ನಾಳೆ ಬೆಳಗ್ಗೆ ಪೊರಕೆ ಬಿಟ್ಟು ಕಮಲ ಹಿಡಿಯಲಿರುವ ಎಎಪಿ ಪ್ರಬಲ ನಾಯಕ ಭಾಸ್ಕರ್​ ರಾವ್​

ಕರ್ನಾಟಕ ಚುನಾವಣೆ ಸಮೀಪಿಸುತ್ತಿದ್ದಂತೆ ಆಮ್ ಆದ್ಮಿ ಪಕ್ಷದಲ್ಲಿ ಪ್ರಬಲ ನಾಯಕನಾಗಿ ಗುರುತಿಸಿಕೊಂಡಿರುವ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ನಾಳೆ (ಮಾರ್ಚ್ 1) ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಲಾಗಲಿದ್ದಾರೆ.

ನಾಳೆ ಬೆಳಗ್ಗೆ ಪೊರಕೆ ಬಿಟ್ಟು ಕಮಲ ಹಿಡಿಯಲಿರುವ ಎಎಪಿ ಪ್ರಬಲ ನಾಯಕ ಭಾಸ್ಕರ್​ ರಾವ್​
ಭಾಸ್ಕರ್ ರಾವ್ ಮತ್ತು ಆರ್.ಅಶೋಕ್
Follow us
Rakesh Nayak Manchi
|

Updated on:Feb 28, 2023 | 11:04 PM

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆ ಮಾಜಿ ಐಪಿಎಸ್ ಅಧಿಕಾರಿ, ಆಮ್ ಆದ್ಮಿ ಪಕ್ಷದ (AAP) ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ (Bhaskar Rao) ಅವರು ಕೇಸರಿ ಪಡೆಯತ್ತ ಮುಖ ಮಾಡಿದ್ದು, ನಾಳೆ (ಮಾರ್ಚ್ 1) ಬೆಳಗ್ಗೆ 9 ಗಂಟೆಗೆ ಬಿಜೆಪಿ ಸೇರಲಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ಎಎಪಿಯಲ್ಲಿ ಪ್ರಬಲ ಹಾಗೂ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿರುವ ಭಾಸ್ಕರ್ ರಾವ್ ಅವರು ಇಂದು ಕಂದಾಯ ಸಚಿವ ಆರ್.ಅಶೋಕ್ (Bhaskar Rao Meets R. Ashok) ಅವರನ್ನು ಪದ್ಮನಾಭನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಭೇಟಿಯಾಗಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ರಾಜ್ಯ ಕಚೇರಿಗೆ ಕೂಡಾ ಭೇಟಿ ನೀಡಿದ್ದಾರೆ.

ಸದ್ಯ ಆಮ್ ಆದ್ಮಿ ಪಕ್ಷದಲ್ಲಿ ಇರುವ ನಾಯಕರ ಪೈಕಿ ಪ್ರಬಲರಾಗಿರುವ ಭಾಸ್ಕರ್ ರಾವ್, ಆಡಳಿತ ಪಕ್ಷ ಬಿಜೆಪಿ ಮತ್ತು ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಸದ್ಯ ಪಕ್ಷದಲ್ಲಿ ಆಕ್ಟಿವ್ ಆಗಿರುವ ಇವರು ಬಸವನಗುಡಿ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ. ಹೇಳಿ ಕೇಳಿ ಬೆಂಗಳೂರಿನ ಬಸವನಗುಡಿ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಕ್ಷೇತ್ರದಿಂದಲೇ ಎಎಪಿ ಟಿಕೆಟ್​ನಲ್ಲಿ ಸ್ಪರ್ಧಿಸುವ ಭಾಸ್ಕರ್ ರಾವ್ ಅವರು, ಈಗಾಗಲೇ ಕ್ಷೇತ್ರ ಸುತ್ತಾಟ ನಡೆಸಿದ್ದಾರೆ. ಆದರೆ ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಅವರು ಸಚಿವ ಅಶೋಕ್ ಅವರನ್ನು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.

ಅಶೋಕ್ ಮಾತ್ರವಲ್ಲದೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಭೇಟಿ ಮಾಡಿದ್ದಾರೆ. ಇದೇ ವೇಳೆ ಮಾಜಿ ಐಪಿಎಸ್ ಅಧಿಕಾರಿಯೂ ಆಗಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಕರ್ನಾಟಕ  ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಅವರನ್ನು ಕೂಡ ಭೇಟಿ ಮಾಡಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ: ಬಿಜೆಪಿ ವಿರುದ್ಧ ಮುಂದುವರಿದ ಪೋಸ್ಟರ್ ಅಭಿಯಾನ; ಬೊಮ್ಮಾಯಿ, ಹೆಬ್ಬಾರ್ ವಿರುದ್ಧವೂ ಪೋಸ್ಟರ್ ವಾರ್

ಬೆಂಗಳೂರು ನಗರ ಪೊಲೀಸ್ ಆಯುಕ್ತರ ನಂತರ ಎಡಿಜಿಪಿಯಾಗಿದ್ದ ಭಾಸ್ಕರ್ ರಾವ್ ಅವರು ನಿವೃತ್ತಿಗೆ ಇನ್ನೂ ಮೂರು ವರ್ಷ ಬಾಕಿ ಇರುವಾಗಲೇ ಕಳೆದ ವರ್ಷ ಸ್ವಯಂ ನಿವೃತ್ತಿ ಪಡೆದುಕೊಂಡರು. 32 ವರ್ಷಗಳ ಐಪಿಎಸ್ ಜೀವನಕ್ಕೆ ತೆರೆ ಎಳೆಯುತ್ತಿದ್ದೇನೆ. ನನ್ನ ಕುಟುಂಬಕ್ಕೆ, ಗೆಳೆಯರಿಗೆ, ಸಹೋದ್ಯೋಗಿಗಳಿಗೆ, ಹಿರಿ, ಕಿರಿಯರಿಗೆ, ಪಕ್ಷಾತೀತವಾಗಿ ಕರ್ನಾಟಕದ ಸರ್ಕಾರಗಳಿಗೆ ಧನ್ಯವಾದಗಳು ಎಂದು ಅವರು ಹೇಳಿದ್ದರು. ಬಳಿಕ ಭಾಸ್ಕರ್ ಅವರು ರಾಜಕೀಯದ ಕಡೆ ಮುಖ ಮಾಡಿ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ಆಮ್​ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದರು. ಆದರೆ ಈಗ ಕೇಸರಿ ಪಡೆ ಕಡೆ ಮನಸ್ಸು ಮಾಡಿದ್ದು, ನಾಳೆ ಬೆಳಗ್ಗೆ ಪಕ್ಷ ಸೇರಲಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Tue, 28 February 23