ಕಾಂಗ್ರೆಸ್‌ಗೆ ‘ಆತ್ಮಸಾಕ್ಷಿ’ ಮತ ಹಾಕಿದ ಎಸ್.ಟಿ.ಸೋಮಶೇಖರ್; ಜಿಟಿಡಿ ಬಗ್ಗೆ ಜೆಡಿಎಸ್ ಅಭ್ಯರ್ಥಿ ಮಹತ್ವದ ಹೇಳಿಕೆ

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ತೀವ್ರ ಸಂಚಲನ ಮೂಡಿಸಿದೆ. ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ. ಸೋಮಶೇಖರ್, ಮುಖ್ಯಮಂತ್ರಿಗಳ ಮನವಿ ಮೇರೆಗೆ ಕಾಂಗ್ರೆಸ್‌ಗೆ ಆತ್ಮಸಾಕ್ಷಿ ಮತ ಚಲಾಯಿಸಿದ್ದಾಗಿ ಒಪ್ಪಿಕೊಂಡರು. ಮತ್ತೊಂದೆಡೆ, ಜೆಡಿಎಸ್ ಅಭ್ಯರ್ಥಿ ಕೆ.ಎನ್. ಗೋವಿಂದರಾಜು, ಜಿ.ಟಿ. ದೇವೇಗೌಡರು ತಮಗೇ ಮತ ಹಾಕಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಗಳು ಕಾಂಗ್ರೆಸ್‌ಗೆ ಲಾಭವಾಗಿದ್ದರೆ, ಮೈತ್ರಿಕೂಟಕ್ಕೆ ಹಿನ್ನಡೆಯಾಗಿವೆ.

ಕಾಂಗ್ರೆಸ್‌ಗೆ ‘ಆತ್ಮಸಾಕ್ಷಿ’ ಮತ ಹಾಕಿದ ಎಸ್.ಟಿ.ಸೋಮಶೇಖರ್; ಜಿಟಿಡಿ ಬಗ್ಗೆ ಜೆಡಿಎಸ್ ಅಭ್ಯರ್ಥಿ ಮಹತ್ವದ ಹೇಳಿಕೆ
ವಿಧಾನ ಪರಿಷತ್ ಚುನಾವಣೆ 2026
Edited By:

Updated on: Jun 18, 2026 | 11:56 AM

ಬೆಂಗಳೂರು, ಜೂ.18: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ 7 ಸ್ಥಾನಗಳ ವಿಧಾನ ಪರಿಷತ್ ಚುನಾವಣೆಯ ಮತದಾನದ ವೇಳೆ ನಿರೀಕ್ಷೆಯಂತೆಯೇ ‘ಅಡ್ಡಮತದಾನ’ (Cross-Voting) ಪ್ರಕ್ರಿಯೆ ಆರಂಭವಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಯಶವಂತಪುರ ಕ್ಷೇತ್ರದ ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ. ಸೋಮಶೇಖರ್ ಅವರು ಮೈತ್ರಿಕೂಟದ ಆಜ್ಞೆಯನ್ನು ಮೀರಿ ಕಾಂಗ್ರೆಸ್ ಪರ ಮತ ಚಲಾಯಿಸಿದರೆ, ಅತ್ತ ಜೆಡಿಎಸ್ ಅಭ್ಯರ್ಥಿ ಕೆ.ಎನ್. ಗೋವಿಂದರಾಜು ಅವರು ಹಿರಿಯ ನಾಯಕ ಜಿ.ಟಿ. ದೇವೇಗೌಡರ ಮತದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

ಮತದಾನದ ಬಳಿಕ ವಿಧಾನಸೌಧದಲ್ಲಿ ಟಿವಿ9 ಜೊತೆ ಮಾತನಾಡಿದ ಎಸ್.ಟಿ. ಸೋಮಶೇಖರ್, ತಾವೂ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. “ನಾನು ನನ್ನ ಆತ್ಮಸಾಕ್ಷಿಯ ಮತವನ್ನು ಕಾಂಗ್ರೆಸ್‌ಗೆ ಚಲಾಯಿಸಿದ್ದೇನೆ. ನಿನ್ನೆವರೆಗೂ ಮೂರೂ ಪಕ್ಷಗಳ ಯಾವ ನಾಯಕರೂ ನನ್ನನ್ನು ಸಂಪರ್ಕಿಸಿರಲಿಲ್ಲ. ಆದರೆ ನಿನ್ನೆ ಸಂಜೆ ಸ್ವತಃ ಮುಖ್ಯಮಂತ್ರಿಗಳು (ಸಿಎಂ) ನನ್ನನ್ನು ಸಂಪರ್ಕಿಸಿ, ರೆಸಾರ್ಟ್‌ಗೆ ಕರೆಸಿಕೊಂಡು ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವಿ ಮಾಡಿದ್ದರು.”

