ಮತ್ತೆ ಪ್ರತಿಧ್ವನಿಸಿದ ದಲಿತ CM ಕೂಗು: ದಲಿತ ಸಿಎಂ ಮಾಡಬೇಕೆಂದು ನಮ್ಮ ಪಕ್ಷಕ್ಕೆ ಆಗ್ರಹಿಸುತ್ತೇನೆ ಎಂದ ಬಿಜೆಪಿ ಸಂಸದ
ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಕೂಗು ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತ್ತೆ ದಲಿತ ಸಿಎಂ ಕೂಗು ಕೇಳಿಬಂದಿದೆ.
ವಿಜಯಪುರ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಐದಾರು ತಿಂಗಳು ಬಾಕಿ ಉಳಿದಿದ್ದು, ಆಗಲೇ ನಾಯಕರುಗಳು ಕ್ಷೇತ್ರದಲ್ಲಿ ಬೀಡುಬಿಟ್ಟು ಮತದಾರರನ್ನು ಹಿಡಿದಿಟ್ಟುಕೊಳ್ಳುವ ತಂತ್ರಗಳನ್ನ ಮಾಡುತ್ತಿದ್ದಾರೆ. ಇನ್ನು ಕೆಲವರು ಟಿಕೆಟ್ಗಾಗಿ ಭರ್ಜರಿ ಕಸರತ್ತು ನಡೆಸಿದ್ದಾರೆ. ಇದರ ಮಧ್ಯೆ ಹಿಂದೆ ಕೇಂದ್ರದಲ್ಲಿ ಸಚಿವರಾಗಿದ್ದ, ವಿಜಯಪುರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಅವರ ಚಿತ್ತ ರಾಜ್ಯ ರಾಜಕಾರಣದತ್ತ ನೆಟ್ಟಿದೆ. ಅಲ್ಲದೇ ದಲಿತರನ್ನು ಸಿಎಂ ಮಾಡುವಂತೆ ಬಿಜೆಪಿ ಹೈಕಮಾಂಡ್ಗೆ ಒತ್ತಾಯಿಸಿದ್ದಾರೆ.
ಹೌದು..ಈ ಬಗ್ಗೆ ಇಂದು (ಮಂಗಳವಾರ) ಇಂಡಿಯಲ್ಲಿ ಮಾತನಾಡಿರುವ ರಮೇಶ್ ಜಿಗಜಿಣಗಿ, ನಾಗಠಾಣ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಪ್ರತಿಯೊಬ್ಬ ವ್ಯಕ್ತಿಯ ಅಭಿಪ್ರಾಯವಿದೆ. ಆ ಭಾಗದ ಶಾಸಕನಾಗಿ ಸಚಿವನಾಗಿ ಜನಪರ ಸೇವೆಗಳನ್ನ ಮಾಡಿದ್ದೇನೆ ಎಂದು ಹೇಳಿದರು. ಈ ಮೂಲಕ ಪರೋಕ್ಷವಾಗಿ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು.
ನಾನೇ ಅಭ್ಯರ್ಥಿ ಆಗಬೇಕೆಂದು ಸಾಕಷ್ಟು ಒತ್ತಡವಿದ್ದರೂ ನಾನು ಇನ್ನೂ ಒಪ್ಪಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ ನಾನು ಎಲ್ಲಿ ಸ್ಪರ್ಧೆ ಮಾಡಬೇಕೆಂಬ ತೀರ್ಮಾನವನ್ನ ಪಕ್ಷದ ಮುಖಂಡರು ತೀರ್ಮಾನ ಮಾಡುತ್ತಾರೆ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಕೆಂದು ಹೇಳಿದರೆ ಸ್ಪರ್ಧಿಸುತ್ತೇನೆ. ಲೋಕಸಭೆಗೆ ಸ್ಪರ್ಧಿಸಿ ಎಂದರೆ ಅಲ್ಲಿ ಸ್ಪರ್ಧಿಸುತ್ತೇನೆ. ಎರಡು ಕಡೆ ಬೇಡವೆಂದರೆ ಮನೆಯಲ್ಲಿ ಆರಾಮಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ದಲಿತ ಸಿಎಂ ಆಗಬೇಕೆಂಬ ಹೋರಾಟವನ್ನು ನಾನು ಕೊನೆ ಉಸಿರಿರೊವರೆಗೂ ಮಾಡುತ್ತೇನೆ. ರಾಜ್ಯದಲ್ಲಿ ದಲಿತರು ಅಯೋಗ್ಯರಾ ಎಂದು ಪ್ರಶ್ನೆ. ದಲಿತರಿಗೆ ಬುದ್ದಿ ಇಲ್ವಾ? 75 ವರ್ಷಗಳಾಯಿತು ಎಲ್ಲಾ ಸಮಾಜದವರು ಸಿಎಂ ಆಗಿದ್ದಾರೆ. ಒಂದು ಪರ್ಸೆಂಟ್ ಎರಡು ಪರ್ಸೆಂಟ್ ಜನ ಇದ್ದವರು ಸಿಎಂ ಆಗಿ ಹೋದರು. 24 ಪ್ರತಿಶತ ಜನಸಂಖ್ಯೆ ಇರುವ ದಲಿತರು ಯಾಕೆ ರಾಜ್ಯದ ಸಿಎಂ ಆಗಬಾರದು. ದಲಿತ ಸಿಎಂ ಮಾಡಬೇಕೆಂದು ನಮ್ಮ ಪಕ್ಷಕ್ಕೆ ಆಗ್ರಹ ಮಾಡುತ್ತೇನೆ ಎಂದು ಹೇಳಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