ಗುತ್ತಿಗೆದಾರರು 1 ವರ್ಷ ಯಾವುದೇ ಗುತ್ತಿಗೆ ಪಡೆಯಬೇಡಿ, ಕೆಲಸ ಮಾಡಬೇಡಿ: ಕುಮಾರಸ್ವಾಮಿ

| Updated By: ವಿವೇಕ ಬಿರಾದಾರ

Updated on: Jan 15, 2025 | 1:59 PM

ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣಗಳನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರು ಗುತ್ತಿಗೆದಾರರಿಗೆ ಒಂದು ವರ್ಷ ಕೆಲಸ ಮಾಡದಿರಲು ಮನವಿ ಮಾಡಿದ್ದು, ಸರ್ಕಾರದ ಆಡಳಿತ ವೈಫಲ್ಯವನ್ನು ಟೀಕಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ತೆರಿಗೆ ಸಂಗ್ರಹದಲ್ಲಿನ ಕೊರತೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿನ ನಿಧಾನಗತಿಯನ್ನು ಅವರು ತೀವ್ರವಾಗಿ ಟೀಕಿಸಿದ್ದಾರೆ. ಜಾತಿ ಗಣತಿ ಕುರಿತು ತಮ್ಮ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಗುತ್ತಿಗೆದಾರರು 1 ವರ್ಷ ಯಾವುದೇ ಗುತ್ತಿಗೆ ಪಡೆಯಬೇಡಿ, ಕೆಲಸ ಮಾಡಬೇಡಿ: ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು, ಜನವರಿ 15: ದಯಾಮರಣ ಕೋರಿ ಕಿಯೋನಿಕ್ಸ್​ ವೆಂಡರ್ಸ್​​​ ರಾಷ್ಟ್ರಪತಿಗಳಿಗೆ ಪತ್ರ ಬರೆದ ವಿಚಾರವಾಗಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯಿಸಿ, ಗುತ್ತಿಗೆದಾರರಿಗೆ (Contractors) ಮನವಿ ಮಾಡುತ್ತೇನೆ, ಯಾರೂ ಕೂಡ ಒಂದು ವರ್ಷ ಯಾವುದೇ ಗುತ್ತಿಗೆ ಪಡೆಯಬೇಡಿ. ಕೆಲಸ ಮಾಡಬೇಡಿ. ಆಂಧ್ರದವರನ್ನು ಕರೆದುಕೊಂಡು ಬಂದು ಕೆಲಸ ಮಾಡಿಸಲಿ. ಹೇಗೂ ಇವರು ಕೆಲಸವನ್ನು ಕೊಡುತ್ತಿಲ್ಲ. ನೀವು ಹಿಂದಿನ ದುಡ್ಡು ಕೇಳುತ್ತಿದ್ದೀರಿ. ಶಾಂತಿಯುತವಾಗಿ ಪ್ರತಿಭಟನೆ ಮಾಡಿ. ಆತ್ಮಹತ್ಯೆಗೆ ಶರಣಾಗಬೇಡಿ, ಯಾಕೆ ದಯಮರಣಕ್ಕೆ ಪತ್ರ ಬರೆದ್ದೀರಿ?ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಎರಡು ಬಾರಿ ಮುಖ್ಯಮಂತ್ರಿಯಾದಾಗ ಯಾರಿಗೂ ತೊಂದರೆ ಕೊಟ್ಟಿಲ್ಲ. ಕಾಂಗ್ರೆಸ್​ ಸರ್ಕಾರದಲ್ಲಿ ತಪ್ಪಾಗಿದೆ. ತಪ್ಪಿನ ವಿರುದ್ಧ ಹೋರಾಟ ಮಾಡುವ ನಿರ್ಧಾರ ನಿಮ್ಮ ಕೈಯಲ್ಲಿದೆ. ನೀವೇನು ಭಿಕ್ಷುಕರಲ್ಲ ಕೆಲಸ ಮಾಡಿದ್ದೀರಿ ಕೆಲಸದ ಹಣ ಕೇಳುತ್ತಿದ್ದೀರಿ. ಕೆಲಸ ಮಾಡದೆ ಬಿಲ್ ತೆಗೆದುಕೊಂಡು ಹಣ ಹೊಡೆದ ಎಷ್ಟೋ ಜನ ಅಧಿಕಾರಿಗಳು, ಗುತ್ತಿಗೆದಾರರು ಇದ್ದಾರೆ. ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿ, ಯಾಕೆ ದಯಾಮರಣ ಕೇಳುತ್ತೀರಿ ಎಂದು ಹೇಳಿದರು.

ಸಚಿವ ಪ್ರಿಯಾಂಕ ಖರ್ಗೆ ಅವರೇ ನಿಮ್ಮ ಉಡಾಫೆ ಹೇಳಿಕೆಗಳನ್ನು ಬಿಡಿ. ಏನೇನು ಆಗಿದೆ ಅದನ್ನು ಸರಿಪಡಿಸಿಕೊಳ್ಳುವ ಕೆಲಸ ಮಾಡಿ. ಎಷ್ಟೋ ಗುತ್ತಿಗೆದಾರರು ಮನೆಯ ಹೆಣ್ಣುಮಕ್ಕಳ ಒಡವೆಗಳನ್ನು ಬ್ಯಾಂಕ್​​ಗಳಲ್ಲಿ ಅಡ ಇಟ್ಟು ಗುತ್ತಿಗೆ ಕೆಲಸ ಮಾಡಿಸಿದ್ದಾರೆ. ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಲು ಆಗಲ್ಲ, ಬಿಡಲೂ ಆಗದೆ ಪರದಾಡುತ್ತಿದ್ದಾರೆ ಎಂದರು.

