ವಿಧಾನಸೌಧ ಯಡಿಯೂರಪ್ಪಂದು ಅಲ್ಲ, ಕಾಗೇರಿದೂ ಅಲ್ಲ; ಶಾಸಕ ಸಂಗಮೇಶ್ರನ್ನು ಹೌಸ್ ಒಳಗೆ ಬಿಡ್ರಿ: ಸಿದ್ದರಾಮಯ್ಯ ಗುಡುಗು
Karnataka Budget Session 2021: ಇಂದು ವಿಧಾನಸಭೆ ಕಲಾಪ ಆರಂಭಕ್ಕೂ ಮುನ್ನ ಸ್ಪೀಕರ್ ಕೊಠಡಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಿದ್ದರು. ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ ನಿಮ್ಮ ಆದೇಶ ಪ್ರಕಟಿಸಬೇಕಿತ್ತು ಎಂದ ಸಿದ್ದರಾಮಯ್ಯ, ಸಂಗಮೇಶ್ ಅಮಾನತು ಆದೇಶವನ್ನೂ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಬೆಂಗಳೂರು: ವಿಧಾನಸಭೆಯಲ್ಲಿ ನಿನ್ನೆಯಿಂದಲೂ ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಚರ್ಚೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಕಲಹ ಇಂದು ಸಹ ಮುಂದುವರೆದಿದ್ದು, ಸದನದ ಬಾವಿಗಿಳಿದು ಕಾಂಗ್ರೆಸ್ ಶಾಸಕರು ಪ್ರತಿಭಟಿಸುತ್ತಿದ್ದಾರೆ. ಇದರೊಂದಿಗೆ ಸದನದಲ್ಲಿ ಅಂಗಿ ಬಿಚ್ಚಿದ ಕಾರಣಕ್ಕೆ ಒಂದು ವಾರದ ಕಾಲ ಅಮಾನತಾಗಿರುವ ಸಂಗಮೇಶ್ ಅವರು ಅಮಾನತು ವಾಪಸ್ ಪಡೆಯುವಂತೆಯೂ ಆಗ್ರಹಿಸುತ್ತಿದ್ದಾರೆ. ಇಂದು ವಿಧಾನಸಭೆ ಕಲಾಪ ಆರಂಭಕ್ಕೂ ಮುನ್ನ ಸ್ಪೀಕರ್ ಕೊಠಡಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಿದ್ದರು. ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ ನಿಮ್ಮ ಆದೇಶ ಪ್ರಕಟಿಸಬೇಕಿತ್ತು ಎಂದ ಸಿದ್ದರಾಮಯ್ಯ, ಸಂಗಮೇಶ್ ಅಮಾನತು ಆದೇಶವನ್ನೂ ಹಿಂಪಡೆಯಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತ್ಯುತ್ತರಿಸಿ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಮಾನತು ಆದೇಶವನ್ನು ಮೂರು ದಿನಕ್ಕೆ ಇಳಿಕೆ ಮಾಡುವುದಾಗಿಯೂ ತಿಳಿಸಿದರು. ಆದರೆ, ಇದಕ್ಕೊಪ್ಪದ ಸಿದ್ದರಾಮಯ್ಯ ಅದ್ಯಾವುದೂ ಬೇಡ, ಈಗಲೇ ಒಳಗಡೆ ಕರೆದುಕೊಳ್ಳುವುದಾದರೆ ಮಾತ್ರ ನಾವು ಒಪ್ಪುತ್ತೇವೆ ಎಂದು ಪಟ್ಟು ಹಿಡಿದರು.
