ಬೆಂಗಳೂರು, (ಜುಲೈ.21): ಎಐಸಿಸಿ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ (Mallikarjun Kharge ) ಅವರಿಗೆ ಇಂದು (ಜುಲೈ 21) 81ನೇ ವರ್ಷದ ಹುಟ್ಟುಹಬ್ಬದ(Birthday) ಸಂಭ್ರಮ. ಖರ್ಗೆ ಜನ್ಮದಿನಕ್ಕೆ ಕಾಂಗ್ರೆಸ್, ಬಿಜೆಪಿ ಹಲವು ನಾಯಕರು ಶುಭಕೋರುತ್ತಿದ್ದಾರೆ. ಖರ್ಗೆ ಅವರ ಜನ್ಮದಿನದಂದು ಅವರು ಬೆಳೆದುಬಂದ ಹಾದಿಯನ್ನು ನೋಡಲೇಬೇಕು. ಬೀದರ್ ಜಿಲ್ಲೆಯ ಚಿಕ್ಕ ಗ್ರಾಮವೊಂದರಲ್ಲಿ ಜನಿಸಿದ ಮಲ್ಲಿಕಾರ್ಜುನ ಖರ್ಗೆ ಇದೀಗ ರಾಷ್ಟ್ರಮಟ್ಟದಲ್ಲಿ ತಮ್ಮದೇಯಾದ ಹೆಸರು ಮಾಡಿದ್ದಾರೆ. ರಾಜಕೀಯ ಹಾದಿಯಲ್ಲಿ ಕಲ್ಲು-ಮುಳ್ಳು ದಾಟಿಕೊಂಡು ವಿದ್ಯಾರ್ಥಿ ಒಕ್ಕೂಟದಿಂದ ಎಐಸಿಸಿ ಸ್ಥಾನದವರಗೆ ಬಂದು ನಿಂತಿದ್ದಾರೆ. ವಿದ್ಯಾರ್ಥಿ ಒಕ್ಕೂಟದಿಂದ ಎಐಸಿಸಿ ಸ್ಥಾನದವರಗೆ ಖರ್ಗೆ ಪಯಣ ಈ ಕೆಳಗಿನಂತಿದೆ ನೋಡಿ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಎನ್ನುವ ಗ್ರಾಮದಲ್ಲಿ ಜುಲೈ 21, 1942ರಲ್ಲಿ ಜನಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೀಗ ಎಂಬತ್ತು ವರ್ಷ. ಚಿಕ್ಕ ವಯಸ್ಸಿನಲ್ಲಿಯೇ ವರವಟ್ಟಿಯಲ್ಲಿದ್ದ ಅವರ ಮನೆಗೆ ಬೆಂಕಿ ಬಿದ್ದಿದ್ದರಿಂದ ಕುಟುಂಬದ ಅನೇಕರನ್ನು ಕಳೆದುಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ತಂದೆಯ ಜೊತೆಗೆ ಕಲಬುರಗಿಗೆ ಬಂದವರು.
ಪದವಿ ಓದುತ್ತಿದ್ದಾಗಲೇ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ನಂತರ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು. ಎಲ್ಎಲ್ ಬಿ ಪದವಿ ಪಡೆದಿರುವ ಮಲ್ಲಿಕಾರ್ಜುನ ಖರ್ಗೆ, ಕಲಬುರಗಿ ನಗರದಲ್ಲಿರುವ ಎಂ ಎಸ್ ಕೆ ಮಿಲ್ ನೌಕರರ ಕಾನೂನು ಸಲಹೆಗಾರರಾಗಿ, ಕಾರ್ಮಿಕ ಹಕ್ಕಗಳಿಗಾಗಿ ಹೋರಾಟ ನಡೆಸಿದ್ದರು. 1969 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದ ಮಲ್ಲಿಕಾರ್ಜುನ ಖರ್ಗೆ, ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
1972 ರಲ್ಲಿ ಅನಿರೀಕ್ಷಿತವಾಗಿ ಅಂದಿನ ಕಲಬುರಗಿ ಜಿಲ್ಲೆಯ ಗುರಮಠಕಲ್ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲ ಪ್ರಯತ್ನದಲ್ಲಿಯೇ ಶಾಸಕರಾಗಿ ಆಯ್ಕೆಯಾಗಿದ್ದರು. 1976 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಆಯ್ಕೆಯಾಗಿದ್ದರು. 2004 ರವರಗೆ ಗುರುಮಠಕಲ್ ಕ್ಷೇತ್ರದಿಂದ ಎಂಟು ಬಾರಿ ಸ್ಪರ್ಧಿಸಿ, ಎಂಟು ಬಾರಿ ಗೆಲವು ಸಾಧಿಸಿದ್ದ ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿ ಅನೇಕ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
2008 ರಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸಿ 9 ನೇ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದ್ದರು. 2009 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿ, ರೈಲ್ವೆ ಸಚಿವರಾಗಿ ಕೆಲಸ ಮಾಡಿದ್ದಾರೆ.
2014 ರಲ್ಲಿ ಎರಡನೇ ಬಾರಿಗೆ ಕೂಡಾ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಆದ್ರೆ 2018 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಮೊದಲ ಬಾರಿಗೆ ಮಲ್ಲಿಕಾರ್ಜುನ ಖರ್ಗೆ ಸೋಲನ್ನು ಅನುಭವಿಸಿದ್ದರು. ತಾನು ಸಾಕಷ್ಟು ಕೆಲಸ ಮಾಡಿದರೂ ಕೂಡಾ ಜನ ನನ್ನನ್ನು ಸೋಲಿಸಿದ್ದಾರೆ. ಇದು ನನ್ನ ಸೋಲಲ್ಲಾ, ನಾನು ನಂಬಿರುವ ಸಿದ್ದಾಂತಕ್ಕೆ ಆದ ಸೋಲು ಅಂತ ಖರ್ಗೆ ಅವರು ಆಗಾಗ ಹೇಳುತ್ತಿದ್ದರು.
ಇನ್ನು 2014 ರಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಸರ್ಕಾರದ ವಿರುದ್ದ ತಮ್ಮ ಮೊನಚಾದ ಮಾತುಗಳಿಂದ ತಿವಿದು, ಪ್ರತಿಪಕ್ಷದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದ್ದರು. ಇದೇ ಕಾರಣಕ್ಕೆ ಸೋನಿಯಾ ಗಾಂಧಿ ಅವರು, ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿಸಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ನೀಡಿದ್ದರು. ಪಕ್ಷ ನೀಡಿದ ಜವಾಬ್ದಾರಿಯನ್ನು ಶಿಸ್ತಿನಿಂದ ನಿಭಾಯಿಸುವುದು, ನಂಬಿರುವ ಸಿದ್ದಾಂತ ಬಿಟ್ಟು ನಡೆಯದೇ ಇರುವ ಮಲ್ಲಿಕಾರ್ಜುನ ಖರ್ಗೆ ಅವರ ಆಚಾರ, ವಿಚಾರಗಳಿಂದ ಇದೀಗ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದು ನಿಲ್ಲಿಸಿವೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:26 am, Fri, 21 July 23