ಲೋಕಸಭಾ ಚುನಾವಣೆ ಹೊತ್ತಲ್ಲೇ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಸಂಕಷ್ಟ
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದರಲ್ಲೂ ಕಾಂಗ್ರೆಸ್ ಈ ಬಾರಿ ರಾಜ್ಯದಲ್ಲಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲಲು ಗುರಿ ಹೊಂದಿದೆ. ಹೀಗಾಗಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಟಾಸ್ಕ್ ಕೊಡಲಾಗಿದೆ. ಅದರಂತೆ ಈ ಬಾರಿ ಮೈಸೂರು-ಚಾಮರಾಜನಗರ ಕ್ಷೇತ್ರವನ್ನು ಗೆಲ್ಲಲು ಸಿದ್ದರಾಮಯ್ಯ ಮುಂದೆ ದೊಡ್ಡ ಸವಾಲ್ ಆಗಿದ್ದು, ತಂದೆಯ ಸಹಾಯಕ್ಕೆ ಪುತ್ರ ಯತೀಂದ್ರ ಸಿದ್ದರಾಮಯ್ಯ ನಿಂತಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಯತೀಂದ್ರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಇದರ ಮಧ್ಯೆ ಯತೀಂದ್ರ ಸಿದ್ದರಾಮಯ್ಯನವರಿಗೆ ಚುನಾವಣೆ ಆಯೋಗ ಬಿಗ್ ಶಾಕ್ ಕೊಟ್ಟಿದೆ.
ಚಾಮರಾನಗರ, (ಏಪ್ರಿಲ್ 01): ಈ ಬಾರಿ ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರವನ್ನು ಗೆಲ್ಲಲು ಖುದ್ದು ಸಿಎಂ ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ಪುತ್ರ ಯತೀಂದ್ರಗೂ (Yathindra Siddaramaiah )ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿಯುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಯತೀಂದ್ರ ಅವರು ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ನೇಹಿತ ಸುನೀಲ್ ಬೊಸ್ ಗೆಲುವಿಗಾಗಿ ಹಗಲಿರುಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಟ ನಡೆಸಿದ್ದಾರೆ. ಇದರ ಮಧ್ಯೆ ಯತೀಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹೇಳಿಕೆಯೊಂದನ್ನು ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು.. ಅಮಿತ್ ಶಾ ವಿರುದ್ಧ ರೌಡಿ ಹೇಳಿಕೆ ಸಂಬಂಧ ಚುನಾವಣಾ ಆಯೋಗವು ಯತೀಂದ್ರ ಸಿದ್ದರಾಮಯ್ಯನವರಿಗೆ ನೋಟಿಸ್ ನೀಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಒಬ್ಬ ಗೂಂಡಾ ಎಂದಿದ್ದ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಈ ಬಗ್ಗೆ ಸ್ವತಃ ಸಚಿವ ಕೆ ವೆಂಕಟೇಶ್ ಹೇಳಿದ್ದಾರೆ. ಟಿ ನರಸೀಪುರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ವೆಂಕಟೇಶ್, ಸಿಬಿಐ ವರದಿಯಲ್ಲಿ ಇದ್ದಿದ್ದು ಹೇಳಿದ್ದಕ್ಕೆ ಯತೀಂದ್ರ ಅವರಿಗೆ ನೋಟಿಸ್ ಕೊಡಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಯತೀಂದ್ರ ಸಿದ್ದರಾಮಯ್ಯಗೆ ಚುನಾವಣೆ ಆಯೋಗ ನೋಟಿ ಜಾರಿ ಮಾಡಿರುವುದನ್ನು ಬಹಿರಂಪಡಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಗೂಂಡಾ, ರೌಡಿ ಎಂದ ಯತೀಂದ್ರ ಸಿದ್ದರಾಮಯ್ಯ
ಏನಿದು ವಿವಾದ..?
ಇತ್ತೀಚೆಗೆ ಹನೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ಅವರು, ಗುಜರಾತ್ ಹತ್ಯಾಕಾಂಡಕ್ಕೆ ಕಾರಣ ಯಾರು? ಅಂದು ನರಮೇಧ ಮಾಡಿದವರು ಇಂದು ದೇಶದ ಉನ್ನತ ಸ್ಥಾನದಲ್ಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಒಬ್ಬ ಗೂಂಡಾ. ಅವರ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳಿವೆ. ಇಂತಹವರನ್ನು ಪ್ರಧಾನಿ ಮೋದಿ ತಮ್ಮ ಪಕ್ಕದಲ್ಲೇ ಕೂರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆದಿಯಾಗಿ ರಾಜ್ಯ ಬಿಜೆಪಿ ನಾಯಕರು, ಮುಖಂಡರು ಯತೀಂದ್ರ ಸಿದ್ದರಾಮಯ್ಯನವರ ಹೇಳಿಕೆಯನ್ನು ಖಂಡಿಸಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಈ ಬಗ್ಗೆ ಕ್ರಮಕೈಗೊಳ್ಳುವಂತೆ ರಾಜ್ಯ ಬಿಜೆಪಿ ನಿಯೋಗವು ಯತೀಂದ್ರ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