Lok Sabha Elections: ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿ, ಬಳ್ಳಾರಿ ಗೆಲ್ಲಿಸಲು ಮೂವರು ಸಚಿವರಿಗೆ ಹೊಣೆ
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಅಖಾಡ ರಂಗೇರುತ್ತಿದ್ದು, ಪ್ರಮುಖ ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಕಾಂಗ್ರೆಸ್ ಹಾಗೂ ಬಿಜೆಪಿ ರಣತಂತ್ರ ಹೆಣೆಯುತ್ತಿವೆ. ಒಂದೆಡೆ, ಬಳ್ಳಾರಿಯಲ್ಲಿ ರೆಡ್ಡಿ ವಿರುದ್ಧ ಪ್ರಚಾರಕ್ಕೆ ಮೂವರು ಸಚಿವರನ್ನೇ ಕಾಂಗ್ರೆಸ್ ಅಖಾಡಕ್ಕಿಳಿಸಿದ್ದರೆ ಮತ್ತೊಂದೆಡೆ ಶೆಟ್ಟರ್ ಪರ ಬಿಎಸ್ವೈ ಖುದ್ದು ತಂತ್ರ ಹೆಣೆಯುತ್ತಿದ್ದಾರೆ.
ಬೆಂಗಳೂರು, ಮಾರ್ಚ್ 28: ಲೋಕಸಭಾ ಚುನಾವಣೆಯ (Lok Sabha Elections) ಅಖಾಡ ರಂಗೇರಿದ್ದು, ರಾಜ್ಯದ ಕೆಲ ಹೈವೋಲ್ಟೇಜ್ ಕ್ಷೇತ್ರಗಳು ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗುತ್ತಿವೆ. ಅದಲ್ಲೂ ಜನಾರ್ದನ ರೆಡ್ಡಿ ಬಿಜೆಪಿ (BJP) ಸೇರಿದ ಬೆನ್ನಲ್ಲೇ ಬಳ್ಳಾರಿ ರಣಕಣ ರಂಗುಪಡೆದುಕೊಂಡಿದೆ. ಬಳ್ಳಾರಿಗೆ ಜನಾರ್ದನ ರೆಡ್ಡಿ ಎಂಟ್ರಿ ಕೊಡದೇ ಇದ್ದರೂ ಕ್ಷೇತ್ರದಲ್ಲಿ ಇನ್ನೂ ಪ್ರಭಾವ ಉಳಿಸಿಕೊಂಡಿದ್ದಾರೆ. ಹೀಗಾಗಿಯೇ ಕಾಂಗ್ರೆಸ್ (Congress) ತನ್ನ ಅಭ್ಯರ್ಥಿ ಗೆಲುವಿಗೆ ರಣತಂತ್ರ ಹೆಣೆಯುತ್ತಿದೆ. ಬಳ್ಳಾರಿಯಿಂದಲೇ ಟ್ರೆಂಡ್ ಬದಲಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಮೂವರು ಸಚಿವರನ್ನು ಕ್ಷೇತ್ರದಲ್ಲಿ ತಂತ್ರಗಾರಿಕೆ ರೂಪಿಸಲು ಬಿಟ್ಟಿದ್ದಾರೆ.
ಯಾವೆಲ್ಲ ಸಚಿವರಿಗೆ ಹೊಣೆ?
ಕಾರ್ಮಿಕ ಸಚಿವ ಸಂತೋಷ ಲಾಡ್, ಬಳ್ಳಾರಿ ಉಸ್ತುವಾರಿ ಸಚಿವ ಬಿ. ನಾಗೇಂದ್ರ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ಗೆ ಬಳ್ಳಾರಿ ಕ್ಷೇತ್ರದ ಹೊಣೆ ನೀಡಲಾಗಿದೆ. ರಾಮುಲುಗೆ ಪ್ರಬಲ ಟಕ್ಕರ್ ನೀಡಲು ಮೂವರು ಸಚಿವರಿಗೆ ಸಿಎಂ ಬಳ್ಳಾರಿ ಹೊಣೆ ನೀಡಿದ್ದಾರೆ. ಬಳ್ಳಾರಿ ಗೆಲುವಿನ ಮೂಲಕ ರಾಹುಲ್ ಗಾಂಧಿಗೆ ಬಲ ತುಂಬಲು ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ. ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗ್ತಿದಂತೆಯೇ ಮೂವರು ಸಚಿವರು ಕಣಕ್ಕೆ ಇಳಿಯಲಿದ್ದಾರೆ.
