AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸಭೆ: ಪ್ರಚಾರ ಪ್ರಿಯ ಐಎಎಸ್ ಅಧಿಕಾರಿಗಳ ಬಗ್ಗೆ ಸಾರಾ ಮಹೇಶ್ ಆಕ್ರೋಶ, ಯಡಿಯೂರಪ್ಪಗೆ ಮೆಚ್ಚುಗೆ ಸೂಚಿಸಿದ ಎಚ್​ಡಿಕೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿ, ಬಡವರಿಗೆ ಪ್ಯಾಕೇಜ್ ಕೊಡಿಸಿ. ರಾಜ್ಯದಲ್ಲಿರುವ 55 ಲಕ್ಷ ಬಡ ಕುಟುಂಬಗಳಿಗೆ ಅನುಕೂಲ ಮಾಡಿಕೊಡಿ ಯಡಿಯೂರಪ್ಪ ಅವರಿಗೆ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ವಿಧಾನಸಭೆ: ಪ್ರಚಾರ ಪ್ರಿಯ ಐಎಎಸ್ ಅಧಿಕಾರಿಗಳ ಬಗ್ಗೆ ಸಾರಾ ಮಹೇಶ್ ಆಕ್ರೋಶ, ಯಡಿಯೂರಪ್ಪಗೆ ಮೆಚ್ಚುಗೆ ಸೂಚಿಸಿದ ಎಚ್​ಡಿಕೆ
ಸಾ.ರಾ.ಮಹೇಶ್ ಮತ್ತು ಎಚ್​.ಡಿ.ಕುಮಾರಸ್ವಾಮಿ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Sep 16, 2021 | 4:59 PM

Share

ಬೆಂಗಳೂರು: ಯಡಿಯೂರಪ್ಪ ಅವರೊಂದಿಗೆ ನಾನು 20 ತಿಂಗಳ ಕಾಲ ಸರ್ಕಾರ ನಡೆಸಿದ್ದೇನೆ. ಬಡವರ ಬಗ್ಗೆ ಅವರಿಗಿರುವ ಕಾಳಜಿಯನ್ನೂ ಗಮನಿಸಿದ್ದೇನೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್​.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಹೇಳಿದರು. ಬಡವರ ಬಗ್ಗೆ ನಿಮಗಿರುವ ಕಾಳಜಿಯನ್ನು ಗಮನಿಸಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿ, ಬಡವರಿಗೆ ಪ್ಯಾಕೇಜ್ ಕೊಡಿಸಿ. ರಾಜ್ಯದಲ್ಲಿರುವ 55 ಲಕ್ಷ ಬಡ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್​ ಕೊಡಿಸಲು ಗಮನಹರಿಸಿ. ಅಧಿವೇಶದಲ್ಲಿಯೇ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ನಿರ್ಧಾರಮಾಡಿ ಎಂದು ಒತ್ತಾಯಿಸಿದರು.

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮತ್ತು ಮಹಾನಗರ ಪಾಲಿಕೆ ಆಯುಕ್ತ ಶಿಲ್ಪಾ ನಾಗ್ ನಡುವಣ ಜಟಾಪಟಿಯೂ ಸದನದಲ್ಲಿ ಪ್ರತಿಧ್ವನಿಸಿತು. ಅಧಿಕಾರಿಗಳ ಹೆಸರು ಹೇಳದೆ ವಿಚಾರ ಪ್ರಸ್ತಾಪಿಸಿದ ಎಚ್​.ಡಿ.ಕುಮಾರಸ್ವಾಮಿ, ಸರ್ಕಾರಿ ಅಧಿಕಾರಿಗಳು ಶಾಸಕರ ವಿರುದ್ಧವಾಗಿ ಹೋಗುತ್ತಾರೆ. ಇವರಿಗೆ ಇಂಥ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

ಅವರು ಐಎಎಸ್ ಇರಲಿ ಅಥವಾ ಬೇರೆ ಯಾರಾದರೂ ಇರಲಿ ಇಂಥ ನಡವಳಿಕೆಗಳಿಗೆ ಅವಕಾಶ ಕೊಡುವುದು ಏಕೆ? ವಿವಾದಿತ ಅಧಿಕಾರಿಗಳ ಭೇಟಿಗಾಗಿ ಮುಖ್ಯಕಾರ್ಯದರ್ಶಿ ಮೈಸೂರಿಗೆ ಹೋಗಿದ್ದು ಏಕೆ? ಅಧೀನ ಅಧಿಕಾರಿಯನ್ನು ತಮ್ಮಲ್ಲಿಗೆ ಕರೆಸಿಕೊಳ್ಳಲಿಲ್ಲ ಏಕೆ ಎಂದು ಪ್ರಶ್ನಿಸಿದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನೂ ಸಹ ಮುಖ್ಯಕಾರ್ಯದರ್ಶಿ ಜೊತೆಗೆ ಮಾತನಾಡಿದ್ದೇನೆ. ಹಿರಿಯ ಅಧಿಕಾರಿಗಳು ಹೀಗೆ ಮಾತಾಡೋದು ಸರಿಯಲ್ಲ. ಅಧಿಕಾರಿಗಳು ಮಾಧ್ಯಮಗಳ ಮುಂದೆ ಹೋಗಿ ಮಾತನಾಡುವುದು ಸರಿಯಲ್ಲ ಎಂದು ಎಚ್​.ಡಿ.ಕುಮಾರಸ್ವಾಮಿ ಹೇಳಿದರು. ಬಹುಶಃ ಮುಖ್ಯ ಕಾರ್ಯದರ್ಶಿ ಸೂಚನೆ ಕೊಟ್ಟಿರಬೇಕು ಎಂದು ಸ್ಪೀಕರ್ ಅಭಿಪ್ರಾಯಪಟ್ಟರು.

