ಇಂದೇ ಅಮಿತ್ ಶಾ ಬರ ಪರಿಹಾರ ಘೋಷಣೆ ಮಾಡಲಿ: ಕೃಷ್ಣ ಬೈರೇಗೌಡ
ಸೆ.13ರಂದು ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿದ್ದೇವೆ. ಎನ್ಡಿಆರ್ಎಫ್ ಅಡಿ ಪರಿಹಾರಕ್ಕಾಗಿ ಸೆಪ್ಟೆಂಬರ್ 23ರಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಇತರೆ ರಾಜ್ಯಗಳಿಗಿಂದ ಎರಡು ತಿಂಗಳು ಮೊದಲೇ ಮನವಿ ಮಾಡಿದ್ದೆವು. ಆದರೆ, ಇದರುವರೆಗೆ ಪರಿಹಾರ ಘೋಷಣೆ ಮಾಡಿಲ್ಲ ಎಂದು ಹೇಳಿದ ಸಚಿವ ಕೃಷ್ಣ ಬೈರೇಗೌಡ, ರಾಜ್ಯಕ್ಕೆ ಭೇಟಿ ನೀಡಿರುವ ಅಮಿತ್ ಶಾ ಅವರು ಇಂದೇ ಪರಿಹಾರ ಘೋಷಣೆ ಮಾಡಿದರೆ ರೈತ ಪರ ಕಾಳಜಿ ಇದೆ ಎಂದು ಒಪ್ಪುತ್ತೇವೆ ಎಂದರು.
ಬೆಂಗಳೂರು, ಫೆ.11: ರಾಜ್ಯ ಭೇಟಿ ವೇಳೆಯೇ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು ಎನ್ಡಿಆರ್ಎಫ್ (NDRF) ಅಡಿ ಬರ ಪರಿಹಾರ ಘೋಷಣೆ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದೇ ಗೃಹ ಸಚಿವರು ಘೋಷಣೆ ಮಾಡಿದರೆ ರೈತರ ಪರ ಕಾಳಜಿ ಇದೆ ಅಂತ ಒಪ್ಪುತ್ತೇವೆ. ಇಲ್ಲದಿದ್ದರೆ ರೈತರ ಪರ ಯಾವುದೇ ಕಾಳಜಿ ಇಲ್ಲ, ಕೇವಲ ನಾಟಕ ಮಾಡುತ್ತಿದ್ದಾರೆ ಅಂತ ಅನಿಸುತ್ತದೆ ಎಂದರು.
ಬರ ಪೀಡಿತ ತಾಲೂಕುಗಳನ್ನು ಸೆಪ್ಟೆಂಬರ್ 13 ರಂದು ಘೋಷಣೆ ಮಾಡಿದ್ದು, 18,172 ಕೋಟಿ ಬರ ಪರಿಹಾರಕ್ಕಾಗಿ ಸೆಪ್ಟೆಂಬರ್ 23 ರಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಕೇಂದ್ರ ಕೃಷಿ ಕಾರ್ಯದರ್ಶಿಯನ್ನೂ ಭೇಟಿ ಮಾಡಿದ್ದೇವೆ. ಡಿಸೆಂಬರ್ನಲ್ಲಿ ಪ್ರಧಾನಿ ಮೋದಿ ಭೇಟಿಯಾಗಿ ಮನವಿ ಮಾಡಿದ್ದೇವೆ. ಜನವರಿಯಲ್ಲೂ ಸಿದ್ದರಾಮಯ್ಯ ಭೇಟಿಯಾಗಿ ಮನವಿ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ಸಭೆ ಮಾಡಿ ಯಾವ ತೀರ್ಮಾನವೂ ಕೈಗೊಂಡಿಲ್ಲ ಎಂದರು.
ಕೇಂದ್ರ ಸರ್ಕಾರ ಎನ್ಡಿಆರ್ಎಫ್ ಅಡಿ ಹಣ ಕೊಡುವುದು ವಿಳಂಬ ಆಗುತ್ತಿದೆ. ಕಳೆದ ವರ್ಷ ರೈತರಿಗೆ ಕೊಬೇಕಾದ ಹಣ ಲೂಟಿ ಆಗಿದೆ. ದುರುಪಯೋಗ ತಡೆಗಟ್ಟಲೂ ಹಿಂದಿನ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ ಎಂದು ಕೃಷ್ಣ ಬೈರೇಗೌಡ ಆರೋಪಿಸಿದರು.
