ಬಳ್ಳಾರಿಯಲ್ಲಿ ವಿಮಾನ ನಿಲ್ದಾಣವಾದರೆ ಶ್ರೀ ಹನುಮಾನ್ ಎಂದು ನಾಮಕರಣ ಮಾಡಲಿ: ಗಾಲಿ ಜನಾರ್ದನ ರೆಡ್ಡಿ

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರು ಇಡಲಾಗಿದೆ. ಅದೇ ರೀತಿ, ಬಳ್ಳಾರಿಯಲ್ಲಿ ವಿಮಾಣ ನಿಲ್ದಾಣವಾದರೆ ಅದಕ್ಕೆ ರಾಮನ ಬಂಟ ಹನುಮಂತನ ಹೆಸರು ನಾಮಕರಣ ಮಾಡಬೇಕು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ವಿಮಾನ ನಿಲ್ದಾಣವಾದರೆ ಶ್ರೀ ಹನುಮಾನ್ ಎಂದು ನಾಮಕರಣ ಮಾಡಲಿ: ಗಾಲಿ ಜನಾರ್ದನ ರೆಡ್ಡಿ
ಗಾಲಿ ಜನಾರ್ದನ ರೆಡ್ಡಿImage Credit source: Facebook
Follow us
ಕಿರಣ್​ ಹನಿಯಡ್ಕ
| Updated By: Rakesh Nayak Manchi

Updated on: Dec 12, 2023 | 3:20 PM

ಬೆಳಗಾವಿ, ಡಿ.12: ಅಯೋಧ್ಯೆಯಲ್ಲಿ ಶ್ರೀರಾಮ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಇದೆ. ಬಳ್ಳಾರಿ (Ballari) ಏರ್‌ಪೋರ್ಟ್ ಆದರೆ ಅದಕ್ಕೆ ಶ್ರೀ ಹನುಮಾನ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಅಂತ ನಾಮಕರಣ ಮಾಡಲಿ ಅಂತಾ ನನ್ನ ಆಸೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ (Gali Janardhana Reddy) ಹೇಳಿದರು. ಬೆಳಗಾವಿ ಅಧಿವೇಶನದಲ್ಲಿ (Belagavi Session) ಮಾತನಾಡಿದ ಅವರು, ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲಿ ಏರ್ ಬಸ್​ಗಳು ಇವತ್ತು ಬರುತ್ತಿವೆ ಅಂದರೆ ನಾನು ಮಾಡಿದ ಕೆಲಸ ಕಾರಣ. ದುರಾದೃಷ್ಟ ಅಂದರೆ ನಾನು ಹುಟ್ಟಿ ಬೆಳೆದ ಬಳ್ಳಾರಿಯಲ್ಲಿ ಇದುವರೆಗೆ ಏರ್‌ಪೋರ್ಟ್ ಆಗಿಲ್ಲ ಎಂದರು.

ವಿಜಯನಗರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಹೆಸರಲ್ಲಿ ನಾನು ಜೂವಾಲಾಜಿಕಲ್ ಪಾರ್ಕ್ ಕಟ್ಟಿದ್ದೆ. ಅಲ್ಲಿ ನೈಟ್ ಸಫಾರಿ, ಥೀಮ್ ಪಾರ್ಕ್, ಶ್ರೀಕೃಷ್ಣದೇವರಾಯನ ಪ್ರತಿಮೆಯನ್ನು ಇಂಗ್ಲೆಂಡಿನ ಲೇಡಿ ಲಿಬರ್ಟಿ ಪ್ರತಿಮೆ ತರಹ ಮಾಡಬೇಕೆಂಬ ಆಸೆ ಇತ್ತು. ತುಂಗಭದ್ರ ನದಿಯಲ್ಲಿ ಸೌಂಡ್ ಅಂಡ್ ಲೈಟ್ ಮಾಡಬೇಕೆಂಬ ಆಸೆ ಇತ್ತು. ಇವೆಲ್ಲಾ ಕನಸುಗಳನ್ನು 13-14 ವರ್ಷಗಳ ಹಿಂದೆಯೇ ನಾನು ಕಂಡಿದ್ದೆ. ಈಗಿನ ಸರ್ಕಾರ ಈ ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಂದರು.

