ಸ್ವಾಮೀಜಿಗಳು ಗೋವು ಸಾಕಿದ್ದಾರಾ, ಸೆಗಣಿ ಎತ್ತಿದ್ದಾರಾ: ಕೆಪಿಸಿಸಿ ವಕ್ತಾರ ಎಸ್ಎಂ ಪಾಟೀಲ ವಿವಾದಾತ್ಮಕ ಹೇಳಿಕೆ
ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ವಿಚಾರದಲ್ಲಿ ಇತ್ತೀಚೆಗಷ್ಟೇ ಪಶುಸಂಗೋಪನೆ ಸಚಿವ ವೆಂಕಟೇಶ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದೀಗ ಕಾಯ್ದೆ ವಾಪಸ್ ಪಡೆಯಬೇಡಿ ಅಂತಾ ಸಭೆ ನಡೆಸಿದ ಸ್ವಾಮೀಜಿಗಳ ವಿರುದ್ಧ ಕೆಪಿಸಿಸಿ ವಕ್ತಾರ ಎಸ್ ಎಂ ಪಾಟೀಲ ಗಣಿಹಾರ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಜಯಪುರ, ಜುಲೈ 17: ಒಬ್ಬ ಸ್ವಾಮೀಜಿಯಾದರೂ ಗೋವು ಸಾಕಿದ್ದಾರೆಯೇ? ಸೆಗಣಿ ಮೂತ್ರ ತೆಗೆದಿದ್ದಾರೆಯೇ ಎಂದು ಹೇಳುವ ಮೂಲಕ ಜಿಲ್ಲಾ ಕಾಂಗ್ರೆಸ್ ಮುಖಂಡರೂ ಆಗಿರುವ ಕೆಪಿಸಿಸಿ (KPCC) ವಕ್ತಾರ ಎಸ್ಎಂ ಪಾಟೀಲ ಗಣಿಹಾರ (SM Patil Ganihar) ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗೋ ಹತ್ಯೆ ನಿಷೇಧ ಕಾಯ್ದೆ (Anti-cow slaughter bill) ವಾಪಸ್ ಪಡೆಯಬೇಡಿ ಎಂದು ಒತ್ತಾಯಿಸಿ ಸ್ವಾಮೀಜಿಗಳು ಸಭೆ ನಡೆಸಿದ ವಿಚಾರವಾಗಿ ಮಾತನಾಡಿದ ಅವರು, ವಿವಿಧ ಸ್ವಾಮೀಜಿಗಳು ವಿಎಚ್ಪಿ ಹಾಗೂ ಆರ್ಎಸ್ಎಸ್ನವರನ್ನು ಅಕ್ಕಪಕ್ಕ ಕೂರಿಸಿಕೊಂಡು ಸಭೆ ಮಾಡಿದ್ದಾರೆ. ಆರ್ಎಸ್ಎಸ್, ಬಿಜೆಪಿ ಪುಂಗಿ ಬಾರಿಸಲಿಕ್ಕೆ ಸ್ವಾಮೀಜಿಗಳು ಕುಳಿತುಕೊಂಡಿದ್ದಾರೆ ಎಂದಿದ್ದಾರೆ.
ಭಾರತ ದೇಶದಲ್ಲಿ ಖಾವಿ ತೊಟ್ಟವರ ಬಗ್ಗೆ ಇರುವ ಪವಿತ್ರ ಭಾವನೆ ಯಾರಿಗೂ ಇಲ್ಲ. ಖಾವಿ ತೊಟ್ಟುಕೊಂಡು ಸ್ವಾಮೀಜಿಗಳು ರಾಜಕಾರಣ ಮಾಡುತ್ತಿದ್ದಾರೆ, ಇದನ್ನ ಅರ್ಥ ಮಾಡಿಕೊಳ್ಳಬೇಕು. ಅರಿಷಡ್ವರ್ಗಗಳ ನಾಶ ಮಾಡಿದಾಗ ಖಾವಿ ಬರುತ್ತದೆ. ಅದನ್ನು ಹಾಕಿಕೊಳ್ಳಲು ಶಕ್ತಿ ಬರುತ್ತದೆ. ಅರಿಷಡ್ವರ್ಗಗಳ ಅಳಿದು, ನಾಶ ಮಾಡಿ. ಆಗ ಖಾವಿ ಬರುತ್ತದೆ, ಸನ್ಯಾಸಸ ಆಗಲಿಕ್ಕೆ ಬರುತ್ತದೆ ಎಲ್ಲಾ ಕಲ್ಮಶಗಳು, ವಿಷ ಭಾವನೆ ಮನಸ್ಸಿನಲ್ಲಿಟ್ಟುಕೊಂಡು ನೀವು ಸನ್ಯಾಸಿ ಆಗುತ್ತೀರಾ? ಇದೆಲ್ಲ ಬಿಜೆಪಿ ಫೋಕಸ್ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಇದನ್ನೂ ಓದಿ: ಗೋ ಹತ್ಯೆ, ಮತಾಂತರ ಕಾಯ್ದೆ ವಾಪಾಸ್ ಹಿಂಪಡೆಯುವ ದುಸ್ಸಾಹಸ ಬೇಡ: ಪೇಜಾವರ ಶ್ರೀ
ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಗೋಹತ್ಯೆ ವಿಚಾರದಲ್ಲಿ ಸ್ವಪಕ್ಷದ ನಾಯಕರು ನೀಡಿದ ಹೇಳಿಕೆ ಇದು ಮೊದಲಲ್ಲ. ಸ್ವತಃ ಪಶುಸಂಗೋಪನೆ ಇಲಾಖೆ ಸಚಿವ ಕೆ ವೆಂಕಟೇಶ್ ಕೂಡ ಈ ಹಿಂದೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಎಮ್ಮೆ, ಕೋಣ ಕಡಿದು ಹಾಕುವುದಾದರೆ ಹಸು ಏಕೆ ಕಡಿಯಬಾರದು ಎಂದು ಪ್ರಶ್ನಿಸಿದ್ದರು.
ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಬಗ್ಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಸೂಕ್ತ ತೀರ್ಮಾನ ಮಾಡುತ್ತೇವೆ. ಒಂದು ಹಸು ಸತ್ತಾಗ ಗುಂಡಿ ತೋಡಿ ಹೂಳಲು ಕಷ್ಟವಾಗುತ್ತದೆ. ಹತ್ತಾರು ಮಂದಿ ಬಂದರೂ ಅದನ್ನು ಎತ್ತಲು ಆಗುವುದಿಲ್ಲ. ಕೊನೆಗೆ ಜೆಸಿಬಿ ಮೂಲಕ ಹಸುವಿನ ಮೃತದೇಹ ಹೂಳಬೇಕಾಯಿತು. ಹಾಗಾಗಿ ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಬಗ್ಗೆ ಚರ್ಚಿಸುವುದಾಗಿ ಹೇಳಿಕೆ ನೀಡಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:59 pm, Mon, 17 July 23