ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ಭಾರಿ ಪ್ಲಾನ್, ಹಿರಿಯ ನಾಯಕನನ್ನು ಕಣಕ್ಕಿಳಿಸಲು ಚಿಂತನೆ
ಲೋಕಸಭಾ ಚುನಾವಣೆಗೆ 2-3 ತಿಂಗಳು ಬಾಕಿ ಇವೆ. ಈಗಾಗಲೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಟಿಕೆಟ್ಗಾಗಿ ಲಾಭಿ ಶುರುವಾಗಿವೆ. ಅಲ್ಲದೆ ರಾಜ್ಯ ಕಾಂಗ್ರೆಸ್ ಘಟಕ ಐದು ಗ್ಯಾರೆಂಟಿ ಯಶಸ್ವಿ ಜಾರಿ ಮತ್ತು ಕ್ಷೇತ್ರದಲ್ಲಿನ ನಾಯಕರ ಪ್ರಭಾವನ್ನು ಮುಂದು ಮಾಡಿ ಚುನಾವಣೆ ಎದುರಿಸಲು ಚಿಂತನೆ ನಡೆಸಿದೆ. ಹೀಗಾಗಿ ಕ್ಷೇತ್ರಗಳಲ್ಲಿ ಪ್ರಭಲ ನಾಯಕರನ್ನೇ ಹುಡುಕುತ್ತಿದೆ. ಅದರಂತೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ತನ್ನ ಹಿರಿಯ ನಾಯಕನನ್ನು ಕಣಕ್ಕಿಳಿಸಲು ಚಿಂತಿಸಿದೆ.
ಉತ್ತರ ಕನ್ನಡ, ಫೆಬ್ರವರಿ 09: ಲೋಕಸಭೆ ಚುನಾವಣೆಗೆ (Lok Sabha Election) 2-3 ತಿಂಗಳು ಬಾಕಿ ಉಳಿದಿವೆ. ಈಗಾಗಲೆ ರಾಜ್ಯದಲ್ಲಿ ಟಿಕೆಟ್ಗಾಗಿ ಲಾಭಿ ಜೋರಾಗಿಯೇ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್ (Congress) ಘಟಕ ಹಾಲಿ ಶಾಸಕರು ಅಥವಾ ಸಚಿವರನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಿದೆ. ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಲು ಮುಂದಾಗಿದೆ. ಜಾರಿಯಾಗಿರುವ ಐದು ಗ್ಯಾರೆಂಟಿ ಮತ್ತು ಸ್ಥಳೀಯ ನಾಯಕರ ಪ್ರಭಾವ ಎರಡನ್ನೂ ಒಟ್ಟುಗೂಡಿಸಿ ಚುನಾವಣೆಯನ್ನು ಎದುರಿಸಲು ಸಜ್ಜಾಗಿದೆ. ಇದಕ್ಕಾಗಿ ಎಲ್ಲ ಕ್ಷೇತ್ರಗಳಲ್ಲಿ ಪ್ರಬಲ ನಾಯಕರನ್ನೇ ಕಣಕ್ಕೆ ಇಳಿಸಲು ಕಾಂಗ್ರೆಸ್ ತಯಾರಿ ನಡೆಸಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಅದರಂತೆ ಇದೀಗ ಉತ್ತರ ಕನ್ನಡ (Uttar Kannada) ಲೋಕಸಭಾ ಕ್ಷೇತ್ರದಲ್ಲಿ ಹಿರಿಯ ನಾಯಕನನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ಲಾನ್ ಮಾಡಿದೆ.
