ಲೋಕಸಭೆ ಚುನಾವಣೆ 2024: ಸುಮಲತಾ ಅಂಬರೀಶ್, ಕ್ರಿಕೆಟಿಗ ದೊಡ್ಡ ಗಣೇಶ್ ಬಿಜೆಪಿ ಸೇರ್ಪಡೆ
ಮಂಡ್ಯ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ವಿಚಾರವಾಗಿ ಮೌನ ತಾಳಿದ್ದ ಸಂಸದೆ ಸುಮಲತಾ ಅಂಬರೀಶ್ ಅವರು ಬುಧವಾರ ಕಾರ್ಯಕರ್ತ ಸಭೆ ನಡೆಸಿ ಈ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ಬಿಜೆಪಿ ಸೇರುತ್ತಿದ್ದೇನೆ ಎಂದಿದ್ದರು. ಅದರಂತೆ ಇಂದು (ಶುಕ್ರವಾರ) ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.
ಬೆಂಗಳೂರು, ಏಪ್ರಿಲ್ 05: ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೆಂಬಲ ವ್ಯಕ್ತಪಡಿಸಿದ್ದ ಸುಮಲತಾ ಅಂಬರೀಶ್ (Sumalatha Ambareesh) ಅವರು ಇಂದು (ಏ.05) ಅಧಿಕೃತವಾಗಿ ಬಿಜೆಪಿಗೆ (BJP) ಸೇರ್ಪಡೆಯಾಗಿದ್ದಾರೆ. ಜೊತೆಗೆ ಕ್ರಿಕೆಟಿಗ ದೊಡ್ಡ ಗಣೇಶ ಮತ್ತು ಕೊಪ್ಪಳ ಮಾಜಿ ಸಂಸದ ಶಿವರಾಮಗೌಡ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಬಿಜೆಪಿ ಸೇರ್ಪಡೆಗೂ ಮುನ್ನ ಸುಮಲತಾ ಅಂಬರೀಶ್ ಅವರು, “ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬ ಆಶಯದಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ. ಮಂಡ್ಯದ ನನ್ನ ಅಭಿಮಾನಿಗಳು, ನಟ ದಿ.ಅಂಬರೀಶ್ ಅಭಿಮಾನಿಗಳು ಹಿತೈಷಿಗಳ ಹಾರೈಕೆ ಮತ್ತು ಆಶೀರ್ವಾದವಿರಲಿ” ಎಂದು ಮಂಡ್ಯ ಸೊಸೆ ಸುಮಲತಾ ಅಂಬರೀಶ್ ಅವರು ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.
ಪಕ್ಷ ಸೇರ್ಪಡೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ನನಗೆ ಪ್ರೇರಣಾದಾಯಕವಾಗಿದೆ. ಪ್ರಧಾನಿ ಮೋದಿಯವರು ನುಡಿದಂತೆ ನಡೆಯುತ್ತಿದ್ದಾರೆ. ಅವರ ವಿಕಸಿತ ಭಾರತ ಕನಸು ನನಸಾಗಬೇಕು. ಅದಕ್ಕೆ ನಾನು ಬೆಂಬಲಿಸುವೆ. ಮುಖ್ಯವಾಗಿ ನನ್ನ ಮಂಡ್ಯ ಜಿಲ್ಲೆ ಅಭಿವೃದ್ಧಿಯಾಗಬೇಕು. ಮತ್ತು ಸಂಸತ್ತಿನಲ್ಲಿ ಹಿರಿಯ ಬಿಜೆಪಿ ನಾಯಕರು ನನಗೆ ಮಾರ್ಗದರ್ಶನ ಮಾಡಿದರು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ತಮ್ಮ ಅವಧಿಯಲ್ಲಿ ಮಂಡ್ಯ ಜಿಲ್ಲೆಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಈ ಎಲ್ಲ ಕಾರಣದಿಂದ ನಾನು ಬಿಜೆಪಿ ಸೇರಿದ್ದೇನೆ ಎಂದರು.
ಇದನ್ನೂ ಓದಿ: ಬರ ಪರಿಹಾರದಿಂದ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಟ್ಟ ಸಿದ್ದರಾಮಯ್ಯ: ವಿಜಯೇಂದ್ರ ಗಂಭೀರ ಆರೋಪ
ಕುತೂಹಲ ಮೂಡಿಸಿದ್ದ ಸುಮಲತಾ ನಡೆ
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ತನಗೆ ಸಿಗುತ್ತದೆ ಎಂದು ಹಾಲಿ ಸಂಸದೆ ಸುಮಲತಾ ಅಂಬರೀಶ್ ನಿರೀಕ್ಷೆಯಲ್ಲಿದ್ದರು. ಆದರೆ ಕೊನೆ ಹಂತದಲ್ಲಿ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ತಪ್ಪಿದೆ. ಹೀಗಾಗಿ ಸುಮಲತಾ ಅಂಬರೀಶ್ ಅವರ ಮುಂದಿನ ನಡೆ ಏನು ಎಂಬುವುದು ಯಕ್ಷ ಪ್ರಶ್ನೆಯಾಗಿತ್ತು. ಆದರೆ ಬುಧವಾರ (ಏ.03) ರಂದು ಮಂಡ್ಯದಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ಹೇಳಿದ್ದರು. ಅದರಂತೆ ಇಂದು (ಏ.05) ಕಮಲ ಪಾಳಯ ಸೇರಿಕೊಂಡಿದ್ದಾರೆ.
ಘರವಾಪಸಿ ಮಾಡಿದ ಮಾಜಿ ಸಂಸದ
ಶಿವರಾಮಗೌಡ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ಶಿವರಾಮಗೌಡ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿತ್ತು. ಶಿವರಾಮಗೌಡ ಅವರ ಬದಲಿಗೆ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಅಸಮಧಾನಗೊಂಡಿದ್ದ ಶಿವರಾಮಗೌಡ ಅವರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು. ಇದೀಗ ಮಾಜಿ ಸಂಸದ ಶಿವರಾಮಗೌಡ ಮರಳಿ ಬಿಜೆಪಿಗೆ ಬರುವ ಮೂಲಜ ಘರವಾಪಸಿ ಮಾಡಿದ್ದಾರೆ.
ಕ್ರಿಕೆಟಿಗ ದೊಡ್ಡ ಗಣೇಶ ಬಿಜೆಪಿ ಸೇರ್ಪಡೆ
90ರ ದಶಕದ ಕ್ರಿಕೆಟ್ ಪ್ರೇಮಿಗಳು ಎಂದೂ ಮರೆಯದ ಭಾರತ ತಂಡದ ಮಾಜಿ ಆಟಗಾರ ಕಿಕೆಟಿಗ ದೊಡ್ಡ ಗಣೇಶ (ದೊಡ್ಡನರಸಯ್ಯ ಗಣೇಶ್). ಇವರು ಕರ್ನಾಟಕ ರಣಜಿ ತಂಡದ ಪರವಾಗಿ ಮತ್ತು ಭಾರತ ತಂಡದ ಪರವಾಗಿ 1997 ರಲ್ಲಿ 4 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಅವರು ಬೌಲರ್ ಮತ್ತು ಬ್ಯಾಟ್ಸ್‌ಮನ್ ಆಗಿದ್ದರು. ಇದೀಗ ಇವರು ಬಿಜೆಪಿಗೆ ಸೇರುವ ಮೂಲಕ ರಾಜಕೀಯ ಕ್ಷೇತ್ರದಲ್ಲೂ ಕಾಲಿಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Fri, 5 April 24