ಸಂಪುಟ ವಿಸ್ತರಣೆ ಬಗ್ಗೆ ಮತ್ತೆ ಮಹತ್ವದ ಸುಳಿವು ಕೊಟ್ಟ ಬೊಮ್ಮಾಯಿ: ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆಗಳು
ಒಂದೆಡೆ ಕರ್ನಾಟಕ ವಿಧಾನಸಭೆ ಚುನಾವಣೆ ಕಾವು ಏರುತ್ತಿದ್ರೆ, ಮತ್ತೊಂದೆಡೆ ಮತ್ತೆ ಸಂಪುಟ ವಿಸ್ತರಣೆಯ ಸರ್ಕಸ್ ಶುರುವಾಗಿದ್ದು, ಬೊಮ್ಮಾಯಿ ಮತ್ತೆ ಸಂಪುಟ ವಿಸ್ತರಣೆ ಬಗ್ಗೆ ಮಹತ್ವದ ಸುಳಿವು ಕೊಟ್ಟಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023)ಇನ್ನು ಕೇವಲ ಆರು ತಿಂಗಳಷ್ಟೇ ಬಾಕಿ ಉಳಿದಿದ್ದು, ಈಗಿನಿಂದಲೇ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ಜನ ಸಂಕಲ್ಪ ಯಾತ್ರೆ ನಡೆಸುತ್ತಿದೆ. ಇದರ ಮಧ್ಯೆ ಮತ್ತೆ ಸಂಪುಟ ವಿಸ್ತರಣೆಯ (Cabinet Expansion) ಸರ್ಕಸ್ ಪ್ರಾರಂಭವಾಗಿದೆ. ಒಂದೆಡೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ರೆ, ಮತ್ತೊಂದೆಡೆ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಸಚಿವಾಕಾಂಕ್ಷಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಆದ್ರೆ, ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ. ಇದೀಗ ಬೊಮ್ಮಾಯಿ ಅವರು ಮತ್ತೆ ಸಚಿವ ಸಂಪುಟದ ಬಗ್ಗೆ ಮಹತ್ವದ ಸುಳಿವು ಕೊಟ್ಟಿದ್ದಾರೆ.
ಮತ್ತೆ ಪ್ರತಿಧ್ವನಿಸಿದ ದಲಿತ CM ಕೂಗು: ದಲಿತ ಸಿಎಂ ಮಾಡಬೇಕೆಂದು ನಮ್ಮ ಪಕ್ಷಕ್ಕೆ ಆಗ್ರಹಿಸುತ್ತೇನೆ ಎಂದ ಬಿಜೆಪಿ ಸಂಸದ
ಹೌದು…ಗುಜರಾತ್ ಚುನಾವಣೆ ಮುಗಿದ ಬಳಿಕ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಳಿವು ನೀಡಿದ್ದಾರೆ ಎಂದು ಕೆಲ ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿವೆ. ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರು ಗುಜರಾತ್ ಚುನಾವಣೆಯಲ್ಲಿ ಬ್ಯುಸಿಯಾಗಿದ್ದರಿಂದ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ. ಈಗಾಗಲೇ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ್ದು, ಗುಜರಾತ್ ಎಲೆಕ್ಷನ್ ಮುಗಿದ ನಂತರ ಹೈಕಮಾಂಡ್ ಚರ್ಚೆಗೆ ಕರೆಯುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ ಎಂದು ಎನ್ಡಿಟಿ ವರದಿ ಮಾಡಿದೆ.