2009 ರಲ್ಲಿ ರಾಯಚೂರು ಬಳಿ ಬ್ರಿಡ್ಜ್ ಮುಳುಗಿತ್ತು. ಅವತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇತ್ತು. ಆದರೆ ಆಗ ಕರ್ನಾಟಕದಲ್ಲಿ ಯಾವ ಸರ್ಕಾರ ಇತ್ತು ಅಂತ ಯೋಚನೆ ಮಾಡದೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೂಡಲೇ 1000 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದ್ದರು ಎಂದರು.
ಇದನ್ನೂ ಓದಿ: ಗ್ಯಾರಂಟಿಯಿಂದ ಬೊಕ್ಕಸ ಖಾಲಿ ಹೇಳಿಕೆ: ಅಮಿತ್ ಶಾ ಬಹಿರಂಗ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಸವಾಲು
ಎಎನ್ಡಿಆರ್ಎಫ್ ಕಾರ್ಯಕ್ರಮ ಕೂಡ ಗೃಹ ಸಚಿವರ ಇಲಾಖೆ ಅಡಿಯಲ್ಲಿ ಬರುತ್ತದೆ. ಇದೇ ಸಂಧರ್ಭದಲ್ಲಿ ಅವರು ರಾಜ್ಯದಲ್ಲಿ ಇರುವ ಬರ ಪರಿಸ್ಥಿತಿಯನ್ನ ಗಂಭೀರವಾಗಿ ತಗೆದುಕೊಂಡು ಮನವಿಗೆ ಪರಿಹಾರ ಕೊಡುವ ತೀರ್ಮಾನ ತೆಗೆದುಕೊಂಡು ಇಲ್ಲೇ ಘೋಷಣೆ ಮಾಡಬೇಕು ಅಂತ ಕೇಳುತ್ತಿದ್ದೇವೆ ಎಂದರು.
ಅತೀ ಹೆಚ್ಚು ತೆರಿಗೆ ಕಟ್ಟುವ ಎರಡನೇ ರಾಜ್ಯ ಕರ್ನಾಟಕ. ಹಾಗಾಗಿ ನಮ್ಮ ಹಕ್ಕನ್ನ ಕೇಳುತ್ತಿದ್ದೇವೆ. ನಮ್ಮ ರಾಜ್ಯದ ರೈತರ ಪರಿಸ್ಥಿರಿ ಗಂಭೀರವಾಗಿರುವುದರಿಂದ ಬರ ಪರಿಹಾರ ಘೋಷಣೆ ಮಾಡಬೇಕಿದೆ. ಜೊತೆಗೆ ಬಿಜೆಪಿ, ಜೆಡಿಎಸ್ ಒಕ್ಕೂಟವು ನಮ್ಮ ರಾಜ್ಯಕ್ಕೆ ಬರ ಪರಿಹಾರ ಬರಬೇಕು ಅಂತ ಒತ್ತಾಯ ಮಾಡಬೇಕಿದೆ ಎಂದರು.
