AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತಗಳ್ಳತನ: ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಲು ಮುಂದಾದ ಬಿಜೆಪಿ

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳವು ಆರೋಪವು ಸದ್ಯ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ರಾಹುಲ್ ಗಾಂಧಿಯ ಈ ಆರೋಪಕ್ಕೆ ಉತ್ತರ ನೀಡಲು ಬಿಜೆಪಿ ಮುಂದಾಗಿದ್ದು, ಪಿಪಿಟಿ ಪ್ರಾತ್ಯಕ್ಷಿಕೆ ಮೂಲಕ ಸುದ್ದಿಗೋಷ್ಠಿ ನಡೆಸಲು ಸಜ್ಜಾಗಿದೆ.

ಮತಗಳ್ಳತನ: ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಲು ಮುಂದಾದ ಬಿಜೆಪಿ
ರಾಹುಲ್​ ಗಾಂಧಿ, ಬಿಜೆಪಿ
ಕಿರಣ್​ ಹನಿಯಡ್ಕ
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 09, 2025 | 10:57 AM

Share

ಬೆಂಗಳೂರು, ಆಗಸ್ಟ್​ 09: ಶುಕ್ರವಾರ ನಗರಕ್ಕೆ ಆಗಮಿಸಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಬೃಹತ್ ಪ್ರತಿಭಟನೆ ನಡೆಸಿ 1 ಲಕ್ಷಕ್ಕೂ ಅಧಿಕ ಮತ ಕಳ್ಳತನವಾಗಿದೆ ಅಂತಾ ಪುನರುಚ್ಛರಿಸಿದರು. ಸಾಲದ್ದಕ್ಕೆ ಚುನಾವಣಾ ಆಯೋಗದ ಮುಂದೆ ಐದು ಪ್ರಶ್ನೆಗಳನ್ನಿಟ್ಟಿದ್ದಾರೆ. ಸದ್ಯ ಈ ವಿಚಾರವಾಗಿ ತಿರುಗೇಟು ನೀಡಲು ಬಿಜೆಪಿ (BJP) ಸಿದ್ಧತೆ ನಡೆಸಿದ್ದು, ಪಿಪಿಟಿ ಪ್ರಾತ್ಯಕ್ಷಿಕೆ ಮೂಲಕ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಲು ಪ್ಲ್ಯಾನ್ ನಡೆಸಿದೆ. ಆ ಮೂಲಕ ದೆಹಲಿಯಲ್ಲಿ ರಾಹುಲ್ ಗಾಂಧಿ ಆರೋಪಿಸಿದ ರೀತಿಯಲ್ಲೇ ಬಿಜೆಪಿ ಟಾಂಗ್​ ಕೊಡಲು ಮುಂದಾಗಿದೆ.

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳವು ಆರೋಪ ವಿಚಾರವಾಗಿ ಈಗಾಗಲೇ ಮಾಜಿ ಸಚಿವ ಅರವಿಂದ ಲಿಂಬಾವಳಿ ಹೈಕಮಾಂಡ್​ಗೆ ಮಾಹಿತಿ ನೀಡಿದ್ದಾರೆ. ಹೈಕಮಾಂಡ್ ದೆಹಲಿಗೆ ಬುಲಾವ್ ನೀಡಿದರೆ ಸೋಮವಾರದ ವೇಳೆಗೆ ಅರವಿಂದ ಲಿಂಬಾವಳಿ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಕರ್ನಾಟಕ ಸೇರಿ ಬೇರೆ ರಾಜ್ಯಗಳಲ್ಲಿನ ಆರೋಪದ ಬಗ್ಗೆ ರಾಹುಲ್ ಗಾಂಧಿಗೆ ಉತ್ತರ ನೀಡಲು ಬಿಜೆಪಿ ಮುಂದಾಗಿದೆ.

ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಿಷ್ಟು

ಟಿವಿ9 ಜೊತೆಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ನಾವು ಇಷ್ಟಕ್ಕೇ ಸೀಮಿತ ಆಗಲ್ಲ. ಹೋರಾಟವನ್ನು ಬಿಜೆಪಿ ಕೈಗೆತ್ತಿಕೊಳ್ಳುತ್ತದೆ. ಮುಂದಿನ ಹೆಜ್ಜೆಯನ್ನು ಕೇಂದ್ರ ಬಿಜೆಪಿ ತೀರ್ಮಾನ ಮಾಡುತ್ತದೆ. ರಾಹುಲ್ ಗಾಂಧಿ ಎಷ್ಟು ಸುಳ್ಳುಗಾರ ಎಂಬ ಜನಾಭಿಪ್ರಾಯ ಮೂಡಿಸುತ್ತೇವೆ. ಪಕ್ಷದ ವರಿಷ್ಠರು ನನ್ನಿಂದ ಮಾಹಿತಿ ಕೇಳಿದ್ದಾರೆ, ಸಂಪೂರ್ಣ ಮಾಹಿತಿಯನ್ನು ಪಿಪಿಟಿ ಮೂಲಕ ವರಿಷ್ಠರಿಗೆ ಕಳಿಸುತ್ತೇನೆ. ಕಾಂಗ್ರೆಸ್ ಅನ್ನು ಎಕ್ಸ್ ಪೋಸ್ ಮಾಡುವ ಕೆಲಸ ಮಾಡುತ್ತೇವೆ. ಅವರ ಆರು ತಿಂಗಳ ರಿಸರ್ಚ್ ಎಲ್ಲವೂ ಸುಳ್ಳು ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ
Image
ಮತಗಳ್ಳತನ: ರಾಹುಲ್ ಗಾಂಧಿ ತಪ್ಪು ಮಾಹಿತಿ ನೀಡಿದ್ದಾರೆ; ಅರವಿಂದ ಲಿಂಬಾವಳಿ
Image
ಮತಗಳ್ಳತನ ಆರೋಪ: ಟಿವಿ9 ರಿಯಾಲಿಟಿ ಚೆಕ್​ ನಲ್ಲಿ ಸತ್ಯ ಬಯಲು
Image
ಮತಗಳ್ಳತನ: ಚುನಾವಣೆ ಆಯೋಗಕ್ಕೆ ದೂರು ನೀಡದೇ ಹೋದ ರಾಹುಲ್ ಗಾಂಧಿ
Image
ನಕಲಿ ವೋಟ್​ ನಿಂದಲೇ ನನ್ನ ಮೊದಲು ಸೋಲಾಯ್ತು: ಖರ್ಗೆ ವಾಗ್ದಾಳಿ

