ಮೈಸೂರು, ಏಪ್ರಿಲ್ 02: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮೈಸೂರು-ಕೊಡಗು (Mysore-Kodagu) ಮತ್ತು ಚಾಮರಾಜನಗರ (Chamrajnagar) ಲೋಕಸಭಾ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನೆಡೆಸಿದ್ದಾರೆ. ಸೋಮವಾರ (ಏ.01) ರಂದು ತವರು ಕ್ಷೇತ್ರ ವರುಣದಲ್ಲಿ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರಿಗೆ ವರುಣದಲ್ಲಿ 60 ಸಾವಿರ ಲೀಡ್ ಬೇಕು, ಅಷ್ಟು ಲೀಡ್ ಬಂದಿದ್ದೇ ಆದರೆ ಯಾರು ನನ್ನನ್ನು ಮುಟ್ಟಲು ಸಾಧ್ಯವಿಲ್ಲ, ನಾನು ಇರಬೇಕೋ, ಬೇಡ್ವೋ ಎಂದು ಭಾವನಾತ್ಮಕವಾಗಿ ಅಸ್ತ್ರವಾಗಿ ಮತ ಯಾಚಿಸಿದ್ದರು. ಹಾಗಿದ್ದರೆ ಸಿಎಂ ಸಿದ್ದರಾಮಯ್ಯ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದು ಯಾಕೆ? ತವರು ಕ್ಷೇತ್ರದಲ್ಲೆ ಕಡಿಮೆ ಮತಗಳು ಬರುವ ಆತಂಕ ಸಿಎಂಗೆ ಕಾಡುತ್ತಿದಿಯಾ? ಇಲ್ಲಿದೆ ವಿವರ..
ವರುಣ ಮೈಸೂರು ಜಿಲ್ಲೆಯಲ್ಲಿದ್ದರೂ, ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಮರಾಜನಗರಕ್ಕೆ ಸೇರುತ್ತದೆ. ಚಾಮರಾಜನಗರ ಲೋಕಸಭಾ ಕ್ಷೇತ್ರ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ವರುಣ, ಹೆಚ್.ಡಿ ಕೋಟೆ, ನಂಜನಗೂಡು, ತಿ. ನರಸೀಪುರ, ಹನೂರು, ಕೊಳ್ಳೆಗಾಲ, ಚಾಮರಾಜನಗರ ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬರುತ್ತವೆ.
2019ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರದಿಂದ ಕಾಂಗ್ರೆಸ್ನ ಅಭ್ಯರ್ಥಿಯಾಗಿ ಆರ್. ಧ್ರುವನಾರಾಯಣ ಸ್ಪರ್ಧಿಸಿದ್ದರು. ಬಿಜೆಪಿಯಿಂದ ವಿ. ಶ್ರೀನಿವಾಸ್ ಪ್ರಸಾದ್ ಸ್ಪರ್ಧಿಸಿ ಗೆದ್ದಿದ್ದರು. ಈ ಲೋಕಸಭೆ ಚುನಾವಣೆಯಲ್ಲಿ ವರುಣದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ಗೆ ಹೆಚ್ಚಾಗಿ ಕೇವಲ 9 ಸಾವಿರ ಮತಗಳು ಬಂದಿದ್ದವು.
ಇದನ್ನೂ ಓದಿ: ವರುಣಾ ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ ಸಿದ್ದರಾಮಯ್ಯ ಕಾಂಗ್ರೆಸ್ ಗೆದ್ದರೆ ಯಾರೂ ತನ್ನನ್ನು ಮುಟ್ಟಲಾಗಲ್ಲ ಅಂತ ಹೇಳಿದ್ದು ಯಾಕೆ?
2018ರ ವಿಧಾನಸಭೆ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ವರುಣ ಕ್ಷೇತ್ರದ ಜನ ಯತೀಂದ್ರ ಸಿದ್ದರಾಮಯ್ಯ ಅವರನ್ನು 59 ಸಾವಿರ ಲೀಡ್ನಿಂದ ಗೆಲ್ಲಿಸಿದ್ದರು. ಆದರೆ 2019ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ಗೆ ಕೊಟ್ಟಿದ್ದು 9 ಸಾವಿರ ಲೀಡ್ ಮಾತ್ರ. ಲೋಕಸಭಾ ಚುನಾವಣೆಯಲ್ಲಿ ವರುಣದಲ್ಲಿ ಕಾಂಗ್ರೆಸ್ಗೆ ಬಂದಿದ್ದು 79,404 ಮತ ಮತ್ತು ಬಿಜೆಪಿಗೆ 70,402 ಸಾವಿರ ಮತಗಳು ಬಂದಿದ್ದವು. ಆದರೆ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ್ ವರುಣ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ ಬರುತ್ತವೆ ಎಂಬ ನೀರಿಕ್ಷೆ ಹೊಂದಿದ್ದರು, ಆದರೆ ನಿರೀಕ್ಷೆ ಮಟ್ಟದಲ್ಲಿ ಮತಗಳು ಬರಲಿಲ್ಲ. ಜೊತೆಗೆ ಈ ಲೀಡ್ ಮುಖ್ಯಮಂತ್ರಿಗಳಿಗೂ ಕೂಡ ಆಘಾತ ಉಂಟು ಮಾಡಿತ್ತು.
ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರಿಗೆ 49 ಸಾವಿರ ಲೀಡ್ ಕೊಟ್ಟಿರುವ ವರುಣ ಮತದಾರರು ಲೋಕಸಭೆಯಲ್ಲಿ ಕೈ ಕೊಡುತ್ತಾರೆ ಎಂಬ ಟೆನ್ಷನ್ ಮುಖ್ಯಮಂತ್ರಿಗಳಿಗೆ ಕಾಡುತ್ತಿದೆ. ಕಳೆದ ಲೋಕಸಭೆ ಚುನಾವಣೆ ಹಾಗೆ ಈ ಬಾರಿಯೂ ವರುಣ ಜನತೆ ಕಡಿಮೆ ಲೀಡ್ ನೀಡಿದರೆ, ತಮ್ಮ ಸಿಎಂ ಕುರ್ಚಿಗೆ ಕಂಟಕ ಎದುರಾಗಲಿದೆ ಎಂಬ ಆತಂಕದಿಂದ ಸಿದ್ದರಾಮಯ್ಯ ಅವರು 60 ಸಾವಿರ ಲೀಡ್ ನೀಡಿ ಅಂತ ಹೇಳಿದ್ರಾ ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಹೀಗಾಗಿ 60 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವಂತೆ ವರುಣ ಕ್ಷೇತ್ರದ ಜನರ ಎದರು ಸಿಎಂ ಎಮೋಷನಲ್ ಕಾರ್ಡ್ ಪ್ಲೇ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಮೋಷನಲ್ ಕಾರ್ಡ್ ವರ್ಕ್ ಆಗುತ್ತಾ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:12 am, Tue, 2 April 24