ಚರ್ಚೆಯ ವೇಳೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ‘ಈ ವಿಚಾರವನ್ನೂ ಸಾ.ರಾ.ಮಹೇಶ್ ನಮ್ಮ ಗಮನಕ್ಕೆ ತಂದಿದ್ದಾರೆ. ಮುಖ್ಯ ಕಾರ್ಯದರ್ಶಿ ಜತೆ ನಾನೂ ಮಾತಾಡಿದ್ದೇನೆ. ಸರ್ಕಾರಿ ಅಧಿಕಾರಿಗಳು ಮಾಧ್ಯಮಗಳ ಮುಂದೆ ಹೋಗುವಂತಿಲ್ಲ. ಕೆಲ ಅಧಿಕಾರಿಗಳು ಓವರ್ ಆ್ಯಕ್ಟಿಂಗ್ ಮಾಡುತ್ತಾರೆ. ಇಂಥವರ ವಿರುದ್ಧ ಕ್ರಮಕ್ಕೆ ಸೂಚಿಸುತ್ತೇವೆ’ ಎಂದು ನುಡಿದರು.

ಐಎಎಸ್ ಅಧಿಕಾರಿಗಳ ವಿರುದ್ಧ ಸಾರಾ ಮಹೇಶ್ ಆಕ್ರೋಶ ಕೆಲ ಐಎಎಸ್ ಅಧಿಕಾರಿಗಳು ₹ 35 ಲಕ್ಷ ವೆಚ್ಚದಲ್ಲಿ ಈಜುಕೊಳ ಕಟ್ಟಿ ಶೋಕಿ ಮಾಡುತ್ತಾರೆ. ಇವರ ವಿರುದ್ಧ ಯಾರು ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನೆ ಮಾಡಿದರು. ನಿವೃತ್ತಿಯ ಬಳಿಕ ಇಂಥವರು ನಮ್ಮ ವಿರುದ್ಧವೇ ಚುನಾವಣೆಗೆ ನಿಲ್ಲುತ್ತಾರೆ. ಇಂಥವರಿಂದ ನಮಗೆ ರಕ್ಷಣೆ ಕೊಡಿಸಿ. ಅವರ ವಸತಿ‌ ಗೃಹಕ್ಕೆ ಯಾಕೆ 5 ಎಕರೆ ಭೂಮಿ ಬೇಕು? ಐಎಎಸ್, ಐಪಿಎಸ್ ಅಧಿಕಾರಿಗಳ ಮನೆಗಳ ಮೇಲೆ ಎಂದಾದರೂ ಐಟಿ ರೇಡ್ ಆಗುತ್ತಾ? ಕೇವಲ ಎಂಜಿನಿಯರ್, ಸಣ್ಣಪುಟ್ಟ ಅಧಿಕಾರಿಗಳ ಮನೆಗಳ ಮೇಲೆ ಮಾತ್ರ ರೇಡ್ ಆಗುತ್ತೆ ಎಂದು ಸಾ.ರಾ.ಮಹೇಶ್ ಸದನದಲ್ಲಿ ಭಾವೋದ್ವೇಗದಿಂದ ಮಾತನಾಡಿದರು.

ಕೆಲವು ಅಧಿಕಾರಿಗಳು ಭ್ರಷ್ಟರಾಗಿ, ಜನರ ತೆರಿಗೆ ಹಣದಲ್ಲಿ ಶೋಕಿ ಮಾಡಿಕೊಂಡು ಬದುಕುತ್ತಿದ್ದಾರೆ. ಒಂದು ಬ್ಯಾಗ್ ವಿಚಾರದಲ್ಲಿ ಆರೂವರೆ ಕೋಟಿ ನುಂಗಿದ್ದಾರೆ. ಬಿ.ಎಸ್.ಯಡಿಯೂರಪ್ಪ ಇದ್ದಾಗಲೂ ಇವರೇ ಅಧಿಕಾರಿ, ಸಿದ್ದರಾಮಯ್ಯ ಇದ್ದಾಗಲೂ ಇದೇ ಅಧಿಕಾರಿ ಎಂದು ವಿಷಾದಿಸಿದರು. ಇಂತಹ ಅಧಿಕಾರಿಗಳಿಂದ ನಮಗೆ ರಕ್ಷಣೆ ಕೊಡಿಸಿ ಎಂದು ನುಡಿದರು.

(Karnataka Assembly Session Sa Ra Mahesh Speaks on IAS Officers Work Style HD Kumaraswamy Appraises BS Yediyurappa)

ಇದನ್ನೂ ಓದಿ: ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ತಮ್ಮ ಭಾಷಣದಲ್ಲಿ ಏನು ಹೇಳಿದರು?

ಇದನ್ನೂ ಓದಿ: ಅಧಿವೇಶನಕ್ಕೆ ಯಾರೂ ಗೈರಾಗುವಂತಿಲ್ಲ; ಕೊನೆಯಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ಕೊಡಲಾಗುತ್ತದೆ: ವಿಶ್ವೇಶ್ವರ ಹೆಗಡೆ ಕಾಗೇರಿ

Published On - 3:00 pm, Thu, 16 September 21