ಮೈಸೂರು ಮೋದಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಯಡಿಯೂರಪ್ಪ: ಮತ್ತೆ ಅಡ್ಡಗೋಡೆ ಮೇಲೆ ದೀಪ ಇಟ್ಟ ಶ್ರೀನಿವಾಸ ಪ್ರಸಾದ್
ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು (ಏ.14) ಸಂಸದ ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿ, ಮೈಸೂರಿನಲ್ಲಿ ನಡೆಯುವ ಮೋದಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಬಿಎಸ್ ಯಡಿಯೂರಪ್ಪ ಅವರ ಆಹ್ವಾನಕ್ಕೆ ಶ್ರೀನಿವಾಸ್ ಪ್ರಸಾದ್ ಉತ್ತರ ಹೀಗಿದೆ..
ಮೈಸೂರು, ಏಪ್ರಿಲ್ 14: ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ (Srinivas Prasad) ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಅಳಿಯನಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಪ್ರಸಾದ್ ಪಕ್ಷದ ಮೇಲೆ ಮುನಿಸಿಕೊಂಡಿದ್ದಾರೆ. ಶ್ರೀನಿವಾಸ್ ಪ್ರಸಾದ್ ಮುನಿಸು ಬೆನ್ನಲ್ಲೇ ಕುಟುಂಬಸ್ಥರು ಮತ್ತು ಬೆಂಬಲಿಗರು ಬಿಜೆಪಿ (BJP) ತೊರೆದು ಕಾಂಗ್ರೆಸ್ (Congress) ಸೇರಿದ್ದಾರೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಭೇಟಿ ನೀಡುವ ಮೂಲಕ ರಾಜಕೀಯ ಎದುರಾಳಿಗಳಿಬ್ಬರು ತಮ್ಮ 7 ವರ್ಷದ ಮುನಿಸನ್ನು ಶಮನಗೊಳಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಕೂಡ ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿ ಪಕ್ಷದ ವಿರುದ್ಧ ಮುನಿಸನ್ನು ಶಮನ ಮಾಡಲು ಯತ್ನಿಸಿದ್ದಾರೆ.
ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಮೈಸೂರಿನಲ್ಲಿ ನಡೆಯುವ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬರಲು ಶ್ರೀನಿವಾಸ್ ಪ್ರಸಾದ್ ಒಪ್ಪಿದ್ದಾರೆ. ಶ್ರೀನಿವಾಸ್ ಪ್ರಸಾದ್ ಬಹಳ ಹಿರಿಯ ಸಂಸತ್ ಸದಸ್ಯರು. ಮೋದಿ ಅವರ ಬಗ್ಗೆ ಬಹಳ ಗೌರವ ಇಟ್ಟುಕೊಂಡಿದ್ದಾರೆ. ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ 5 ನಿಮಿಷ ಇದ್ದು ಹೋಗಿ ಅಂತ ಮನವಿ ಮಾಡಿಕೊಂಡಿದ್ದೇನೆ. ಶ್ರೀನಿವಾಸ್ ಪ್ರಸಾದ್ ಅವರು ಬರಲು ಒಪ್ಪಿಕೊಂಡಿದ್ದಾರೆ. ಇದಕ್ಕೆ ಚಿರ ಋಣಿಯಾಗಿದ್ದೇನೆ ಎಂದರು.
ಇದನ್ನೂ ಓದಿ: ಬಿಜೆಪಿಗೆ ಮೈಸೂರಿನಲ್ಲಿ ಮೈತ್ರಿ ಲಾಭ, ತವರು ಕ್ಷೇತ್ರದಲ್ಲಿ ‘ಕೈ’ ಬಲಪಡಿಸಲು ಸಿದ್ದರಾಮಯ್ಯಗಿದೆ ಹಲವು ಸವಾಲು
ಬರಲು ಆಗಲ್ಲ ಅಂತ ಹೇಳಲು ಆಗಲ್ಲ: ಶ್ರೀನಿವಾಸ್ ಪ್ರಸಾದ್
ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ಬರುವಂತೆ ಬಿಎಸ್ ಯಡಿಯೂರಪ್ಪ ಆಹ್ವಾನಿಸಿದ್ದಾರೆ. ಖಡಾ ಖಂಡಿತವಾಗಿ ಬರಲು ಆಗಲ್ಲ ಅಂತ ಹೇಳಲು ಆಗಲ್ಲ. ಮನೆಗೆ ಬಂದವರನ್ನು ಸೌಜನ್ಯದಿಂದ ಸ್ವಾಗತಿಸುವುದು ಕರ್ತವ್ಯ. ಸೌಜನ್ಯದಿಂದ ಬಂದಾಗ ಪ್ರೀತಿಯಿಂದ ಮಾತನಾಡಿದ್ದೇನೆ. ಕಾರ್ಯಕ್ರಮಕ್ಕೆ ಹೋಗುವುದು ಬಿಡುವುದು ನಮ್ಮ ತೀರ್ಮಾನ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು. ಪ್ರತಿಕ್ರಿಯೆ.
ಮಾವನವರಿಗೆ ಆರೋಗ್ಯ ಸರಿಯಿಲ್ಲ. ವಾರದ ಹಿಂದೆ ಕಾಲಿಗೆ ಗಾಯ ಆಗಿ ಪಸ್ ಆಗಿತ್ತು. ಜಾಸ್ತಿ ನಡೆಯಲು, ಕೂರಲು ಆಗಲ್ಲ. ಒಂದು ವಾರದ ಹಿಂದೆಯೇ ಮೈಸೂರು ಜಿಲ್ಲಾಧ್ಯಕ್ಷ ಮಹದೇವಸ್ವಾಮಿ ಹಾಗೂ ಮಾಜಿ ಶಾಸಕ ನಿರಂಜನ್ ಆಹ್ವಾನ ಕೊಟ್ಟರು. ಆಗ ನಾನು ಅವರು ಬರಲು ಸಾಧ್ಯ ಆಗಲ್ಲ ಅಂತ ಹೆಳಿದ್ದೆ. ಈಗ ಕೆಲವರು ಇದನ್ನೇ ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಆದರೆ ಶ್ರೀನಿವಾಸ್ ಪ್ರಸಾದ್ ಅವರು ಎಲ್ಲಿಯೂ ಯಾರ ಬಳಿಯೂ ಬೆಂಬಲದ ಬಗ್ಗೆ ಮಾತನಾಡಿಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಅಳಿಯ ಮಾಜಿ ಶಾಸಕ ಹರ್ಷವರ್ಧನ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