ಇದನ್ನೂ ಓದಿ: ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ: ರಾಹುಲ್ ಗಾಂಧಿ ತಪ್ಪು ಮಾಹಿತಿ ನೀಡಿದ್ದಾರೆ; ಅರವಿಂದ ಲಿಂಬಾವಳಿ

ನಿಮ್ಮಲ್ಲಿರುವ ಮಾಹಿತಿಯನ್ನು ಪಬ್ಲಿಕ್ ಡೊಮೈನ್​ಗೆ ಹಾಕಿ, ಏಕೆ ಹೆದರುತ್ತೀರಾ? ರಾಹುಲ್ ಗಾಂಧಿ ಮಾಡಿರುವ ಎಲ್ಲಾ ಆರೋಪಗಳನ್ನು ನಾನು ಚೆಕ್ ಮಾಡಿದ್ದೇನೆ. ನನ್ನ ಬಳಿ ದಾಖಲೆ ಇದೆ. ಸಿಎಂ ಕ್ಷೇತ್ರದ ಮತದಾರರ ಪಟ್ಟಿ ಕೂಡ ಹೀಗೆಯೇ ಇದೆ. ವರುಣಾದಲ್ಲಿ ಮತಗಳವು ಇಲ್ಲ, ಬಿಜೆಪಿಯವರು ಎಲ್ಲಿ ಗೆದ್ದಿದ್ದಾರೋ ಅಲ್ಲಿ ಮಾತ್ರ ಮತಗಳವು ಎಂದು ಮಿಸ್ ಗೈಡ್ ಮಾಡುತ್ತಿರುವ ಕೆಲಸ ವಿಪಕ್ಷ ನಾಯಕರಾಗಿ ಮಾಡುತ್ತಿರುವುದು ಅಕ್ಷಮ್ಯ ಅಪರಾಧ ಎಂದಿದ್ದಾರೆ.

ರಾಹುಲ್ ಗಾಂಧಿ ಕ್ಷಮೆ ಕೇಳಬೇಕು

ನಿಮ್ಮದು ಫೇಕ್ ಅಲ್ಲ, ನಮ್ಮದು ಮಾತ್ರ ಫೇಕಾ? ರಾಹುಲ್ ಗಾಂಧಿ ಕ್ಷಮೆ ಕೇಳಬೇಕು. ಯುವಕರು, ಬಡವರು, ಮಹದೇವಪುರದ ಮತದಾರರಿಗೆ ಅವಮಾನ ಮಾಡಿದ್ದೀರಿ. ಹೆಚ್ಚು ಲೀಡ್ ಬಂದರೆ ನಿಮಗೆ ಹೊಟ್ಟೆಕಿಚ್ಚು ಏಕೆ? ನನ್ನನ್ನು ಮತ್ತು ಮೋದಿಯವರನ್ನು ಟಾರ್ಗೆಟ್ ಮಾಡಿದ್ದೀರಿ. ಇದ್ದಕ್ಕಿದ್ದಂತೆ ಈ ರೀತಿ ಆರೋಪ ಮಾಡುವ ಮುನ್ನ ರಾಹುಲ್ ಗಾಂಧಿ ಯೋಚಿಸಬೇಕಿತ್ತು. ನಾವು ರಾಜಕಾರಣಿಗಳು ದಪ್ಪ ಚರ್ಮದವರು. ಜನ ಸೂಕ್ಷ್ಮ ಇರುತ್ತಾರೆ. ಸುಳ್ಳು ಆರೋಪದಿಂದ ನಿಮ್ಮ ಕ್ರೆಡಿಬಿಲಿಟಿ ಕಳೆದುಕೊಳ್ಳುತ್ತೀರಿ. ರಾಹುಲ್ ಗಾಂಧಿ ವಿರುದ್ಧ ಕಾನೂನು ಕ್ರಮ ವರಿಷ್ಠರಿಗೆ ಬಿಟ್ಟಿದ್ದು, ಅವರ ಸೂಚನೆಯಂತೆ ನಾವು ನಡೆದುಕೊಳ್ಳುತ್ತೇವೆ. ಆರೋಪದ ಬಗ್ಗೆ ಬಹಿರಂಗ ಚರ್ಚೆಗೆ ರಾಹುಲ್ ಗಾಂಧಿ ಸಿದ್ದರಿದ್ದಾರಾ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.