ಲೋಕಸಭಾ ಚುನಾವಣೆ ವೇಳೆ ಹಲವು ಶಾಸಕರು ಕಾಂಗ್ರೆಸ್ ಸೇರ್ಪಡೆ; ರಾಜಕೀಯ ನಿಂತ ನೀರಲ್ಲ ಎಂದ ರಾಜಣ್ಣ

| Updated By: Rakesh Nayak Manchi

Updated on: Feb 11, 2024 | 12:44 PM

ಲೋಕಸಭಾ ಚುನಾವಣೆ ಸಮಯದಲ್ಲಿ ಕೆಲ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಕೆಎನ್ ರಾಜಣ್ಣ, ಕಾಂಗ್ರೆಸ್ ನಿಂದ ಹೋಗೋರಿಲ್ಲ ಎಂದು ನಾನು ಹೇಳಲ್ಲ. ಬೇರೆ ಪಕ್ಷದಿಂದ ಬರೋರು ಇಲ್ಲ ಎಂದು ಹೇಳಲ್ಲ. ರಾಜಕೀಯ ದೃಢೀಕರಣ ಅವರ ರಾಜಕೀಯ ಭವಿಷ್ಯದ ಆಧಾರದಲ್ಲಿ ಇರುತ್ತದೆ. ಇದು ಸರ್ವೆ ಸಾಮಾನ್ಯ ಎಂದರು.

ಲೋಕಸಭಾ ಚುನಾವಣೆ ವೇಳೆ ಹಲವು ಶಾಸಕರು ಕಾಂಗ್ರೆಸ್ ಸೇರ್ಪಡೆ; ರಾಜಕೀಯ ನಿಂತ ನೀರಲ್ಲ ಎಂದ ರಾಜಣ್ಣ
ಕೆಎನ್ ರಾಜಣ್ಣ
Follow us on

ಹಾಸನ, ಫೆ.11: ಲೋಕಸಭಾ ಚುನಾವಣೆ (Lok Sabha Elections) ಸಮಯದಲ್ಲಿ ಕೆಲ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಕೆಎನ್ ರಾಜಣ್ಣ (KN Rajanna), ಕಾಂಗ್ರೆಸ್ ಪಕ್ಷದಿಂದ ಹೋಗೋರಿಲ್ಲ ಎಂದು ನಾನು ಹೇಳುವುದಿಲ್ಲ. ಬೇರೆ ಪಕ್ಷದಿಂದ ಬರುವವರು ಇಲ್ಲ ಎಂದು ಹೇಳಲ್ಲ. ರಾಜಕೀಯ ದೃಢೀಕರಣ ಅವರ ರಾಜಕೀಯ ಭವಿಷ್ಯದ ಆಧಾರದಲ್ಲಿ ಇರುತ್ತದೆ. ಇದು ಸರ್ವೆ ಸಾಮಾನ್ಯ. ಈಗಲೇ ಅವರು ಬರುತ್ತಾರೆ ಇವರು ಬರುತ್ತಾರೆ ಎನ್ನಲು ಆಗಲ್ಲ ಎಂದರು.

ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದ ಕೆಂಪಣ್ಣ ಅವರು ಕಮಿಷನ್ ಆರೋಪ ಮಾಡಿದ ವಿಚಾರವಾಗಿ ಮಾತನಾಡಿದ ರಾಜಣ್ಣ, ಕಮಿಷನ್ ಯಾರು ಕೇಳುತ್ತಾ ಇದ್ದಾರೆ ಅಂತಾ ಅವರು ದೂರು ಕೊಡಬೇಕು ಅಲ್ವಾ? ಯಾವ ಅದಿಕಾರಿ ಎಷ್ಟು ಕೇಳುತ್ತಾರೆ ಎಂದು ಹೇಳಬೇಕಲ್ಲ. ಕೆಂಪಣ್ಣ ಬಗ್ಗೆ ಗೌರವ ಇದೆ ಸತ್ಯ ಹೇಳ್ತಾರೆ ಅಂತಾ ನಾನು ನಂಬಿಕೊಳ್ಳುತ್ತೇನೆ. ಆದರೆ ನಿರ್ದಿಷ್ಟವಾಗಿ ಹೇಳಬೇಕು ಅಲ್ವಾ ಎಂದರು.

ಇದನ್ನೂ ಓದಿ: ರಾಮಮಂದಿರಕ್ಕೂ ಮೊದಲು ವಾಲ್ಮೀಕಿ ಮಂದಿರ ಕಟ್ಟಬೇಕಿತ್ತು: ಸಚಿವ ಕೆಎನ್​ ರಾಜಣ್ಣ

ಮೂರು ