ಬಾಬುರಾವ್ ಚಿಂಚನಸೂರ್​ಗೆ ವಿಧಾನ ಪರಿಷತ್ ಟಿಕೆಟ್ ಕೊಟ್ಟ ಬಿಜೆಪಿ: ಕೋಲಿ ಸಮುದಾಯದ ಅಸಮಾಧಾನ

ಬಿಜೆಪಿ ಪಕ್ಷದಿಂದ ಕೋಲಿ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹಲವು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಬಾಬುರಾವ್ ಚಿಂಚನಸೂರ್​ಗೆ ವಿಧಾನ ಪರಿಷತ್ ಟಿಕೆಟ್ ಕೊಟ್ಟ ಬಿಜೆಪಿ: ಕೋಲಿ ಸಮುದಾಯದ ಅಸಮಾಧಾನ
ಬಾಬುರಾವ್ ಚಿಂಚನಸೂರ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 31, 2022 | 3:13 PM

ಯಾದಗಿರಿ: ವಿಧಾನ ಪರಿಷತ್ ಉಪ ಚುನಾವಣೆಗೆ ಬಿಜೆಪಿಯಿಂದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರಿಗೆ ಟಿಕೆಟ್ ನೀಡಿದ್ದು ಕೋಲಿ ಸಮೂದಾಯದ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಬಿಜೆಪಿ ಪಕ್ಷದಿಂದ ಕೋಲಿ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹಲವು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಕೋಲಿ ಸಮುದಾಯದವರಿಗೆ ಟಿಕೆಟ್ ತಪ್ಪಿಸಲು ಬಿಜೆಪಿ ಹುನ್ನಾರ ನಡೆಸಿದೆ. ಗುರುಮಠಕಲ್‌ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಬಾಬುರಾವ್ ಚಿಂಚನಸೂರ್ ಅವರಿಗೆ ಟಿಕೆಟ್ ಕೊಡಬೇಕಿತ್ತು. ಈ ಅವಕಾಶ ತಪ್ಪಿಸುವ ಉದ್ದೇಶದಿಂದಲೇ ಪರಿಷತ್ ಟಿಕೆಟ್ ಕೊಟ್ಟಿದ್ದಾರೆ. ಕೋಲಿ ಸಮೂದಾಯದ ಮತಗಳನ್ನು ಕ್ರೋಡಿಕರಿಸಲು ಬಿಜೆಪಿ ನಡೆಸಿರುವ ಸಂಚು ಇದು ಎಂದು ಆರೋಪ ಮಾಡಲಾಗಿದೆ.

ಮುಂದಿನ ಟಿಕೆಟ್ ತಪ್ಪಿಸಲು ವಿಧಾನ ಪರಿಷತ್ ಚುನಾವಣೆಯನ್ನು ದಾಳವಾಗಿ ಬಳಸಿಕೊಂಡಿರುವ ಬಗ್ಗೆ ನಮಗೆ ಅಸಮಾಧಾನವಿದೆ. ಐದು ಬಾರಿ ಶಾಸಕರಾಗಿ ಎರಡು ಬಾರಿ ಮಂತ್ರಿಯಾದವರು ಚಿಂಚನಸೂರ್. ಗುರುಮಠಕಲ್​ನಿಂದ ಎರಡು ಬಾರಿ ಗೆದ್ದಿದ್ದರು. ಆದರೆ ಕಳೆದ ಬಾರಿ ಸೋತಿದ್ದಾರೆ. ಅವರಿಗೆ ಅಲ್ಪ ಅವಧಿಯ ಅಧಿಕಾರ ಕೊಟ್ಟು ಅನ್ಯಾಯ ಮಾಡಲಾಗುತ್ತಿದೆ ಎಂದು ಕೋಲಿ ಸಮುದಾಯದ ಮುಖಂಡ ಉಮೇಶ್ ಮುದ್ನಾಳ್ ಅಸಮಧಾನ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಗುರುಮಠಕಲ್​ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕೊಡಿದ್ದರೆ ಕೋಲಿ ಸಮುದಾಯ ಬೇರೆಯೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. 45 ವರ್ಷಗಳ ಕಾಲ‌ ಸೋತಿರದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವಲ್ಲಿ ಮತ್ತು ಉಮೇಶ್ ಜಾಧವ್ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಾಬುರಾವ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಕೋಲಿ‌ ಸಮೂದಾಯಕ್ಕೆ ಪರಿಶಿಷ್ಟ ವರ್ಗದ ಸ್ಥಾನಮಾನ ನೀಡುವ ಭರವಸೆ ನೀಡಿದ್ದ ಸರ್ಕಾರ ಈವರೆಗೆ ತನ್ನ ಮಾತು ಈಡೇರಿಸಿಲ್ಲ ಬಿಜೆಪಿಯಿಂದ ನಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಅವರು ಆರೋಪ ಮಾಡಿದರು.