
ಬೆಂಗಳೂರು, ಏಪ್ರಿಲ್ 17: ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಧಾರಿತ ಜಾತಿ ಗಣತಿ (Caste Census) ವರದಿ ಜಾರಿ ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಜಾತಿ ಗಣತಿ ಜಾರಿ ವಿಚಾರವಾಗಿ ರಾಜಕೀಯ ಸಮರ ತಾರಕಕ್ಕೇರಿದೆ. ಮೂರೂ ಪಕ್ಷಗಳು ಈಗ ತನ್ನದೇ ಆದ ಲೆಕ್ಕಾಚಾರಮಾಡುತ್ತಿವೆ. ಜಾತಿ ಗಣತಿ ವರದಿ ಜಾರಿಯಾದ್ರೆ ಒಟ್ಟಾಗಿ ಹೋರಾಟ ಮಾಡುವ ಕರೆಯನ್ನು ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಕರೆ ಕೊಟ್ಟಿವೆ.
ಈ ಎಲ್ಲ ಬೆಳವಣಿಗೆಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಗುರುವಾರ (ಏ.17) ವಿಶೇಷ ಸಚಿವ ಸಂಪುಟ ಸಭೆ (Cabinet Meeting) ನಡೆಸುತ್ತಿದ್ದಾರೆ. ಈ ಸಂಪುಟ ಸಭೆಗೂ ಮುನ್ನ ಲಿಂಗಾಯತ ಸಮುದಾಯದ ಸಚಿವರು ಪ್ರತ್ಯೇಕ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಲಿಂಗಾಯತ ಸಚಿವರು ಮಹತ್ವದ ನಿರ್ಣಯವನ್ನು ಕೈಗೊಂಡಿದ್ದಾರೆ.
ಲಿಂಗಾಯತ ಸಮುದಾಯದ ಸಚಿವರು ನಡೆಸಿದ ಸಭೆಯಲ್ಲಿ ಜಾತಿ ಗಣತಿ ವರದಿ ತಿರಸ್ಕಾರ ಮಾಡಬೇಕೆಂದು ನಿರ್ಣಯ ಕೈಗೊಂಡಿದ್ದಾರೆ. ಒಂದು ವೇಳೆ ಜಾತಿಗಣತಿ ವರದಿ ತಿರಸ್ಕರಿಸಲಾಗದೆ ಇದ್ದರೆ ಸಾರ್ವಜನಿಕಗೊಳಿಸಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಲು ಸಚಿವರು ತೀರ್ಮಾನ ಕೈಗೊಂಡಿದ್ದಾರೆ.
ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಧಾರಿತ ಜಾತಿ ಗಣತಿ ವರದಿ ಅನುಷ್ಠಾನ ಸಂಬಂಧ ಕಳೆದ ಶುಕ್ರವಾರ (ಏ.11) ಸಚಿವ ಸಂಪುಟ ಸಭೆ ನಡೆದಿತ್ತು. ಆದರೆ, ಈ ಸಭೆಯಲ್ಲಿ ಜಾತಿ ಗಣತಿ ವರದಿ ಜಾರಿ ವಿಚಾರವಾಗಿ ಯಾವುದೇ ನಿರ್ಧಾರ ಕೈಗೊಳ್ಳದೆ, ಕೇವಲ ಚರ್ಚೆ ನಡೆದಿತ್ತು. ಈ ಸಭೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ಲಕೋಟೆ ಓಪನ್ ಮಾಡಲಾಗಿತ್ತು. ಸಚಿವರ ಕೈಗೆ ಜಾತಿ ಗಣತಿ ದತ್ತಾಂಶ ನೀಡಿದ ಬಳಿಕ ಆ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಗಿತ್ತು. ಈ ಸಭೆಯಲ್ಲಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಜಾರಿ ಬಗ್ಗೆ ತೀರ್ಮಾನ ಕೈಗೊಳ್ಳಲು ತೀರ್ಮಾನ ಮಾಡಲಾಗಿತ್ತು.
ಇದನ್ನೂ ಓದಿ: ಜಾತಿ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ: ಜಾತಿ ಗಣತಿ ವರದಿಯಲ್ಲಿ ಒಳಪಂಗಡ ಗೊಂದಲ, ಚರ್ಚೆಗೆ ಗ್ರಾಸ
ಗುರುವಾರ (ಏ.17) ಜಾತಿ ಗಣತಿ ವರದಿ ಜಾರಿ ವಿಚಾರವಾಗಿ ವಿಶೇಷ ಸಂಪುಟ ಸಭೆ ನಡೆಯುತ್ತಿದ್ದು, ಏನು ನಿರ್ಧಾರ ಕೈಗೊಳ್ಳಲಾಗುತ್ತದೆ ಕಾದು ನೋಡಬೇಕಿದೆ. ಇನ್ನು, ಜಾತಿ ಗಣತಿ ವರದಿ ಜಾರಿ ಮಾಡಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಅದಕ್ಕಾಗಿ ವಿಶೇಷ ಅಧಿವೇಶನ ಕರೆಯುವ ಅನಿವಾರ್ಯತೆ ಸರ್ಕಾರಕ್ಕಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದರು.
Published On - 6:34 pm, Thu, 17 April 25