ತುರ್ತಾಗಿ ದೆಹಲಿಗೆ ಬರುವಂತೆ ಫೋನ್ ಕರೆ, ಹಲೋ ಎಂದ ಸೋಮಣ್ಣ ಹೈಕಮಾಂಡ್ಗೆ ಹೇಳಿದ್ದಿಷ್ಟು
ಪಕ್ಷದ ಕಾರ್ಯಚಟುವಟಿಕೆಗಳಿಂದ ಅಂತರ ಕಾಪಾಡಿಕೊಂಡಿರುವ ಮಾಜಿ ಸಚಿವ ವಿ ಸೋಮಣ್ಣ ಅವರು ಏನೇನೋ ಯೋಚನೆಯಲ್ಲಿದ್ದಾರೆ ಈ ಹಿನ್ನೆಲೆಯಲ್ಲಿ ಅವರ ರಾಜಕೀಯ ನಡೆ ನಿಗೂಢವಾಗಿದೆ. ಇದರ ಮಧ್ಯೆ ಹೈಕಮಾಂಡ್ ಫೋನ್ ಕರೆ ಮಾಡಿ ತುರ್ತಾಗಿ ದೆಹಲಿಗೆ ಬರುವಂತೆ ಹೇಳಿದೆ. ಆದ್ರೆ, ಇತ್ತ ಹಲೋ ಎಂದು ಫೋನ್ ಕರೆ ಸ್ವೀಕರಿಸಿದ ಸೋಮಣ್ಣ, ಹೈಕಮಾಂಡ್ಗೆ ಏನು ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ ನೋಡಿ.
ತುಮಕೂರು, (ಡಿಸೆಂಬರ್ 12): ಮಾಜಿ ಸಚಿವ ವಿ ಸೋಮಣ್ಣ(V Somanna) ಪಕ್ಷದ ಮೇಲೆ ಅಸಮಾಧಾನಗೊಂಡಿದ್ದು, ಬಿಜೆಪಿ(BJP) ತೊರೆದು ಕಾಂಗ್ರೆಸ್(Congress) ಸೇರುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಬೆಂಬಲಿಗರ ಮೂಲಕ ಸೋಮಣ್ಣಗೆ ಗಾಳ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಸೋಮಣ್ಣಗೆ ಕರೆ ಮಾಡಿ ತುರ್ತಾಗಿ ದೆಹಲಿಗೆ ಬರುವಂತೆ ಹೇಳಿದೆ. ಇನ್ನು ದೆಹಲಿಯಿಂದ ಬಂದ ಫೋನ್ ಕರೆ ಬಗ್ಗೆ ಸ್ವತಃ ಸೋಮಣ್ಣ ಅವರೇ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ.
ಇಂದು (ಡಿಸೆಂಬರ್ 12) ತುಮಕೂರಿನ ಹನುಮಂತಪುರದ ಕೊಲ್ಲಾಪುರದಮ್ಮ ದೇವಾಲಯಕ್ಕೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿ ಸೋಮಣ್ಣ, ನಿನ್ನೆ(ಡಿಸೆಂಬರ್ 11) ಮಧ್ಯಾಹ್ನ ವಿಜಯಪುರಕಕ್ಕೆ ಹೋಗುವಾಗ ದೆಹಲಿಯಿಂದ ಕರೆ ಬಂದಿದ್ದು, ತುರ್ತಾಗಿ ಬರುವಂತೆ ಹೇಳಿದ್ದಾರೆ. ಆದ್ರೆ, ನಾನು ನಾಳೆ, ನಾಡಿದ್ದು ಬರುವುದಕ್ಕೆ ಆಗಲ್ಲ ಎಂದು ಹೇಳಿದ್ದೇನೆ. ಎರಡ್ಮೂರು ದಿನದಲ್ಲಿ ನನ್ನ ತಾಯಿ ಆರಾಧನೆ ಇದೆ. ಅದನ್ನು ಮುಗಿಸಿಕೊಂಡು ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಮಠಮಾನ್ಯಗಳ ಮೂಲಕ ಸೋಮಣ್ಣ ಮನವೊಲಿಕೆಗೆ ಯತ್ನ, ಹೈಕಮಾಂಡ್ಗೆ ಒಂದು ಖಡಕ್ ಮಾತು ಹೇಳಿದ ಸ್ವಾಮೀಜಿ
ತಾಯಿ ಆರಾಧನೆ ಕಾರ್ಯಕ್ರಮ ಮುಗಿದ ದಿನ ರಾತ್ರಿ ಮತ್ತೆ ದೆಹಲಿಗೆ ಪೋನ್ ಮಾಡಿ ಡೇಟ್ ತೆಗೆದುಕೊಳ್ಳುತ್ತೇನೆ. ನಾನು ಎಳೆ ಮಗುವಲ್ಲ. ಆರೇಳು ಜನ ಸಿಎಂ ಗಳ ಜೊತೆ ಕೆಲಸ ಮಾಡಿದ್ದೇನೆ. ನಲವತ್ತು ವರ್ಷ ರಾಜಕೀಯ ಅಧಿಕಾರಾವಧಿಯಲ್ಲಿ ನನ್ನ ವೈಯಕ್ತಿಕ ಬದುಕಿನಲ್ಲಿ ಯಾರೊಬ್ಬರು ಬೆಟ್ಟು ಮಾಡಿ ತೋರಿಸಿಲ್ಲ. ವಿಧಿ ಲಿಖಿತ ಏನಿದೇಯೋ ಹಾಗೇ ಆಗುತ್ತೆ. ಒಂದು ಸೂಚನೆಯೂ ಇರುವುದರಿಂದ ನಾನು ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ತಿಳಿಸಿದರು.