ಬಳ್ಳಾರಿಗೆ ಯಾರ್ಯಾರು ಏನೇನು ಕೆಲಸ ಮಾಡಿದ್ದಾರೆ ಅಂತ ಎದೆ ಮೇಲೆ ಕೈ ಇಟ್ಟು ಮಾತಾಡಲಿ. ರಾಜಕೀಯಕ್ಕಾಗಿ ವಿರೋಧ ಮಾಡುವವರು ಮಾಡಬಹುದು. ಅವರು ಮನೆಯಲ್ಲಿ ಹೋಗಿ ಬಳ್ಳಾರಿ ಅಭಿವೃದ್ಧಿಗೋಸ್ಕರ ಜನಾರ್ದನ ರೆಡ್ಡಿ ಕೆಲಸ ಮಾಡಿದ್ದಾನೋ ಇಲ್ಲವೋ ಅಂತಾ ದೇವರ ಮುಂದೆ ಕೇಳಿಕೊಳ್ಳಲಿ ಎಂದರು.

ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರಕ್ಕೆ ಬಂದರೆ ನನಗೆ ಪಕ್ಷಗಳು ನಗಣ್ಯ: ಬಸನಗೌಡ ಪಾಟೀಲ್ ಯತ್ನಾಳ್

ನಾನು ಹೇಳಿದ್ದನ್ನು ತಪ್ಪಾಗಿ ಅರ್ಥ ಮಾಡಿಕೊಂಡರೆ ಅದು ಅವರ ಕರ್ಮ. ನನ್ನ ವಿರುದ್ಧ ಗಣಿ ಕೇಸ್​ಗಳನ್ನು ಹಾಕಲಾಗಿದೆ. ನ್ಯಾಯಾಲಯ ಇದೆ, ನಾನು ಪ್ರಕರಣಗಳಿಗೆ ಹೆದರುವುದಿಲ್ಲ ಎಂದರು. ಸರ್ಕಾರ ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಮಾಡಬೇಕು. ಬಳ್ಳಾರಿಯಲ್ಲಿ ಅಂತರಾಷ್ಟ್ರೀಯ ಸ್ಟೇಡಿಯಂ ಕಟ್ಟಬೇಕಿದೆ. ಸರ್ಕಾರ ಈ ವಿಷಯದಲ್ಲಿ ಗಮನ ಕೊಡಲಿ ಎಂದರು.

ಬಳ್ಳಾರಿಯಲ್ಲಿ ಮೈನಿಂಗ್ ಟ್ಯಾಕ್ಸ್​ನಿಂದ 17 ಸಾವಿರ ಕೋಟಿ ಸಂಗ್ರಹ ಆಗಿದೆ. ಈ‌ ಹಣ ಬಳ್ಳಾರಿ ಅಭಿವೃದ್ಧಿಗೆ ಬಳಕೆ ಮಾಡಬೇಕು ಅಂತ ಕೋರ್ಟ್ ಆದೇಶ ಆಗಿದೆ. ಇದರ ಬಗ್ಗೆ ಕೋರ್ಟಿನಲ್ಲಿ ಗಣಿ ಮಾಲೀಕರು 13 ವರ್ಷಗಳಿಂದ ಹೋರಾಟ ಮಾಡಿದ್ದಾರೆ. ಈಗ ಆ ಹಣ 24 ಸಾವಿರ ಕೋಟಿ ಆಗಿದೆ. ಈ ಹಣದಿಂದ ಬಳ್ಳಾರಿ ಅಭಿವೃದ್ಧಿ ಮಾಡಬಹುದು ಎಂದರು.

