ಬೆಂಗಳೂರು, (ಜನವರಿ 18): ಪರಿಶಿಷ್ಟ ಜಾತಿಯಲ್ಲಿರುವ ವಿವಿಧ ಸಮುದಾಯಗಳಿಗೆ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರ, ಕೇಂದ್ರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿದೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ. ಈ ಬಗ್ಗೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಚುನಾವಣೆ ಬಂದಾಗ ಕಾಂಗ್ರೆಸ್ ಪಕ್ಷ ಮೋಸದಾಟ ಆಡುತ್ತೆ. ಲೋಕಸಭಾ ಚುನಾವಣೆ ಇದೆ, ಹಾಗಾಗಿ ಈ ವಿಚಾರ ತಂದಿದ್ದಾರೆ. ಸಿಎಂ ಕಾನೂನು ಸಲಹೆಗಾರ ಯಾರು ಎಂದು ಗೊತ್ತಿಲ್ಲ. ಕ್ಯಾಬಿನೆಟ್ಗೆ ತಂದು ಕಣ್ಣೊರೆಸುವ ತಂತ್ರ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಸಂಪುಟ ಒಪ್ಪಿಗೆ ನೀಡಿರುವ ಬಗ್ಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಹರಿಯಾಣ, ತಲಂಗಾಣದಲ್ಲೂ ಒಳಮೀಸಲಾತಿ ಘೋಷಣೆ ಆಗಿದೆ. 5 ರಾಜ್ಯಗಳಲ್ಲಿ ಒಳಮೀಸಲಾತಿ ಬಗ್ಗೆ ಆಯೋಗ ರಚನೆಯಾಗಿತ್ತು. ಎಲ್ಲರೂ ಒಳಮೀಸಲಾತಿ ಅಗತ್ಯ ಇದೆ ಎಂದು ಹೇಳಿದ್ದರು. 341ನೇ ವಿಧಿ ತಿದ್ದುಪಡಿ ಇಲ್ಲ ಎಂದು ನ್ಯಾ. ಅರುಣ್ ಮಿಶ್ರಾ ಹೇಳಿದ್ದರು. ಎಲ್ಲಾ ರಾಜ್ಯಗಳೂ ಒಳಮೀಸಲಾತಿ ಕೊಡಬಹುದು ಎಂದು ಕೋರ್ಟ್ ಆದೇಶ ಮಾಡಿ ಮೂರು ವರ್ಷ ಆಗಿದೆ. ಆ ಆದೇಶವನ್ನು ಇವರು ಯಾರೂ ತೆಗೆದು ನೋಡಿಲ್ಲ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯನವರ ಬಗ್ಗೆ ಅನುಕಂಪ ತೋರಿಸಬೇಕಾ? ಸಿದ್ದರಾಮಯ್ಯನವರೇ ನಿಮ್ಮ ಅಜ್ಞಾನದ ಬಗ್ಗೆ ಪ್ರಶ್ನಿಸಿಕೊಳ್ಳಿ. ಮಾನವೀಯತೆ, ಸಾಮಾಜಿಕ ಕಳಕಳಿ ಇದ್ದರೆ ಜಾರಿ ಮಾಡಿ. ಇವತ್ತೇ ಒಳಮೀಸಲಾತಿ ಜಾರಿಗೊಳಿಸಿ ಎಂದು ಸವಾಲು ಸವಾಲು ಹಾಕಿದರು.
ಇದನ್ನೂ ಓದಿ: ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡಲು ಸಂಪುಟ ಅಸ್ತು
ಅಸ್ಪ್ರಶ್ಯರಿಗೆ ಮೀಸಲಾತಿ ಕೊಡುವಾಗ ಚರ್ಚೆ ಮೇಲೆ ಚರ್ಚೆ ಮಾಡುತ್ತಾರೆ. 341ನೇ ವಿಧಿ ತಿದ್ದುಪಡಿ ಆಗಬೇಕು ಎನ್ನುತ್ತಾರೆ. ಸಿದ್ದರಾಮಯ್ಯ ಚುನಾವಣೆಗೂ ಮುನ್ನ ನುಡಿದಂತೆ ನಡೆಯುತ್ತೇವೆ ಎನ್ನುತ್ತಾರೆ . ಸಾಮಾನ್ಯ ವ್ಯಕ್ತಿ ಚರ್ಚೆ ಮಾಡುವ ರೀತಿ ಕ್ಯಾಬಿನೆಟ್ ನಲ್ಲಿ ಒಳಮೀಸಲಾತಿ ವಿಚಾರ ಚರ್ಚೆ ಮಾಡುತ್ತಾರೆ. ರಾಜ್ಯ ಸರ್ಕಾರಕ್ಕೆ ನಾಚಿಕೆ ಆಗಬೇಕು. ಮಾನವೀಯತೆ, ಸಾಮಾಜಿಕ ಕಳಕಳಿ ಇದ್ದರೆ ಇವತ್ತೇ ಮತ್ತೆ ಕ್ಯಾಬಿನೆಟ್ ಸೇರಿ ಒಳಮೀಸಲಾತಿ ಜಾರಿ ಮಾಡಿ. ಸಿದ್ದರಾಮಯ್ಯನವರು ನುಡಿದಂತೆ ನಡೆದಿದ್ದೇನೆ ಎನ್ನುವ ಮಾತು ಹಿಂದಕ್ಕೆ ಪಡೆಯಿರಿ. ಕಾಂಗ್ರೆಸ್ ನ ದಲಿತ ಶಾಸಕರು, ಸಚಿವರು ಒಳಮೀಸಲಾತಿ ಬಗ್ಗೆ ಮಾತನಾಡಿ ಎಂದು ಒತ್ತಾಯಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