ವಿಧಾನಸಭೆ ಚುನಾವಣೆ ಎರಡೂ ಕಡೆ ಸೋತು ಕಂಗಾಲಾಗಿರುವ ಸೋಮಣ್ಣಗೆ ಒಂದು ಸಿಟ್ಟು ಇದ್ದರೆ, ಮತ್ತೊಂದೆಡೆ ಕೆಲ ನಾಯಕರ ನಡೆಗೆ ಬೇಸರಗೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತು ಕಾಂಗ್ರೆಸ್ ಸೇರಬೇಕೆನ್ನುವ ಆಲೋಚನೆಯಲ್ಲಿದ್ದಾರೆ. ಅಲ್ಲದೇ ಕಾಂಗ್ರೆಸ್ನಿಂದಲೇ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು ಸೋಮಣ್ಣ ಕಾಂಗ್ರೆಸ್ ಗಾಳಕ್ಕೆ ಬೀಳುತ್ತಿರುವುದನ್ನು ಅರಿತ ಹೈಕಮಾಂಡ್, ಈಗಾಗಲೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಐದು ರಾಜ್ಯಗಳ ಚುನಾವಣೆ ಬಳಿಕ ಕುಳಿತು ಚರ್ಚೆ ಮಾಡೋಣ ಎಂದು ಹೇಳಿತ್ತು. ಅದಂತೆ ಇದೀಗ ಹೈಕಮಾಂಡ್, ಖುದ್ದು ಸೋಮಣ್ಣಗೆ ಫೋನ್ ಕರೆ ಮಾಡಿ ಮಾತುಕತೆಗೆ ಆಹ್ವಾನಿಸಿದೆ. ಈ ಹಿನ್ನೆಲೆಯಲ್ಲಿ ಸೋಮಣ್ಣ ನಡೆ ತೀವ್ರ ಕುತೂಹಲ ಮೂಡಿಸಿದೆ.
ಸೋಮಣ್ಣರನ್ನು ಉಳಿಸಿಕೊಳ್ಳಲು ಹೈಕಮಾಂಡ್ ಪ್ಲ್ಯಾನ್
ಇನ್ನು ಪಕ್ಷದಿಂದ ಹೋಗದಂತೆ ಸೋಮಣ್ಣ ಅವರನ್ನು ಉಳಿಸಿಕೊಳ್ಳಲು ಹೈಕಮಾಂಡ್ ಮೆಗಾ ಪ್ಲ್ಯಾನ್ ಮಾಡಿದೆ. ಕಾಂಗ್ರೆಸ್ನಿಂದ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ರೆಡಿಯಾಗಿರುವ ಸೋಮಣ್ಣ ಅವರಿಗೆ ಅದೇ ಕ್ಷೇತ್ರದ ಟಿಕೆಟ್ ನೀಡುವ ಪ್ಲ್ಯಾನ್ ಮಾಡಿದೆ. ಇದರೊಂದಿಗೆ ಸೋಮಣ್ಣ ಕನಸು ನನಸು ಮಾಡುವ ಮೂಲಕ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ತಂತ್ರವನ್ನು ಹೈಕಮಾಂಡ್ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆದ್ರೆ, ಈ ಬಾರಿ ತುಮಕೂರಿನಿಂದ ಸ್ಪರ್ಧಿಸಲು ಮುದ್ದಹನುಮೇಗೌಡ ಕಸರತ್ತು ನಡೆಸಿದ್ದಾರೆ. ತುಮಕೂರು ಲೋಕಸಭಾ ಟಿಕೆಟ್ ಭರವಸೆ ನೀಡಿಯೇ ಹನುಮೇಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಇದೀಗ ಸೋಮಣ್ಣ ಸಹ ಪೈಪೋಟಿ ನಡೆಸುತ್ತಿರುವುದರಿಂದ ಅಂತಿಮವಾಗಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಎನ್ನುವುದು ಕುತೂಹಲ ಮೂಡಿಸಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:52 pm, Tue, 12 December 23