ಬೆಂಗಳೂರು, ಏಪ್ರಿಲ್ 12: ಲೋಕಸಭೆ ಚುನಾವಣೆಗೆ (Lok Sabha Elections) ಮೈಸೂರು ಕೊಡಗು (Mysuru Kodagu) ಲೋಕಸಭಾ ಕ್ಷೇತ್ರದಲ್ಲಿ ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ರನ್ನು ಬಿಜೆಪಿ (BJP) ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಪರ ಸಿಎಂ ಸಿದ್ದರಾಮಯ್ಯ ಅಖಾಡಕ್ಕಿಳಿದಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಗೆಲುವಿಗೆ ಸಿದ್ದರಾಮಯ್ಯ ತಂತ್ರ ಹೆಣೆಯುತ್ತಿದ್ದಾರೆ. ಅತ್ತ ಬಿಜೆಪಿ ಕೂಡ ಜೆಡಿಎಸ್ ಮೈತ್ರಿಯೊಂದಿಗೆ ರಾಜರನ್ನು ಗೆಲ್ಲಿಸಿಕೊಂಡು ಬರಲು ಪಣ ತೊಟ್ಟಿದೆ. ಪರಿಣಾಮವಾಗಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಹೈವೋಲ್ಟೇಜ್ ಕದನ ಕಣವಾಗಿ ಮಾರ್ಪಟ್ಟಿದೆ. ಆದರೆ, ಕ್ಷೇತ್ರದ ಮತದಾರರು, ಜನಸಾಮಾನ್ಯರ ಅಭಿಪ್ರಾಯ ಹೇಗಿದೆ? ಸಿದ್ದರಾಮಯ್ಯ ತಂತ್ರಗಾರಿಕೆ, ಪ್ರಧಾನಿ ಮೋದಿ ರ‍್ಯಾಲಿ ಇವುಗಳಲ್ಲಿ ಯಾವುದು ಹೆಚ್ಚು ಫಲಕೊಡಲಿದೆ ಎಂಬ ಕುತೂಹಲ ಈಗ ಮೂಡಿದೆ.
ಪ್ರಧಾನಿ ಮೋದಿಯವರ ಜನಪ್ರಿಯತೆ, ಸಿದ್ದರಾಮಯ್ಯನವರ ಪ್ರಭಾವ, ರಾಜ ಮನೆತನದ ಒಡೆಯರ್ ಮೇಲಿನ ಗೌರವ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಐದು ಉಚಿತ ಗ್ಯಾರಂಟಿಗಳ ಸಾಧಕ-ಬಾಧಕಗಳು ಮತ್ತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ 25 ಭರವಸೆಗಳು ಪ್ರಮುಖವಾಗಿ ಕ್ಷೇತ್ರದಾದ್ಯಂತ ಚರ್ಚೆಯಲ್ಲಿವೆ.
ಏತನ್ಮಧ್ಯೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ರ‍್ಯಾಲಿ ನಡೆಸಲಿದ್ದು, ಮತದಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಮೋದಿ ಅಲೆಯನ್ನು ಹೆಚ್ಚಿಸುವ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರಿದ್ದಾರೆ.
‘ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಲಾಭವಿದೆ. ಆದರೆ, ಲೋಕಸಭೆ ಚುನಾವಣೆಯಬ ಆಯಾಮ ವಿಭಿನ್ನವಾಗಿದೆ. ಕೇಂದ್ರದಲ್ಲಿ ಸರ್ಕಾರವನ್ನು ಆಯ್ಕೆ ಮಾಡುವಾಗ ರಾಷ್ಟ್ರೀಯ ಭದ್ರತೆಯಂತಹ ಸಮಸ್ಯೆಗಳು ಗಮನದಲ್ಲಿರುತ್ತವೆ’ ಎಂದು ಗೋಣಿಕೊಪ್ಪದ ಆಟೋರಿಕ್ಷಾ ಚಾಲಕ ಎಂ ರಾಮು ಎಂಬವರು ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಕಳೆದ ಒಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಸಾಧನೆ ಮಾಡಿದೆ ಎಂದು ಇನ್ನು ಕೆಲವರು ಭಾವಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ.
