲ ಎಂದಿದ್ದಾರೆ. ನಂತರ, ನಾನೇನು ಮಾಡಲಿ, ರಾಹುಲ್ ಗಾಂಧಿ ಅವರೇ ಹೇಳಿದ್ದಾರೆ. ಹೈಕಮಾಂಡ್ ಮಾತನ್ನ ಮೀರಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಇತರ ನಾಯಕರನ್ನು ಸಮಾಧಾನಪಡಿಸಿದರು. ಕೊನೆಯಲ್ಲಿ ಎರಡು ದಿನಗಳ ನಂತರ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು.

ಕೋಲಾರದಿಂದ ಹಿಂದೆ ಸರಿಯಲು ಕಾರಣವೇನು?

ಒಂದು ವೇಳೆ ಕೋಲಾರದಿಂದಲೇ ಸಿದ್ದರಾಮಯ್ಯ ಕಣಕ್ಕಿಳಿದರೆ ಅವರಿಗೆ ನಿರೀಕ್ಷಿತ ಬೆಂಬಲ ಸಿಗಲಾರದು ಎಂಬುದು ಕಾಂಗ್ರೆಸ್ ಪಕ್ಷದ ಆಂತರಿಕ ಸಮೀಕ್ಷೆಯಿಂದ ತಿಳಿದುಬಂದಿದೆ ಎನ್ನಲಾಗಿದೆ. ಜತೆಗೆ, ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ಧ ದಲಿತರೂ ಇತ್ತೀಚೆಗೆ ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ದಲಿತ ವಿರೋಧಿ ಎಂಬ ಪ್ಯಾಂಪ್ಲೆಟ್​​​ಗಳನ್ನೂ ಇತ್ತೀಚೆಗೆ ದಲಿತ ಮುಖಂಡರು ಹಂಚಿದ್ದರು. ದಲಿತ ಮುಖಂಡ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಸಿದ್ದರಾಮಯ್ಯ ವಿರುದ್ಧ ಸಮಾವೇಶವನ್ನೇ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಸಿದ್ದರಾಮಯ್ಯ ದಲಿತರಿಗಾಗಿ ಏನೂ ಕೆಲಸ ಮಾಡಿಲ್ಲ, ಚುನಾವಣೆಗಾಗಿ 6 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದೆಲ್ಲ ನಾರಾಯಣ ಸ್ವಾಮಿ ಆರೋಪಿಸಿದ್ದರು. ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಇಂಥ ಬೆಳವಣಿಗೆಗಳು ಕ್ಷೇತ್ರದಲ್ಲಿ ಹೆಚ್ಚಾಗುತ್ತಿರುವುದು ಕಾಂಗ್ರೆಸ್​ಗೆ ತಲೆನೋವು ಉಂಟು ಮಾಡಿತ್ತು. ಜತೆಗೆ, ಒಕ್ಕಲಿಗರ ಬೆಂಬಲವೂ ಕೋಲಾರದಲ್ಲಿ ಸಿದ್ದರಾಮಯ್ಯಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗಲಾರದು ಎಂಬುದು ಕಾಂಗ್ರೆಸ್ ಆಂತರಿಕ ಸಮೀಕ್ಷೆಯಿಂದ ತಿಳಿದುಬಂದಿತ್ತು ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಮತ್ತೆ ಕ್ಷೇತ್ರ ಗೊಂದಲ; ಕೋಲಾರದಿಂದ ಹಿಂದೆ ಸರಿಯುವಂತೆ ರಾಹುಲ್ ಗಾಂಧಿ ಸಲಹೆ?

ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರವಾಗಿ ಸಿದ್ದರಾಮಯ್ಯ ನಡೆಯಿಂದ​ ಶಾಸಕ ರಮೇಶ್ ಕುಮಾರ್ ಬಣ ಬೇಸರಗೊಂಡಿದೆ. ಸಿದ್ದರಾಮಯ್ಯ ಕರೆದಿದ್ದ ಸಭೆಗೆ ರಮೇಶ್ ಕುಮಾರ್ ಹಾಗೂ ಬಣದ ನಾಯಕರು ಗೈರಾಗಿದ್ದಾರೆ. ನಂಜೇಗೌಡ ಎಸ್.ಎನ್. ನಾರಾಯಣಸ್ವಾಮಿ, ಶ್ರೀನಿವಾಸಗೌಡ ಗೈರಾಗಿದ್ದಾರೆ.

ಹೈಕಮಾಂಡ್ ಹೇಳಿದ ಕ್ಷೇತ್ರದಿಂದ ಸ್ಪರ್ಧೆ ಎಂದಿದ್ದ ಸಿದ್ದರಾಮಯ್ಯ

ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸದಂತೆ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ ಎಂಬ ವರದಿಗಳ ಕುರಿತು ಈ ಹಿಂದೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಹೈಕಮಾಂಡ್ ಹೇಳಿದ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ನಾನು ಯಾವುದೇ ಒತ್ತಡಕ್ಕೊಳಗಾಗಿಲ್ಲ. ಬಹುಶಃ ಮಾರ್ಚ್​ 22ರಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ. ಒಂದೇ ಹೆಸರಿರುವ ಕಡೆ, ಗೊಂದಲ ಇಲ್ಲದ ಕಡೆ ಟಿಕೆಟ್ ಅಂತಿಮಗೊಳಿಸಲಾಗಿದೆ. ನಾನೂ ಸಹ ಟಿಕೆಟ್​ ವಿಚಾರವಾಗಿ ಹೈಕಮಾಂಡ್​ಗೆ ಅರ್ಜಿ ಹಾಕಿದ್ದೇನೆ. ವರಿಷ್ಠರು ಒಂದು ಕಡೆಯಿಂದ ಸ್ಪರ್ಧಿಸಲು ಹೇಳುತ್ತಾರೋ, ಮೂರು ಕಡೆಯಿಂದ ಕಣಕ್ಕಿಳಿಯಲು ಹೇಳುತ್ತಾರೋ ಗೊತ್ತಿಲ್ಲ. ವರುಣಾದಲ್ಲಿ ಈಗಾಗಲೇ ಯತೀಂದ್ರ ಇದ್ದಾನೆ. ವರುಣಾದಲ್ಲಿ ಸ್ಪರ್ಧಿಸುವಂತೆ ಹೇಳಿದರೆ ಅಲ್ಲಿಂದ, ಕೋಲಾರದಲ್ಲಿ ಹೇಳಿದರೆ ಅಲ್ಲಿಂದ ಕಣಕ್ಕಿಳಿಯುತ್ತೇನೆ. ನಿರ್ಧಾರ ಹೈಕಮಾಂಡ್​ಗೆ ಬಿಟ್ಟದ್ದು ಎಂದು ಹೇಳಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:57 pm, Sat, 18 March 23

Loading...
Unable to load recommendations.
Follow Us