ಲೋಕಸಭೆ ಫಲಿತಾಂಶ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷ ಅಸಮಾಧಾನ

ಲೋಕಸಭೆ ಚುನಾವಣೆ ಸೋಲಿನ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವಣ ಶೀತಲ ಸಮರ ಮತ್ತೆ ಮುನ್ನೆಲೆಗೆ ಬರುವ ಸುಳಿವು ಕಾಣಿಸಿದೆ. ನಮ್ಮ ನಾಯಕರ ಅತಿಯಾದ ವಿಶ್ವಾಸವೇ ಲೋಕಸಭೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಎರಡಂಕಿ ತಲುಪದೇ ಇರಲು ಕಾರಣ ಎಂದು ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಫಲಿತಾಂಶ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷ ಅಸಮಾಧಾನ
ಡಿಕೆ ಶಿವಕುಮಾರ್ & ಸತೀಶ್ ಜಾರಕಿಹೊಳಿ
Edited By:

Updated on: Jun 05, 2024 | 2:12 PM

ಬೆಳಗಾವಿ, ಜೂನ್ 5: ಲೋಕಸಭೆ ಚುನಾವಣೆಯಲ್ಲಿ (Lok Sabha Election Result) ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ (Congress) ಎರಡಂಕಿ ತಲುಪಲು ಸಾಧ್ಯವಾಗದೇ ಇರುವ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಇದೀಗ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಕೂಡ ಆ ಬಗ್ಗೆ ಮಾತನಾಡಿದ್ದು, ಡಬಲ್ ಡಿಜಿಟ್ ತಲುಪದೇ ಇರುವುದಕ್ಕೆ ನಮ್ಮ ನಾಯಕರ ಓವರ್ ಕಾನ್ಫಿಡೆನ್ಸೇ ಕಾರಣ ಎಂದು ಹೇಳಿದ್ದಾರೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೋಕಾಕ್ ನಗರದಲ್ಲಿ ಮಾತನಾಡಿದ ಅವರು, ಡೈರೆಕ್ಟರ್, ಪ್ರೊಡ್ಯೂಸರ್ ಫೇಲ್ ಆದರೆ ಈ ರೀತಿಯ ಫಲಿತಾಂಶ ನಿರೀಕ್ಷಿತ. ಚುನಾವಣೆಗೆ ಸಮಯ ಕಡಿಮೆ ಇರುತ್ತದೆ, ಆ ಸಮಯದಲ್ಲಿ ಅಲರ್ಟ್ ಆಗಿ ಇರಬೇಕು. ಇಲ್ಲವಾದರೆ ಚುನಾವಣೆ ಬಂದು ಹೋಗುತ್ತದೆ, ಆಗಲೇ ನಾವು ಕೆಲಸ ಮಾಡಬೇಕು. ನಮ್ಮ ನಾಯಕರು ಹಲವು ಕ್ಷೇತ್ರಗಳನ್ನು ನಿರ್ಲಕ್ಷಿಸಿದ್ದೂ ನಮ್ಮ ಹಿನ್ನಡೆಗೆ ಕಾರಣ ಎಂದು ಅವರು ಹೇಳಿದರು.

ಗೆಲ್ಲುವ ಅತಿಯಾದ ವಿಶ್ವಾಸದ ಕಾರಣಕ್ಕೆ ಇನ್ನೂ ಹಲವು ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಚಾರ ಆಗಲಿಲ್ಲ. ಕೆಲವಡೆ ಕಡಿಮೆ ಮತಗಳ ಅಂತರದಿಂದ ಸೋಲಲು ನಮ್ಮ ನಿರ್ಲಕ್ಷ್ಯವೇ ಕಾರಣ ಎಂದು ಅವರು ಹೇಳಿದ್ದಾರೆ. ಆಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಹಿನ್ನಡೆಗೆ ಅಧ್ಯಕ್ಷರೇ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವ ಬದಲಾವಣೆ ಕೂಗಿನ ಜತೆಗೆ ಉನ್ನತಾಧಿಕಾರ ರಚನೆಗೆ ಒತ್ತಾಯ ಹೆಚ್ಚಾಗುವ ಸಾಧ್ಯತೆ ಇದೆ. ಈ ಮಧ್ಯೆ, ಆಕಾಂಕ್ಷಿಗಳು ಸಚಿವ ಸ್ಥಾನಕ್ಕೆ ಬೇಡಿಕೆ ಇಡಲಿದ್ದಾರೆ. ಪರಿಣಾಮವಾಗಿ ಸಚಿವರ ಖಾತೆಗಳು ಅದಲು ಬದಲಾದರೂ ಆಗಬಹುದು. ಸಮುದಾಯವಾರು ಡಿಸಿಎಂ ಹುದ್ದೆಗಳ ಸೃಷ್ಟಿಗೆ ಮತ್ತೆ ಒತ್ತಾಯ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದ್ದವು. ಇದರ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಹೇಳಿಕೆ ಮೂಡಿಬಂದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಎರಡಂಕಿ ದಾಟದ ಕಾಂಗ್ರೆಸ್: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗು ಖಚಿತ

ಅಂದಹಾಗೆ, ಸತೀಶ್ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್ ಬಣಗಳ ನಡುವಣ ಶೀತಲ ಸಮರ ಕೆಲವು ತಿಂಗಳುಗಳ ಹಿಂದೆ ವ್ಯಾಪಕವಾಗಿ ಚರ್ಚೆಗೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಬೆಳಗಾವಿ ರಾಜಕಾರಣದಲ್ಲಿ ಹೊರಗಿನವರ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಎಂದು ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ಅಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us