ಕಳೆದ 10 ವರ್ಷಗಳಲ್ಲಿ ಕೇಂದ್ರದಲ್ಲಿ ಬಿಜೆಪಿಯ ಆಡಳಿತವನ್ನು ಜನರು ನೋಡಿದ್ದಾರೆ. ಜನರು ಬದಲಾವಣೆ ಬಯಸಿದರೆ ಕಾಂಗ್ರೆಸ್‌ಗೆ ಅನುಕೂಲವಾಗಬಹುದು ಎಂದು ವಿರಾಜಪೇಟೆಯ ವರ್ತಕ ಅಬ್ದುಲ್ ಸಲೀಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಶಕಗಳಿಂದ ಕೊಡಗು ಬಿಜೆಪಿಯ ಭದ್ರಕೋಟೆಯಾಗಿದೆ ಎಂದು ಕಾಫಿ ಬೆಳೆಗಾರ ಕೆಪಿ ಮುತ್ತಣ್ಣ ಎಂಬವರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಪ್ರಬಲವಾದ ಮೋದಿ ಅಲೆ ಇರುವುದು ನಿಜ. ಇದರೊಂದಿಗೆ ಒಡೆಯರ್ ಸಮಂಜಸ ಅಭ್ಯರ್ಥಿ ಎಂದು ತೋರುತ್ತದೆ. ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಅಷ್ಟೊಂದು ಜನಪ್ರಿಯರಲ್ಲ ಎಂದು ಮುತ್ತಣ್ಣ ಹೇಳಿದ್ದಾರೆ. 2018ರಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಾದ ಸೋಲಿನ ನಂತರ ಸಿದ್ದರಾಮಯ್ಯ ಇಲ್ಲಿನ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಎಂದು ಮೈಸೂರಿನ ವಕೀಲ ಹಾಗೂ ರಾಜಕೀಯ ವಿಶ್ಲೇಷಕ ಎನ್ಆರ್ ರವಿಚಂದ್ರೇಗೌಡ ಹೇಳಿದ್ದಾರೆ.
ಸಿದ್ದರಾಮಯ್ಯ ಚಾಮರಾಜನಗರ ಸಂಸದ ಬಿಜೆಪಿಯ ವಿ ಶ್ರೀನಿವಾಸ್ ಪ್ರಸಾದ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮಟ್ಟಕ್ಕೆ ಹೋಗಿದ್ದಾರೆ. ಪ್ರಸಾದ್ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರೂ, ಪ್ರಭಾವಿ ದಲಿತ ನಾಯಕರಾಗಿದ್ದಾರೆ. ಅವರ ಬಹುತೇಕ ಕುಟುಂಬ ಸದಸ್ಯರು ಮತ್ತು ಬೆಂಬಲಿಗರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ ಎಂಬುದನ್ನು ಅವರು ಒತ್ತಿ ಹೇಳಿದರು.
ಬಿಜೆಪಿಗೆ ಜೆಡಿಎಸ್ ಜತೆಗಿನ ಮೈತ್ರಿಯಿಂದ ಪ್ರಯೋಜನವಾಗಲಿದೆ. ಜಿಲ್ಲಾ ಪಂಚಾಯತ್ ಮತ್ತು ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಲವು ಸಂದರ್ಭಗಳಲ್ಲಿ ಮೈತ್ರಿ ಮಾಡಿಕೊಂಡಿವೆ. ಇದು ಬಿಜೆಪಿಗೆ ವರವಾಗಿ ಪರಿಣಮಿಸಬಹುದು ಎಂದು ಅವರು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಗೆ ನೆರವಾದೀತೇ ಕುಮಾರಸ್ವಾಮಿ ಪ್ರಭಾವ? ಬಲಾಬಲ ಲೆಕ್ಕಾಚಾರ ಇಲ್ಲಿದೆ
ಬಿಜೆಪಿ ರಾಷ್ಟ್ರೀಯ ನಾಯಕರು ಈ ಹಿಂದೆಯೇ ಒಡೆಯರ್ರನ್ನು ಪಕ್ಷಕ್ಕೆ ಕರೆತರಲು ಬಯಸಿದ್ದರು. 2019ರ ಚುನಾವಣೆಯಲ್ಲಿಯೇ ಅವರಿಗೆ ಟಿಕೆಟ್ ಆಫರ್ ಮಾಡಿದ್ದರು. ಆದರೆ, ಆಗ ಅವರು ರಾಜಕೀಯಕ್ಕೆ ಬರಲು ಸಿದ್ಧರಿರಲಿಲ್ಲ. ಅವರ ಅಭ್ಯರ್ಥಿತನದ ಘೋಷಣೆ ಅಚ್ಚರಿಯ ನಿರ್ಧಾರ ಎನಿಸಿದರೂ, ಅದಕ್ಕೆ ತೆರೆಯ ಮರೆಯಲ್ಲಿ ಒಂದೆರಡು ವರ್ಷಗಳಿಂದ ಪ್ರಯತ್ನ ನಡೆಯುತ್ತಿತ್ತು ಎಂದು ಮೂಲಗಳು ಹೇಳಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:21 pm, Fri, 12 April 24