ಮೋದಿ ವಿರುದ್ಧ ಕಾಂಗ್ರೆಸ್ ಸರಣಿ ಟ್ವೀಟ್: ಡಬಲ್ ಇಂಜಿನ್ಗೆ ಟ್ರಬಲ್ ಇಂಜಿನ್ ಸರ್ಕಾರ ಎಂದು ವ್ಯಂಗ್ಯ
ರಾಜ್ಯ ಕಾಂಗ್ರೆಸ್ ಡಬಲ್ ಎಂಜಿನ್ ಸರ್ಕಾರವನ್ನು "ಟ್ರಬಲ್ ಎಂಜಿನ್ ಸರ್ಕಾರ" ಎಂದು ಟೀಕೆ ಮಾಡುತ್ತಿದೆ.
ಬೆಂಗಳೂರು: ಪ್ರಧಾನಿ ಮೋದಿ (PM Modi) ರಾಜ್ಯಕ್ಕೆ ಆಗಮಿಸಿದಾಗಲೆಲ್ಲ ಡಬಲ್ ಇಂಜೀನ್ ಸರ್ಕಾರ ಎಂದು ಹೇಳುತ್ತಿದ್ದಾರೆ. ಇದನ್ನೇ ದಾಳವಾಗಿ ಉಪಯೋಗಿಸಿಕೊಂಡ ರಾಜ್ಯ ಕಾಂಗ್ರೆಸ್ ಡಬಲ್ ಎಂಜಿನ್ ಸರ್ಕಾರವನ್ನು “ಟ್ರಬಲ್ ಎಂಜಿನ್ ಸರ್ಕಾರ” ಎಂದು ಟೀಕೆ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಈ ವೇಳೆ ಸರಣಿ ಟ್ವೀಟ್ ಮಾಡಿದ ರಾಜ್ಯ ಕಾಂಗ್ರೆಸ್ (KPCC) ” ಈ ಹಿಂದೆ ತಮ್ಮ ಭೇಟಿ ವೇಳೆ ರಸ್ತೆಗಳಿಗೆ ತೇಪೆ ಹಾಕಲಾಗಿತ್ತು. ಬೆಂಗಳೂರು, ಮಂಗಳೂರು ರಸ್ತೆಗಳಿಗೆ ತೇಪೆ ಹಾಕಲಾಗಿತ್ತು. ರಸ್ತೆಗಳಿಗೆ ಹಾಕಿದ್ದ ತೇಪೆ ನಾಲ್ಕೇ ದಿನಕ್ಕೆ ಕಿತ್ತು ಹೋಗಿದ್ದವು. ತಮ್ಮ ಕಚೇರಿ ಕೇಳಿದ್ದ ವರದಿ ತಲುಪಿತೇ?”, ಎಂದು ಪ್ರಶ್ನೆ ಮಾಡಿದೆ.
“ಟ್ರಬಲ್ ಇಂಜಿನ್ ಸರ್ಕಾರದ ಭ್ರಷ್ಟಾಚಾರ ದರ್ಶನವಾಯಿತೇ? ಕಿತ್ತುಹೋದ ರಸ್ತೆ ತೇಪೆ ಬಗ್ಗೆ ಕನ್ನಡಿಗರಿಗೆ ಸ್ಪಷ್ಟನೆ ಕೊಡುವಿರಾ? ನೇಮಕಾತಿ ಹಗರಣಗಳು, ವರ್ಗಾವಣೆ ದಂಧೆ, ಪಿಎಸ್ಐ ಹಗರಣ, 40% ಕಮಿಷನ್ ಹಗರಣ, ಸಂತೋಷ್ ಪಾಟೀಲ್ ಆತ್ಮಹತ್ಯೆ, ಈಶ್ವರಪ್ಪ ರಾಜೀನಾಮೆ, ಸಿಎಂ ಹುದ್ದೆಗೆ $2500 ಕೋಟಿ ರೂ, ರಸ್ತೆ ಗುಂಡಿಗಳು, ಮಂತ್ರಿಗಿರಿಗೆ 50 ಕೋಟಿ, ಯತ್ನಾಳ್ ಆರೋಪಇವೆಲ್ಲದರ ಬಗ್ಗೆ ತಮ್ಮ ಭಾಷಣದಲ್ಲಿ ಜಾಗವಿದೆಯೇ ಪ್ರಧಾನಿ ಮೋದಿ ಅವರೇ?” ಎಂದು ಹ್ಯಾಶ್ಟ್ಯಾಗ್ ಟ್ರಬಲ್ ಎಂಜಿನ್ ಸರ್ಕಾರ ಎಂದು ಬಳಸಿ ಪ್ರಶ್ನೆ ಮಾಡಿದೆ.