ಹೌದು ಹಲಿಯಾಳ-ದಾಂಡೇಲಿ-ಜೋಯಿಡಾ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಆರ್ ವಿ ದೇಶಪಾಂಡೆ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಯೋಚಿಸಿದೆ. ಇನ್ನು ಆರ್ವಿ ದೇಶಪಾಂಡೆ ಅವರಿಗೆ ಟಿಕೆಟ್ ಕೊಡವ ವಿಚಾರವಾಗಿ ಕೈ ನಾಯಕರು ಸಾಕಷ್ಟು ಲೆಕ್ಕಾಚಾರ ಹಾಕಿದ್ದಾರೆ . ಉತ್ತರ ಕನ್ನಡ ಜಿಲ್ಲೆಯ ಪ್ರತಿ ಕ್ಷೇತ್ರದಲ್ಲೂ ಆರ್ವಿ ದೇಶಪಾಂಡೆ ತನ್ನ ಹಿಡಿತವನ್ನು ಸಾಧಿಸಿದ್ದಾರೆ. ಅಲ್ಲದೆ ಒಂಬತ್ತು ಬಾರಿ ಹಲಿಯಾಳ-ದಾಂಡೇಲಿ-ಜೋಯಿಡಾ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ಲಕ್ಷ್ಮಣ ಸವದಿಯನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಚಿದಾನಂದ ಸವದಿಗೆ ಟಿಕೆಟ್ ನೀಡುವ ಸಾಧ್ಯತೆ
ಇನ್ನು ಉತ್ತರ ಕನ್ನಡ ಜಿಲ್ಲೆಯ ಉಸ್ತುವರಿ ಸಚಿವರಿದ್ದಾಗ ತಮ್ಮ ಕಾರ್ಯ ಶೈಲಿ ಮೂಲಕ ಅನೇಕ ಕಾಂಗ್ರೆಸ್ ನಾಯಕರ ಮನಸ್ಸು ಗೆದ್ದಿದ್ದರು. ಆರ್ವಿ ದೇಶಪಾಂಡೆ ಆರ್ಥಿಕವಾಗಿಯೂ ಬಲಿಷ್ಠರಾಗಿದ್ದಾರೆ. ಇವರು ಜಿಲ್ಲೆಯಲ್ಲಿ ತಮ್ಮದೆ ಆದ ಮತ ಬ್ಯಾಂಕ್ ಹೊಂದಿದ್ದಾರೆ. ಈಗಿನ ಬಿಜೆಪಿ ಸಂಸದ ಅನಂತ ಕುಮಾರ ಹೆಗಡೆ ಅವರಿಗೆ ಟಕ್ಕರ್ ಕೊಡಬಹುದಾದ ನಾಯಕರಾಗಿದ್ದಾರೆ. ಹೀಗಾಗಿ ಆರ್ವಿ ದೇಶಪಾಂಡೆ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತಿಸಿದೆ.
ಒಂದು ವೇಳೆ ಆರ್ವಿ ದೇಶಪಾಂಡೆ ಗೆಲವು ಸಾಧಿಸಿದರೆ, ವಿಧಾನಸಭಾ ಕ್ಷೇತ್ರ ಖಾಲಿಯಾಗಲಿದೆ. ಆಗ ಆರ್ವಿ ದೇಶಪಾಂಡೆ ಪುತ್ರ ಪ್ರಶಾಂತ ದೇಶಾಂಡೆಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
ಟಿಕೆಟ್ಗಾಗಿ ಬಿಜೆಪಿಯಲ್ಲಿ ಪೈಪೋಟಿ
ಅನಂತ ಕುಮಾರ್ ಹೆಗಡೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಈಗಿನ ಸಂಸದರಾಗಿದ್ದು, ಕಾರ್ಯಕರ್ತರ ಒತ್ತಾಯದ ಮೇರೆಗೆ 2024ರ ಚುನಾವಣೆಯಲ್ಲೂ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಆದರೆ ಇವರ ಸ್ಪರ್ಧೆಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಬೇಕು. 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇತ್ತ ಅನಂತ ಕುಮಾರ್ ಹೆಗಡೆ ತಯಾರಿ ನಡೆಸಿದ್ದರೆ, ಅತ್ತ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಟಿಕೆಟ್ಗಾಗಿ ಲಾಭಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಸೋಲಿನಿಂದ ಹೊರಬರಲು ಹವಣಿಸುತ್ತಿದ್ದಾರೆ.
ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯಲ್ಲೆ ಇಬ್ಬರು ಸ್ಪರ್ಧಿಗಳು ಉದ್ಭವಿಸಿದ್ದರೆ, ಅತ್ತ ಕಾಂಗ್ರೆಸ್ನಲ್ಲಿ ಆರ್ ವಿ ದೇಶಪಾಂಡೆ ಹೆಸರು ಕೇಳಿ ಬರುತ್ತಿದೆ. ಆದರೆ ಕೊನೆ ಹಂತದಲ್ಲಿ ಟಿಕೆಟ್ ಯಾರ ಮಡಿಲು ಸೇರುತ್ತದೆ ಕಾದು ನೋಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:59 am, Fri, 9 February 24