ಒತ್ತಡದಲ್ಲಿ ಬೊಮ್ಮಾಯಿ
ಯೆಸ್…ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಪಕ್ಷದಲ್ಲಿನ ಹೆಚ್ಚಿನ ಕಾರ್ಯ ನಿರ್ವಹಿಸುವ ಅಗತ್ಯವಿದ್ದು, ಈ ಬಾರಿ ಸಂಪುಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಚಿವರನ್ನು ಸೇರ್ಪಡೆಗೊಳಿಸುವ ಸಾಧ್ಯತೆಗಳಿದ್ದು, ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತಿದೆ ಎನ್ನಲಾಗಿದೆ. ಸಂಪುಟದಲ್ಲಿ ಈಗಾಗಲೇ ಕೆಲ ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದ್ದು, ಈ ಬಾರಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಲ್ಲಿ ಇನ್ನೂ ಕೆಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಬಸವರಾಜ ಬೊಮ್ಮಾಯಿ ಅವರು ಒಂದು ಕಡೆ ಮುಂದಿನ ಚುನಾವಣೆಗೆ ತಯಾರಿ ನಡೆಸಿರುವ ಮಧ್ಯೆ ಸಂಪುಟ ವಿಸ್ತರಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಹೈಕಮಾಂಡ್ ಸಚಿವ ಸಂಪುಟಕ್ಕೆ ಗ್ರೀನ್ ಸಿಗ್ನಲ್ ನೀಡಿದ್ರೆ, ಹನುಮಂತನ ಬಾಲದಂತಿರುವ ಸಚಿವಾಕಾಂಕ್ಷಿಗಳ ಪಟ್ಟಿಯಲ್ಲಿ ಯಾರಿಗೆ ನೀಡಬೇಕೆಂದು ಬೊಮ್ಮಾಯಿ ಒತ್ತಡಕ್ಕೆ ಸಿಲುಕಿದ್ದಾರೆ.
ಇನ್ನು ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ಶಾಸಕರಿಗೆ ಮಣೆ ಹಾಕುವ ಸಾಧ್ಯತೆಗಳಿವೆ. ಈ ಬಾರಿಯ ಸಂಪುಟ ವಿಸ್ತರಣೆ ವೇಳೆ ಕಾರ್ಯನಿರ್ವಹಿಸದ ಕೆಲ ಸಚಿವರನ್ನು ಕೈಬಿಡಲು ಚಿಂತನೆ ನಡೆಸಲಾಗಿದ್ದು, 10-11 ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತಿದೆ ಎನ್ನಲಾಗಿದೆ.
ಬೇಸರಗೊಂಡಿರುವ ಸಚಿವಾಕಾಂಕ್ಷಿಗಳು
ಸಂಕ್ರಾಂತಿ, ಯುಗಾದಿ, ಆಷಾಢ ಮಾಸ, ದಸರಾ, ದೀಪಾವಳಿ ಹೀಗೆ ಇದು ಕಳೆದ ಮೇಲೆ, ಅದು ಕಳೆದ ಮೇಲೆ ಸಚಿವ ಸಂಪುಟ ವಿಸ್ತರಣೆಯಾಗುತ್ತೆ ಎಂದು ನಿರೀಕ್ಷೆ ಇಟ್ಟುಕೊಂಡವರೆಲ್ಲಾ ಕಳೆದೊಂದು ವರ್ಷದಿಂದ ಕಾದು ಕಾದು ಬೇಸರಗೊಂಡಿದ್ದಾರೆ. ಅದರಲ್ಲೂ ಕೆಎಸ್ ಈಶ್ವರಪ್ಪ ಮತ್ತೆ ಸಂಪುಟಕ್ಕೆ ಸೇರಲು ತುದಿಗಾಲಲ್ಲಿ ನಿಂತಿದ್ದು, ವಿಳಂಬವಾಗುತ್ತಿರುವುದರಿಂದ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿರುವುದನ್ನು ಗಮನಿಸಿಬಹುದು.
ಒಟ್ಟಿನಲ್ಲಿ ಡಿಸೆಂಬರ್ನಲ್ಲಿ ಗುಜರಾತ್ ಎಲೆಕ್ಷನ್ ಮುಗಿಯಲಿದ್ದು, ಹೊಸ ವರ್ಷಕ್ಕೆ ಬೊಮ್ಮಾಯಿ ಸಂಪುಟ ವಿಸ್ತರಣೆಯಾಗುವ ಎಲ್ಲಾ ಸಾಧ್ಯತೆಗಳಿವೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Tue, 8 November 22