ಇದಾದ ನಂತರ ಗದ್ದಲದೊಂದಿಗೇ ಆರಂಭವಾದ ಕಲಾಪದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈ ಹಿಂದೆ ಗೂಳಿಹಟ್ಟಿ ಶೇಖರ್ ಬಟ್ಟೆ ಹರಿದುಕೊಂಡಿದ್ರು. ಆ ರೀತಿಯ ಘಟನೆ ನಿನ್ನೆ ವಿಧಾನಸಭೆಯಲ್ಲಿ ನಡೆದಿಲ್ಲ. ಶಾಸಕ ಸಂಗಮೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಶಾಸಕರು ಅಂಗಿ ಬಿಚ್ಚಿದ್ದರು ಎಂದು ಸಮರ್ಥಿಸಿಕೊಂಡರು. ಇನ್ನೊಂದೆಡೆ ತಮ್ಮನ್ನು ಅಮಾನತುಗೊಳಿಸಿರುವುದಕ್ಕೆ ಆಕ್ರೋಶ ಹೊರಹಾಕಿದ ಬಿ.ಕೆ.ಸಂಗಮೇಶ್, ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣಕ್ಕೆ ಇದೇ ಸಾಕ್ಷಿ. ನನ್ನ, ನನ್ನ ಕುಟುಂಬದವರ ಮೇಲೆ ಸುಳ್ಳು ಕೇಸ್ ಹಾಕಿಸಿದ್ದಾರೆ. ಕೆಲ ದಿನಗಳ ಹಿಂದೆ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಆದರೆ, ಶಾಸಕರ ಕಷ್ಟ ಸುಖವನ್ನು ಸ್ಪೀಕರ್ ಕೇಳ್ತಿಲ್ಲ. ಕಾಗೇರಿ ನಾಲಾಯಕ್ ಸ್ಪೀಕರ್, ಅವರು ಬಿಜೆಪಿ ಏಜೆಂಟ್, ವಿಧಾನಸೌಧ ಏನು ಸ್ಪೀಕರ್ ಕಾಗೇರಿ ಅಪ್ಪನ ಮನೆ ಆಸ್ತೀನಾ? ವಿಧಾನಸೌಧದ ಲಾಂಜ್‌ಗೆ ಕೂಡ ಹೋಗಲು ಬಿಡುವುದಿಲ್ಲ. ಎಷ್ಟು ಲಜ್ಜೆಗೆಟ್ಟ ಸರ್ಕಾರ ಇದು ಎಂದು ಸಿಡಿಮಿಡಿಗೊಂಡರು.
ಬಿಎಸ್‌ವೈ, ಈಶ್ವರಪ್ಪ, ರಾಘವೇಂದ್ರಗೆ ಧಿಕ್ಕಾರ ಕೂಗಿದ ಸಂಗಮೇಶ್, ಸದನದಲ್ಲಿ ನಾನು ಅಂಥದ್ದೇನನ್ನೂ ಮಾಡಿಲ್ಲ. ಉದ್ವೇಗದಿಂದ ಶರ್ಟ್ ಬಿಚ್ಚಿದೆ. ನ್ಯಾಯ ಕೊಡಿಸಿದ್ರೆ ಏಕೆ ಶರ್ಟ್ ಬಿಚ್ತಾ ಇದ್ದೆ ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಹಾಗೂ ಶರತ್ ಬಚ್ಚೇಗೌಡ ಸಂಗಮೇಶ್ ನೆರವಿಗೆ ಬಂದರಾದರೂ ಮಾರ್ಷಲ್ ಅವರನ್ನು ಒಳಗೆ ಬಿಡಲಿಲ್ಲ. ವಿಧಾನಸೌಧ ಯಡಿಯೂರಪ್ಪಂದು ಅಲ್ಲ, ಕಾಗೇರಿದೂ ಅಲ್ಲ, ನನ್ನದೂ ಅಲ್ಲ ಎಂದ ಸಿದ್ದರಾಮಯ್ಯ, ಅವರು ಹೌಸ್ ಒಳಗೆ ಬರೊಲ್ಲ ಬಿಡ್ರಿ ಎಂದರೂ ಮಾರ್ಷಲ್ ಅದಕ್ಕೆ ಒಪ್ಪಲಿಲ್ಲ.
ಇದೇ ವಿಚಾರವಾಗಿ ಕಾಂಗ್ರೆಸ್ ಧರಣಿ ಮಧ್ಯೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಸಂಗಮೇಶ್ ಅಮಾನತು ಸರಿಯಿದೆ. ವಾಪಸ್ ಪಡೆಯಬೇಡಿ. ಕಾಂಗ್ರೆಸ್ನವರು ಚರ್ಚೆ ಮಾಡಲ್ಲ, ನಮಗೆ ಮಾತನಾಡಲು ಅವಕಾಶ ಕೊಡಿ ಎಂದು ಸಭಾಪತಿಗಳನ್ನು ಒತ್ತಾಯಿಸಿದರು. ಅಂತೆಯೇ ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ, ಸಂಗಮೇಶ್ ವಿರುದ್ಧದ ಪ್ರಕರಣಗಳ ಬಗ್ಗೆ ನನಗೆ ಗಮನಕ್ಕೆ ಬಂದಿದೆ. ನಾನೂ ಸಹ ಸಮಸ್ಯೆಯಾಗಲ್ಲ ಎಂದು ಭರವಸೆ ಕೊಟ್ಟಿದ್ದೇನೆ. ಇಷ್ಟಾದ್ರೂ ಇಲ್ಲಿ ಅಂಗಿ ಬಿಚ್ಚುವಂಥದ್ದೇನಾಗಿತ್ತೆಂದು ಪ್ರಶ್ನಿಸಿದ್ದಾರೆ.