ಬೆಳಗಾವಿಯಲ್ಲಿ ಅಸಮಾಧಾನ ಶಮನ: ಶೆಟ್ಟರ್ ಪ್ರಚಾರ
ಮತ್ತೊಂದೆಡೆ, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ಗೆ ಟಿಕೆಟ್ ಘೋಷಣೆ ಆಗ್ತಿದ್ದಂತೆಯೇ ಅಖಾಡ ಕಾವೇರಿದೆ. ಆದರೆ, ಸ್ಥಳೀಯ ಬಿಜೆಪಿ ನಾಯಕರು ಶೆಟ್ಟರ್ಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಖುದ್ದು ಫೀಲ್ಡ್ಗೆ ಇಳಿದಿದ್ದ ಬಿಎಸ್ ಯಡಿಯೂರಪ್ಪ ಅಸಮಾಧಾನಿತರನ್ನು ಮನವೊಲಿಸಿದ್ದಾರೆ. ಶೆಟ್ಟರ್ ಕೂಡ ಬುಧವಾರ ಪ್ರಚಾರ ನಡೆಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ಗೆ ಕಠಿಣ ಪೈಪೋಟಿ ನೀಡುವ ಸಾಧ್ಯತೆಯಿದೆ.
ಮೊಮ್ಮಗನ ಪರ ದೇವೇಗೌಡರಿಂದ ಪ್ರಚಾರ
ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲ್ಲಿಸಲು ದೊಡ್ಡಗೌಡರು ಅಖಾಡಕ್ಕಿಳಿದಿದ್ದಾರೆ. ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಮೊಮ್ಮಗನ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು, ಶ್ರವಣಬೆಳಗೊಳ ಸೇರಿ ವಿವಿಧೆಡೆ ಪ್ರಚಾರ ನಡೆಸಿದ್ದಾರೆ.
ಇದನ್ನೂ ಓದಿ: ರಾಯಚೂರು ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಅತ್ಮಹತ್ಯೆಗೆ ಯತ್ನಿಸಿದ ಬಿವಿ ನಾಯಕ್ ಬೆಂಬಲಿಗರು
ಏತನ್ಮಧ್ಯೆ, ಕಳೆದ 4 ದಿನದಿಂದ ಮೈಸೂರಿನಲ್ಲಿದ್ದ ಸಿಎಂ ಸಿದ್ದರಾಮಯ್ಯ ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳನ್ನ ಗೆಲ್ಲಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಮೊದಲ ಹಂತದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರನ್ನು ಪಕ್ಷಕ್ಕೆ ಕರೆತರುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ. ಮಾಜಿ ಸಿಎಂ ಬಿಎಸ್ವೈ ಆಪ್ತ ಹೆಚ್ವಿ ರಾಜೀವ್, ಬಿ.ಎಲ್.ಭೈರಪ್ಪ, ಮಾಜಿ ಸಚಿವ ಕೋಟೆ ಎಂ.ಶಿವಣ್ಣರನ್ನು ಕಾಂಗ್ರೆಸ್ಗೆ ಸೇರಿಸಿದ್ದಾರೆ. ಅತ್ತ ಜೆಡಿಎಸ್‌ನ ಕೆ.ವಿ.ಮಲ್ಲೇಶ್, ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಸೆಳೆಯುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ.
(ಬ್ಯುರೋ ರಿಪೋರ್ಟ್ ‘ಟಿವಿ9’)
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