ರಾಜ್ಯ ಸರ್ಕಾರದ ಮೇಲೆ‌ ಭಾರ ಹಾಕುವ ಬದಲು ಬಳ್ಳಾರಿ ಶಾಸಕರು ಬಳ್ಳಾರಿ ಅಭಿವೃದ್ಧಿಗೆ ಪ್ಲಾನ್ ಮಾಡಿ. ನನಗೆ ಕ್ರೆಡಿಟ್ ಕೊಡುವುದು ಬೇಡ. ನಿಮಗೆ ಒಳ್ಳೆಯದು ಮಾಡಿ ಅಂತ ಹೇಳುತ್ತಿದ್ದೇನೆ ಅಷ್ಟೆ. ನನಗೆ ಬಳ್ಳಾರಿಗೆ ಪ್ರವೇಶಕ್ಕೆ ಅವಕಾಶವೇ ಇಲ್ಲ, ನನಗೆ ಕ್ರೆಡಿಟ್ ಬೇಡ ಎಂದರು.

ಜನಾರ್ದನ ರೆಡ್ಡಿ ಮಾತಾಡುವಾಗ ಪದೇ ಪದೇ ಸಂಡೂರು ಶಾಸಕ ತುಕಾರಾಂ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ನೀವು ನಂತರ ಮಾತನಾಡಿ ತನ್ನ ಪ್ರತೀ ಪಾಯಿಂಟ್​ಗೂ ಉತ್ತರ ಕೊಡಿ ಎಂದು ತುಕಾರಾಂಗೆ ಹೇಳಿದ ಜನಾರ್ದನ ರೆಡ್ಡಿ ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಯುಟಿ ಖಾದರ್, “ಸುಮ್ನಿರಿ ತುಕಾರಾಂ, ರೆಡ್ಡಿಯವರಿಗೆ ಮಾತಾಡಲು ಬಿಡಿ” ಅಂತ ಗರಂ ಆದರು.

ಇದನ್ನೂ ಓದಿ: ಬಿಜೆಪಿ ಜೊತೆ ಕೆಆರ್​ಪಿಪಿಯನ್ನು ವಿಲೀನಗೊಳಿಸುವ ದೂರದ ಯೋಚನೆಯೂ ನನ್ನ ಮನಸ್ಸಲ್ಲಿ ಸುಳಿಯದು: ಗಾಲಿ ಜನಾರ್ಧನ ರೆಡ್ಡಿ

ಜನಾರ್ದನ ರೆಡ್ಡಿ ಮಾತನಾಡುವ ವೇಳೆ ಬಳ್ಳಾರಿ ಜಿಲ್ಲೆಯ ಶಾಸಕರಾದ ತುಕಾರಾಂ, ನಾರಾ ಭರತ್ ರೆಡ್ಡಿ ಮತ್ತೆ ಆಕ್ಷೇಪ ವ್ಯಕ್ತಪಡಿಸಿದರು. ಬಳ್ಳಾರಿ ಅಭಿವೃದ್ಧಿ ನಾವು ಮಾಡುತ್ತಿದ್ದೇವೆ, ಇನ್ನಷ್ಟು ಅಭಿವೃದ್ಧಿ ಮಾಡುತ್ತೇವೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಹೇಳಿದರು. ಇದಕ್ಕೆ ಟಕ್ಕರ್ ಕೊಟ್ಟ ರೆಡ್ಡಿ, ನೀನು ಚಿಕ್ಕವಯಸ್ಸಿನಿಂದ ನನ್ನ ಜೊತೆಯೇ ಇದ್ದ ಕಾರಣ ನನ್ನ ಕನಸುಗಳು ನಿನಗೆ ಗೊತ್ತಿದೆ ಎಂದರು.

ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ

ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ವೇಳೆ ಬಳ್ಳಾರಿ ಜಿಲ್ಲೆ ಅಭಿವೃದ್ಧಿ ಬಗ್ಗೆ ಶಾಸಕ ಜನಾರ್ದನ ರೆಡ್ಡಿ ಪ್ರಸ್ತಾಪ ಮಾಡಿದರು. 2008ಕ್ಕೂ ಮೊದಲು ಬಳ್ಳಾರಿ ಹಿಂದುಳಿದ ಜಿಲ್ಲೆಯಾಗಿತ್ತು. 2008ರಲ್ಲಿ ನಾವು ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕೆಲಸ ಆಯ್ತು. ದುರಾದೃಷ್ಟವಶಾತ್​​ ನನ್ನ ವ್ಯಾಪಾರದ ಬಗ್ಗೆ ತಪ್ಪು ಆರೋಪ ಮಾಡಿ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಯಿತು ಎಂದರು.