ಮುಖಾಮುಖಿಯಾದರೂ ಅಪರಿಚಿತರಂತಿದ್ದ ಸಿದ್ದರಾಮಯ್ಯ, ತನ್ವೀರ್ ಸೇಠ್ ಇಂದು ವಿಧಾನಸಭೆ ಕಲಾಪಕ್ಕೆ ಶಾಸಕ ತನ್ವೀರ್ ಸೇಠ್ ಆಗಮಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಹಾಗೂ ತನ್ವೀರ್ ಸೇಠ್ ಎದುರುಬದುರಾದ ಪ್ರಸಂಗವೂ ನಡೆಯಿತು. ಈ ವೇಳೆ ಸಿದ್ದರಾಮಯ್ಯ ಸಮೀಪಿಸುತ್ತಿರುವುದು ಗೊತ್ತಾದ ತಿರುಗಿ ನಿಂತಿದ್ದ ತನ್ವೀರ್ ಸೇಠ್ ಅವರನ್ನು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ಅದೇ ರೀತಿ ಸಿದ್ದರಾಮಯ್ಯ ಸಹ ತನ್ವೀರ್ ಸೇಠ್ ಮುಖ ನೋಡದೆ ಕಲಾಪಕ್ಕೆ ತೆರಳಿದರು. ಆ ಮೂಲಕ ಇಬ್ಬರು ನಾಯಕರ ನಡುವಿನ ಮನಸ್ತಾಪ ಇನ್ನೂ ಇತ್ಯರ್ಥವಾಗಿಲ್ಲ ಎಂಬ ಸಂದೇಶ ರವಾನೆಯಾದಂತೆ ಕಂಡುಬಂತು.
ದಿನೇಶ್ ಕಲ್ಲಹಳ್ಳಿ ಬಂಧನಕ್ಕೆ ಬಿಜೆಪಿ ಶಾಸಕರ ಒತ್ತಾಯ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆಯಿಂದಾಗಿ ಭಾರೀ ಮುಜುಗರಕ್ಕೆ ಸಿಲುಕಿರುವ ಸರ್ಕಾರ ಮತ್ತು ಬಿಜೆಪಿ ಪಕ್ಷ ಇದೀಗ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಪ್ರಯತ್ನಿಸುತ್ತಿರುವಂತಿದೆ. ಈ ವಿಚಾರವಾಗಿ ದೂರುದಾರ ದಿನೇಶ್ ಕಲ್ಲಹಳ್ಳಿಯನ್ನು ಬಂಧಿಸುವಂತೆ ಗೃಹ ಸಚಿವ ಬೊಮ್ಮಾಯಿಗೆ 8ಕ್ಕೂ ಹೆಚ್ಚು ಬಿಜೆಪಿ ಶಾಸಕರ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ರಾತ್ರಿ ಸಿಎಂ ನಿವಾಸದಲ್ಲಿಯೂ ಬಿಜೆಪಿ ಶಾಸಕರು ಚರ್ಚೆ ನಡೆಸಿದ್ದು, ಇಂತಹ ಬ್ಲ್ಯಾಕ್ ಮೇಲ್ ಕೆಲಸಗಳನ್ನು ಮಟ್ಟ ಹಾಕಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ ಎನ್ನುವ ಮಾಹಿತಿ ಇದೆ.
ಸದ್ಯ ಈ ಎಲ್ಲಾ ಸದ್ದು ಗದ್ದಲಗಳ ನಡುವೆ ಕಲಾಪವನ್ನು ಮಧ್ಯಾಹ್ನ 3.30ಕ್ಕೆ ಮುಂದೂಡಿರುವುದಾಗಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಅಂಗಿ ಬಿಚ್ಚಿದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಒಂದು ವಾರಗಳ ಕಾಲ ಅಮಾನತು
Published On - 12:54 pm, Fri, 5 March 21