“ಅಲ್ಲದೇ ವೈಫಲ್ಯ ಮರೆಮಾಚಲು ಹಿಜಾಬ್, ಹಲಾಲ್, ಅಜಾನ್ ಎಂದು ದಿನಕ್ಕೊಂದು ವಿವಾದ ಎಬ್ಬಿಸುತ್ತಿದೆ. ಸಬ್ ಕ ಸಾತ್, ಸಬ್ ಕ ವಿಕಾಸ್ ಎಂದಿದ್ದ ಪ್ರಧಾನಿ ಮೋದಿ ಅವರೇ, ಸಿಎಂ ಬೊಮ್ಮಾಯಿ ಅವರು ಆಕ್ಷನ್‌ಗೆ ರಿಯಾಕ್ಷನ್ ಎಂದು ಸಮಾಜ ಘಾತುಕರಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಅವರಿಗೆ ಬುದ್ದಿ ಹೇಳುವಿರಾ ಅಥವಾ ಬೆನ್ನು ತಟ್ಟುವಿರಾ?” ಎಂದು ವಾಗ್ದಾಳಿ ಮಾಡಿದೆ.
“ಕರ್ನಾಟಕ ಹಿಂದೆ ನಮ್ಮ ಆಡಳಿತದಲ್ಲಿ ಅಭಿವೃದ್ಧಿಯಲ್ಲಿ ನಂ1 ಆಗಿತ್ತು, ಈಗ ಭ್ರಷ್ಟಾಚಾರದಲ್ಲಿ ನಂ1 ಆಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಪ್ರಧಾನಿ ಮೋದಿ ಅವರೇ ಟ್ರಬಲ್ ಎಂಜಿನ್ ಸರ್ಕಾರದ ಟ್ರಬಲ್‌ನಿಂದ ಬೇಸತ್ತು ಹಲವರು ನಿಮಗೆ ಪತ್ರ ಬರೆದಿದ್ದಾರೆ. ಆ ಪತ್ರಗಳಿಗೆ ಉತ್ತರ ಹೊತ್ತು ತಂದಿದ್ದೀರಾ? ಅವರ ನೋವು ಆಲಿಸುವಿರಾ? ಬೆಲೆ ಏರಿಕೆಯಿಂದ ಕನ್ನಡಿಗರು ಕಂಗೆಟ್ಟಿದ್ದಾರೆ. ರೈತರು ಬಸವಳಿದಿದ್ದಾರೆ, ಬಡವರು ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
“ವಿದ್ಯುತ್ ದರ, ಆಸ್ತಿ ತೆರಿಗೆ, ನೀರಿನ ಬಿಲ್‌ಗಳನ್ನು ಏರಿಸಿ ಟ್ರಬಲ್ ಎಂಜಿನ್ ಸರ್ಕಾರ ಸುಲಿಗೆಗೆ ನಿಂತಿದೆ. ಬೆಲೆ ಏರಿಕೆ ಬಗ್ಗೆ ನಿಮ್ಮ ಟೆಲಿಫ್ರಾಂಪ್ಟರ್‌ನಲ್ಲಿ ಅಕ್ಷರ ಮೂಡುವುದೇ? ನಿಮ್ಮ ಮೇಲಿನ ಭರವಸೆಯಿಂದ ಹಿಂದೆ ನಳೀನ ಕುಮಾರ್ ಕಟೀಲ್ ಅವರು ಒಂದು ಡಾಲರ್‌ಗೆ 15 ರೂಪಾಯಿಯಾಗುತ್ತದೆ ಎಂದಿದ್ದರು, ಈಗ 83 ರೂಪಾಯಿಯಾಗಿದೆ. ನಿಮ್ಮ ನಳಿನ್ ಅವರೀಗ ಡಾಲರ್ ಎಂಬ ಪದ ಉಚ್ಚರಿಸುತ್ತಲೇ ಇಲ್ಲ, ಆ ಪದ ಕೇಳಿದರೆ ಬೆಚ್ಚಿ ಬೀಳುತ್ತಾರೆ! ಅವರಿಗೆ ಸಾಂತ್ವಾನ ಹೇಳುವಿರಾ?!” ಎಂದು ಕಿಡಿಕಾರಿದೆ.