ನಾನು ಮಾಡಿದ್ದ ಕೆಲಸಗಳ ಬಳಿಕ ಬಳ್ಳಾರಿಯಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ರೆಡ್ಡಿ ಹೇಳಿದಾಗ, ಬಳ್ಳಾರಿ ಜಿಲ್ಲೆಯಲ್ಲಿ ಏನೇನು ಮಾಡಿದ್ದೇವೆ ಅಂತ ನೋಡಿ ಎಂದು ಸಂಡೂರು ಶಾಸಕ ತುಕಾರಾಂ ಹೇಳಿದರು. ಸಂಡೂರಿನಲ್ಲಿ ಏನಾಗಿದೆ ಅಂತ ಬಂದು ನೋಡಿ, ಸುಮ್ನೆ ಆರೋಪಿಸಬೇಡಿ. ನಾವು ಕೆಲಸ ಮಾಡಿಲ್ಲ ಅಂತಾ ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದರು.

ಬಳ್ಳಾರಿ ಅಭಿವೃದ್ಧಿ ಆಗಿಲ್ಲ ಎಂಬ ಹೇಳಿಕೆಗೆ ಜಿಲ್ಲೆಯ ಶಾಸಕರು ಗರಂ ಆದಾಗ, ನಾನು ಯಾರ ಹೆಸರನ್ನೂ ಉಲ್ಲೇಖ ಮಾಡಿಲ್ಲ ಎಂದು ಜನಾರ್ದನರೆಡ್ಡಿ ಹೇಳಿದರು. ನನ್ನ ವಿರುದ್ಧ ಕುತಂತ್ರ ಮಾಡಿದವರ ಹೆಸರನ್ನೂ ನಾನು ಹೇಳಲ್ಲ. ನನಗೆ ಮಾತಾಡಲು ಅವಕಾಶ ಕೊಡಿ, ತೊಂದರೆ ಮಾಡಬೇಡಿ ಎಂದರು.

ವಿಜಯನಗರ ಜಿಲ್ಲೆಗೆ ನಿಜಲಿಂಗಪ್ಪ ಎಂದು ಮರುನಾಮಕರಣ ಮಾಡಲಿ: ಜನಾರ್ದನ ರೆಡ್ಡಿ

ಬಳ್ಳಾರಿಗೆ ವಿಜಯನಗರ ಜಿಲ್ಲೆ ಅಂತ ಹೆಸರಿಡಲಿ. ಈಗಿನ ವಿಜಯನಗರ ಜಿಲ್ಲೆಗೆ ನಿಜಲಿಂಗಪ್ಪ ಎಂದು ಮರುನಾಮಕರಣ ಮಾಡಲಿ. ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ ತಾಲೂಕು ಸೇರಿಸಿ ನಿಜಲಿಂಗಪ್ಪ ಜಿಲ್ಲೆ ಅಂತ ನಾಮಕರಣ ಮಾಡಲಿ ಎಂದು ಜನಾರ್ದನ ರೆಡ್ಡಿ ಹೇಳಿದರು. ಬಳ್ಳಾರಿ ವಿಭಜಿಸಿ ವಿಜಯನಗರ ಜಿಲ್ಲೆ ರಚನೆ ಮಾಡಿದ್ದಕ್ಕೆ ದುಃಖವಿದೆ. ನನಗೆ ಮಾತ್ರವಲ್ಲ ಸಾಕಷ್ಟು ಜನರಿಗೆ ಈ ನೋವು ಇದೆ. ಬಳ್ಳಾರಿ ಜಿಲ್ಲೆಗೆ ವಿಜಯನಗರ ಎಂದು ಮರುನಾಮಕರಣ ಮಾಡಬೇಕು. ವಿಜಯನಗರ ಬಳ್ಳಾರಿ ಜಿಲ್ಲಾ ಕೇಂದ್ರವಾಗಿ ಮುಂದುವರಿಯಬೇಕು. ಪ್ರವಾಸಿತಾಣ ಹಂಪೆಯನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಬೇಕು. ಇನ್ನೂ ಬದಲಾವಣೆ ಮಾಡಲು ಅವಕಾಶವಿದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