ಕನಿಷ್ಠ ಕೇಂದ್ರದ ನಾಯಕರನ್ನು ಭೇಟಿಯಾಗಿ ನಮ್ಮ ರೈತರು ಸಂಕಷ್ಟದಲ್ಲಿದ್ದಾರೆ ಅಂತ ವಿಪಕ್ಷ ಹೋಗಿ ಸಫಲರಾದರೆ ಅದಕ್ಕೂ ಧನ್ಯವಾದ ಹೇಳುತ್ತೇನೆ. ಪ್ರತಿಪಕ್ಷ ಪ್ರಯತ್ನ ಮಾಡದೇ ಹೋದರೆ ಬರೀ ಡೋಂಗಿತನ ಅಂತ ಅನಿಸುತ್ತದೆ. ರಾಜ್ಯದ ಜನಗಳ ಹಿತ ಮುಖ್ಯ. ರಾಜಕೀಯ ಮುಖ್ಯ ಅಲ್ಲ. ಮನವಿ ಕೊಟ್ಟು ನಾಲ್ಕೂವರೆ ತಿಂಗಳಾಗಿದೆ. ಬೇರೆ ರಾಜ್ಯಗಳಿಗಿಂತ ಎರಡು ತಿಂಗಳು ಮೊದಲೇ ಮನವಿ ಕೊಟ್ಟಿದ್ದೇವೆ. ಹೀಗಾಗಿ ಇವತ್ತೆ ಗೃಹ ಸಚಿವರು ಪರಿಹಾರ ಘೋಷಣೆ ಮಾಡಿದರೆ ರೈತ ಪರ ಕಾಳಜಿ ಇದೆ ಅಂತ ಒಪ್ಪುತ್ತೆವೆ ಎಂದರು.
ಎನ್ಡಿಆರ್ಎಫ್ ಅಡಿ ರಾಜ್ಯಕ್ಕೆ ಒಂದು ರೂಪಾಯಿ ಕೂಡ ಬಿಡುಗಡೆ ಆಗಿಲ್ಲ. ಸಿಎಂ ಸಿದ್ದರಾಮಯ್ಯ ಸೇರಿದಂತೆ ನಾವು ಅಂಕಿ ಅಂಶ ಇಟ್ಟುಕೊಂಡೇ ಮಾತನಾಡುತ್ತಿದ್ದೇವೆ. ಅವರು (ಬಿಜೆಪಿ) ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಮಾತನಾಡುತ್ತಿದ್ದಾರೆ. ರಾಜ್ಯದ ಜನಗಳಿಗೆ ನ್ಯಾಯ ಒದಗಿಸಬೇಕಿದೆ. ಕೇಂದ್ರ ಸರ್ಕಾರದ ವಿಳಂಬ ಧೋರಣೆ ಬಗ್ಗೆ ಸಮಾಧಾನ ಇದೆ. ವಿಳಂಬ ಆಗಿರುವುದರಿಂದ ರೈತರಿಗೆ ಕಷ್ಟ ಆಗಿದೆ ಎಂದರು.
ಶ್ರೀಮಂತರಿಗೆ ಕೊಟ್ಟ ಟ್ಯಾಕ್ಸ್ ವಿನಾಯಿತಿಬಿಟ್ಟಿ ಭಾಗ್ಯ ಅಲ್ವಾ?
ಕೇಂದ್ರ ಸರ್ಕಾರ ಶ್ರೀಮಂತರಿಗೆ ಕೊಡುವ 1 ಲಕ್ಷದ 75 ಸಾವಿರ ಕೋಟಿ ರೂಪಾಯಿ ತೆರಿಗೆ ವಿನಾಯಿತಿ ಬಿಟ್ಟಿ ಭಾಗ್ಯ ಅಲ್ವಾ? ಬಡವರಿಗೆ ಕೊಟ್ಟರೆ ಮಾತ್ರ ಬಿಟ್ಟಿ ಭಾಗ್ಯಾನಾ? ಶ್ರೀಮಂತರು ವರ್ಷಕ್ಕೆ 5 ಲಕ್ಷ ಕೋಟಿ ಸಾಲ ಮನ್ನಾ ಅಗುತ್ತಲ್ಲ ಅದು ಬಿಟ್ಟಿ ಭಾಗ್ಯ ಅಲ್ವಾ? ಬದುಕೋದಕ್ಕೆ ಬಡವರಿಗೆ ಸಹಾಯ ಮಾಡೋ ಶಕ್ತಿ ತುಂಬೋದು ಬಿಟ್ಟಿ ಭಾಗ್ಯಾನಾ? ಎಂದು ಪ್ರಶ್ನಿಸಿದ ಕೃಷ್ಣ ಬೈರೇಗೌಡ, ಬಡವರಿಗೆ ಸಹಾಯ ಮಾಡಿದರೆ ಅವರಿಗೆ ಸಹಿಸಲು ಆಗಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