“ನನ್ನ ಕ್ಷೇತ್ರದ ಅಭಿವೃದ್ಧಿಗೋಸ್ಕರ ನಾನು ಕಾಂಗ್ರೆಸ್‌ಗೆ ಮತ ನೀಡಿದ್ದೇನೆ. ನೂರಕ್ಕೆ ನೂರರಷ್ಟು ಕಾಂಗ್ರೆಸ್‌ನ ಐದೂ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಈ ಹಿಂದೆ ನಾವು ಬಿಜೆಪಿಗೆ ಹೋಗಿದ್ದಕ್ಕೇ ಅಲ್ಲಿ ಸರ್ಕಾರ ಬಂದಿದ್ದು, ನಮ್ಮಿಂದಲೇ ಬಿಜೆಪಿಯವರಿಗೆ ಅಧಿಕಾರ ಸಿಕ್ಕಿದ್ದು ಎಂಬುದನ್ನು ಯಾರೂ ಮರೆಯಬಾರದು” ಎಂದು ಸೋಮಶೇಖರ್ ಕಿಡಿಕಾರಿದ್ದಾರೆ. ಇದೇ ವೇಳೆ, ಮತ್ತೊಬ್ಬ ಬಿಜೆಪಿ ಉಚ್ಚಾಟಿತ ಶಾಸಕ ಶಿವರಾಂ ಹೆಬ್ಬಾರ್ ಕೂಡ ಕಾಂಗ್ರೆಸ್ ಪರವಾಗಿಯೇ ಮತ ಚಲಾಯಿಸಿದ್ದಾರೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಯತ್ನಾಳ್ ಖಂಡಿತಾ ನನಗೇ ವೋಟ್ ಹಾಕ್ತಾರೆ!: ಉಚ್ಚಾಟಿತ ಶಾಸಕನ ಪತ್ರದ ಸೀಕ್ರೆಟ್ ಬಿಚ್ಚಿಟ್ಟ ಲಿಂಗರಾಜ್ ಪಾಟೀಲ್

“ಜಿಟಿಡಿ ನನಗೆ ಮೊದಲ ಮತ ಹಾಕಿದ್ದಾರೆ”: ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು

ಅತ್ತ ಜೆಡಿಎಸ್ ಕ್ಯಾಂಪ್‌ನಲ್ಲಿ ಭಿನ್ನಮತದ ಹೊಗೆಯಾಡುತ್ತಿರುವ ಸುದ್ದಿಗಳ ನಡುವೆಯೇ ಜೆಡಿಎಸ್ ಅಭ್ಯರ್ಥಿ ಕೆ.ಎನ್. ಗೋವಿಂದರಾಜು ಅವರು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರ (GTD) ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ. “ಶಾಸಕ ಜಿ.ಟಿ. ದೇವೇಗೌಡರು ನನ್ನ ಪರವಾಗಿಯೇ ಮತ ಚಲಾಯಿಸಿದ್ದಾರೆ. ತಾಯಿ ಚಾಮುಂಡೇಶ್ವರಿಯೇ ಜಿಟಿಡಿಯವರನ್ನು ಇಲ್ಲಿಗೆ ಕಳುಹಿಸಿಕೊಟ್ಟಿದ್ದಾರೆ. ಅವರ ಮೊದಲ ಪ್ರಾಶಸ್ತ್ಯದ ಮತ ನಮಗೇ ಸಿಕ್ಕಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ” ಎಂದು ಹೇಳಿದ್ದಾರೆ. “ನಾವೆಲ್ಲರೂ ಒಂದು ಕುಟುಂಬದ ತರಹ ಒಟ್ಟಾಗಿದ್ದೇವೆ. ಈ ಚುನಾವಣೆಯನ್ನು ನಾವು ಯಾವುದೇ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಆದರೆ ಇವತ್ತು ಏನೆಲ್ಲಾ ರಾಜಕೀಯ ಸರ್ಕಸ್ ನಡೆಯುತ್ತಿದೆಯೋ, ಇದೆಲ್ಲದಕ್ಕೂ ಕಾಂಗ್ರೆಸ್ ಪಕ್ಷದ ಏಕಪಕ್ಷೀಯ ಧೋರಣೆಯೇ ಕಾರಣ” ಎಂದು ಗೋವಿಂದರಾಜು ಟೀಕಿಸಿದ್ದಾರೆ. ಸೋಮಶೇಖರ್ ಮತ್ತು ಹೆಬ್ಬಾರ್ ಅವರ ಅಡ್ಡಮತದಾನದಿಂದ ಕಾಂಗ್ರೆಸ್ ಪಾಳಯದಲ್ಲಿ ಗೆಲುವಿನ ನಗು ಮೂಡಿದ್ದರೆ, ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ಉಂಟಾಗುವ ಲಕ್ಷಣಗಳು ದಟ್ಟವಾಗಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us