ಸರ್ಕಾರ ಆರು ತಿಂಗಳಿಂದ ಎಲ್ಓಸಿ ರಿಲೀಸ್ ಮಾಡಿಲ್ಲ. ನಿರೀಕ್ಷೆಗೆ ತಕ್ಕಂತೆ ತೆರಿಗೆ ಸಂಗ್ರಹವಾಗಿಲ್ಲ. ಮುಂದಿನ ಮೂರೂ ತಿಂಗಳಲ್ಲಿ 1 ಲಕ್ಷ 85 ಕೋಟಿ ರೂ. ತೆರಿಗೆ ಸಂಗ್ರಹ ನಿರೀಕ್ಷೆ ಇಟ್ಟಿದ್ದರು. ಆದರೆ, ಇನ್ನು 62 ಸಾವಿರ ಕೋಟಿ ರೂ.ನಷ್ಟು ತೆರೆಗೆ ಸಂಗ್ರಹವಾಗಿಲ್ಲ, ಮೈನಸ್​ನಲ್ಲಿದ್ದಾರೆ. ಇದರ ನಡುವೆ ಸಾಲ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಕಿರುಕುಳ, ನಾವು ಆತ್ಮಹತ್ಯೆ ಮಾಡಿಕೊಂಡರೆ ಸಚಿವ ಪ್ರಿಯಾಂಕ್​, ಶಾಸಕ ಶರತ್ ಬಚ್ಚೇಗೌಡ ಕಾರಣ: ಕಿಯೋನಿಕ್ಸ್​ ವೆಂಡರ್ಸ್​​

ಬಸ್ ದರ ಜಾಸ್ತಿ ಮಾಡಿದ್ರಿ, ಮುದ್ರಾಂಕ ದರ ಜಾಸ್ತಿ ಮಾಡಿದ್ರಿ, ನೋಂದಣಿ ದರ, ವಿದ್ಯುತ್​ ಬಿಲ್​ ರೇಟ್ ಜಾಸ್ತಿ ಮಾಡಿದ್ದೀರಿ. ಪೆಟ್ರೋಲ್​-ಡೀಸೆಲ್​ನ ಸೆಸ್ ಜಾಸ್ತಿ ಮಾಡಿದ್ದೀರಿ. ಹೊಟ್ಟೆಗೆ ಹಾಕಿಕೊಳ್ಳವ ಪೆಟ್ರೋಲ್​ ದರ ಕೂಡ ಏರಿಕೆ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಮಾಡಿದರೂ, ತೆರಿಗೆ ಸಂಗ್ರಹದಲ್ಲಿ ಕೊರತೆಯಾಗಿದೆ. ನಿಮ್ಮ ಆಡಳಿತ ಯಾವ ಮಟ್ಟಕ್ಕೆ ಹೋಗಿದೆ. ಇದೆಲ್ಲ ಸರಿ ಮಾಡಿಕೊಳ್ಳಿ ಎಂದು ಕಿವಿ ಹಿಂಡಿದರು.

ವಾರಕ್ಕೆ ಎರಡು ದಿನ ಕುಮಾರಸ್ವಾಮಿ ರಾಜ್ಯಕ್ಕೆ ಬರುತ್ತಾರೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇರುವ ವಾಸ್ತವಾಂಶ ಹೇಳಬೇಕಲ್ವ ಅದಕ್ಕೆ ಬಂದು ಹೇಳುತ್ತೇನೆ. ನಾನೇನು ಹೊಟ್ಟೆ ಉರಿಗೆ ಹೇಳುತ್ತೀನಾ? ಹೆಚ್​ಡಿ ಕುಮಾರಸ್ವಾಮಿ ಐದು ಸಾವಿರ ಕೋಟಿ ಕೊಡಿಸಲಿ ಯಾವನೋ ರಸ್ತೆಯಲ್ಲಿ ಕುಳಿತು ಹೇಳಿದರೆ ಆಗುತ್ತಾ? ಮಂತ್ರಿಗಳು ನನ್ನ ಹತ್ತಿರ ಬಂದು, ನಮ್ಮ ಪರವಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಅಂತ ಕೇಳಿದ್ದೀರಾ? ನನ್ನ ಯಾವ ರೀತಿ ನಡೆಸಿಕೊಂಡಿದ್ದೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾತಿ ಜನಗಣತಿ ವಿಚಾರವಾಗಿ ಮಾತನಾಡಿದ ಅವರು, ಇದು ಎರಡು ಸಮುದಾಯ ಪ್ರಶ್ನೆಯಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷದ ನಂತರ ಸಮಾಜದ ಪರಿಸ್ಥಿತಿ ಏನಿದೆ? ಸಮಾಜದಲ್ಲಿ ಎಷ್ಟು ಜನರು ಬಡತನ ರೇಖೆಯಿಂದ ಕಳೆಗೆ ಇದ್ದಾರೆ. ಮೇಲೆ ಯಾರು ಇದ್ದಾರೆ? ತುಳಿತಕ್ಕೆ ಒಳಗಾದವರನ್ನು ಮೇಲೆ ಎತ್ತಲು ಏನು ಮಾಡಿದ್ದೀರಿ. ಮುಂದೆ ಏನು ಮಾಡುತ್ತೀರಿ ನೋಡೋಣ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