” ಟ್ರಬಲ್ ಎಂಜಿನ್ ಸರ್ಕಾರದ ಕಿರುಕುಳದಿಂದ ಗುತ್ತಿದೆದಾರ ಸಂತೋಷ್ ಪಾಟೀಲ್ ಪತ್ರಕ್ಕೆ ತಾವು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಅವರ ಜೀವ ಹೋಯ್ತು. ಗುತ್ತಿಗೆದಾರರು ಭ್ರಷ್ಟ ಸರ್ಕಾರದ 40% ಲೂಟಿಯ ಬಗ್ಗೆ 2 ಬಾರಿ ನಿಮಗೆ ಪತ್ರ ಬರೆದಿದ್ದಾರೆ, ಅವರಿಗೆ ಉತ್ತರ ನೀಡಿವಿರಾ? ಅವರ ಸಮಸ್ಯೆಗೆ ಪರಿಹಾರ ತಂದಿದ್ದೀರಾ? ಬೆಲೆ ಏರಿಕೆಯ ಜೊತೆಗೆ ನಿಮ್ಮ ಅವೈಜ್ಞಾನಿಕ GST ಹೇರಿಕೆ ಹಾಗೂ ಏರಿಕೆಯು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ” ಎಂದು ಹೇಳಿದೆ.
” ಗೃಹಿಣಿರಿಗೆ ಕಣ್ಣೀರು, ಬಡವರ ಹೊಟ್ಟೆಗೆ ತಣ್ಣೀರು, ರೈತರಿಗೆ ರಕ್ತ ಕಣ್ಣೀರು ಎಂಬಂತಾಗಿದೆ ದ GST ಹಾಗೂ ಬೆಲೆ ಏರಿಕೆಯ ಬಗ್ಗೆ ಮಾತನಾಡುವ ಧೈರ್ಯವಿದೆಯೇ ಕಳೆದ ನಾಲ್ಕು ವರ್ಷಗಳಲ್ಲಿ ಪ್ರಕೃತಿ ವಿಕೋಪಗಳಿಂದ ಒಂದು ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿದೆ.ಒಮ್ಮೆಯೂ ನೆರೆ ವೀಕ್ಷಣೆಗೆ ತಾವು ಬರಲಿಲ್ಲ, ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತೆ ಕೇವಲ 1,500 ಕೋಟಿ ಬಿಟ್ಟರೆ ಮತ್ತೇನೂ ಕೊಟ್ಟಿಲ್ಲ. ಕನ್ನಡಿಗರನ್ನು ಅನಾಥರನ್ನಾಗಿಸಿದೆ. ನಿಮ್ಮ PSI, ಸಹಾಯಕ ಪ್ರಾಧ್ಯಾಪಕರು, KPTCL ಸೇರಿದಂತೆ ಬಹುತೇಕ ನೇಮಕಾತಿಗಳಲ್ಲಿ ಅಕ್ರಮ ನಡೆದಿರುವ ಸಂಗತಿ ನಿಮ್ಮ ಗಮನಕ್ಕೆ ಬಂದಿದೆಯಲ್ಲವೇ?”
“ವರ್ಷಕ್ಕೆ 2 ಕೋಟಿ ಉದ್ಯೋಗ ಎಂದಿದ್ದೀರಿ, ಆದರೆ ಇಲ್ಲಿ “2 ಕೋಟಿಗೆ ಒಂದು ಉದ್ಯೋಗ” ಎಂಬಂತಾಗಿದೆ. ನಿಮ್ಮ ಟ್ರಬಲ್ ಎಂಜಿನ್ ಸರ್ಕಾರದ ಹುದ್ದೆ ಮಾರಾಟದ ಬಗ್ಗೆ ಮಾತನಾಡುವಿರಾ? ರಸ್ತೆಗುಂಡಿಗಳು ಸಾವಿನ ಗುಂಡಿಗಳಾಗಿವೆ, 20ಕ್ಕೂ ಹೆಚ್ಚು ಜನ ಜೀವ ಬಿಟ್ಟಿದ್ದಾರೆ. ರಸ್ತೆಗುಂಡಿಗಳಿಗೆ ಭಯಬಿದ್ದು ಕಾರ್ಯಕ್ರಮಗಳಿಗೆ ಹೆಲಿಕಾಪ್ಟರ್ ಸಂಚಾರ ಆಯ್ದುಕೊಂಡಿರಾ ಹಿಂದೆ ತಮಗಾಗಿ ಹಾಕಿದ್ದ ತೇಪೆ ನಾಲ್ಕೇ ದಿನಕ್ಕೆ ಕಿತ್ತು ಹೋದ ಬಗ್ಗೆ ಮಾತಾಡುವಿರಾ? ಸಿಎಂಗೆ ವಿವರಣೆ ಕೇಳುವಿರಾ?” ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ ಪ್ರಶ್ನೇಗಳ ಸುರಿಮಳೆ ಗೈದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