ಸೋನಿಯಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜಕೀಯ ಬಗ್ಗೆ ಚರ್ಚೆ: ಅಂತಿಮ ನಿರ್ಧಾರಕ್ಕೆ ಬಾರದ ಹೈಕಮಾಂಡ್!
ಇಂದು ದೆಹಲಿಯ 10 ಜನಪತ್ ರಸ್ತೆಯಲ್ಲಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಿವಾಸದಲ್ಲಿ ನಡೆದ ಮಹತ್ವದ ಸಭೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಸತತ ಎರಡು ಗಂಟೆಗಳ ಕಾಲ ಕಾಂಗ್ರೆಸ್ ನಾಯಕರ ಮೀಟಿಂಗ್ ಮಾಡಿದ್ದಾರೆ. ಕರ್ನಾಟಕ ರಾಜಕೀಯ ವಿದ್ಯಮಾನಗಳ ಬಗ್ಗೆ ಕೂಡ ಚರ್ಚೆ ನಡೆದಿದ್ದು, ಆದರೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.

ಬೆಂಗಳೂರು, ಡಿಸೆಂಬರ್ 06: ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಇತ್ತೀಚೆಗೆ ಒಟ್ಟಿಗೆ ಬ್ರೇಕ್ಫಾಸ್ಟ್ ಮಾಡುವ ಬಳಿಕ ನಮ್ಮಿಬ್ಬರ ನಡುವೆ ಯಾವುದೇ ಗೊಂದಲಗಳಿಲ್ಲ ಎಂದು ಹೇಳಿದ್ದರು. ಆದರೆ ತೆರೆ ಹಿಂದೆ ಅವರ ತಂತ್ರ ಮತ್ತು ಗುರಿಗಳು ಬೇರೆ ಬೇರೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಇಂದು ಸಹ ಡಿಕೆ ಶಿವಕುಮಾರ್ ಮತ್ತೆ ಮಾರ್ಮಿಕ ಇಟ್ಟ ಗುರಿಯ ಮಾತಿನ ದಾಳ ಉರುಳಿಸಿದರೆ, ಸಿದ್ದರಾಮಯ್ಯ ಸಹ ಡಿಕೆ ಶಿವಕುಮಾರ್ ಎದುರಲ್ಲೇ ಕೊಟ್ಟ ಮಾತಿನ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅತ್ತ ದೆಹಲಿಯಲ್ಲ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕರ್ನಾಟಕ ರಾಜಕೀಯ ವಿದ್ಯಮಾನಗಳ ಬಗ್ಗೆ ಮಹತ್ವದ ಚರ್ಚೆ ನಡೆದಿದ್ದು, ಆದರೆ ಹೈಕಮಾಂಡ್ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಪಟ್ಟದಾಟ ಹೈಕಮಾಂಡ್ ಅಂಗಳ ತಲುಪಿದೆ. ವಾರದ ಹಿಂದಷ್ಟೇ ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿಗೆ ರಾಜ್ಯದ ಬೆಳವಣಿಗೆಗಳ ಕುರಿತು ವರದಿ ನೀಡಿದ್ದಾರೆ. ಇಂದು ಖರ್ಗೆ ಬೆಂಗಳೂರಿನಿಂದ ದೆಹಲಿ ತೆರಳಿದ್ದು, ಸಂಜೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆಯನ್ನೂ ಮಾಡಿದ್ದಾರೆ.
ಇದನ್ನೂ ಓದಿ: ನಾನು ಮಾತು ಕೊಡಲ್ಲ, ಕೊಟ್ಟರೆ ಮಾಡೇ ಮಾಡುತ್ತೇನೆ: ಕೊಟ್ಟ ಮಾತಿನ ಬಗ್ಗೆ ಸಿಎಂ ಪ್ರಸ್ತಾಪ
ಸಭೆ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿದ್ದು, ಕರ್ನಾಟಕ ರಾಜಕೀಯ ವಿದ್ಯಮಾನಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಆದರೆ ಅಂತಿಮ ನಿರ್ಧಾರಕ್ಕೆ ಬಂದಿಲ್ಲ, ಮತ್ತೊಮ್ಮೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಲ್ಲಿ ಒಗ್ಗಟ್ಟಿದೆ, ಯಾವುದೇ ರೀತಿಯ ಗೊಂದಲಗಳಿಲ್ಲ. ವೋಟ್ ಚೋರಿ ರ‍್ಯಾಲಿ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದರು. ಇನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬುಲಾವ್ ಬಗ್ಗೆ ಕೆ.ಸಿ.ವೇಣುಗೋಪಾಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ಮಂಗಳೂರಿನಲ್ಲಿ ವೇಣುಗೋಪಾಲ್ ಎದುರು ಡಿಕೆ ಡಿಕೆ ಘೋಷಣೆ: ಡಿಕೆಶಿ ಆಪ್ತನಿಗೆ ಹೈಕಮಾಂಡ್ ಬಿಗ್ ಶಾಕ್
ದೆಹಲಿಯ 10 ಜನಪತ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ನಿವಾಸದಲ್ಲಿ ಸಭೆ ನಡೆಸಿದ್ದು, ಎಐಸಿಸಿ ಅಧ್ಯಕ್ಷ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಭೆಯಲ್ಲಿ ಭಾಗಿಯಾಗಿದ್ದರು. ಸತತ ಎರಡು ಗಂಟೆಗಳ ಕಾಲ ಕಾಂಗ್ರೆಸ್ ನಾಯಕರ ಮೀಟಿಂಗ್ ಮಾಡಿದ್ದಾರೆ. ಹೈಕಮಾಂಡ್ ರಾಜ್ಯ ಕಾಂಗ್ರೆಸ್ ಮನೆಯ ಖಾಯಿಲೆಗೆ ಅದ್ಯಾವ ಮದ್ದು ಅರೆಯುತ್ತೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




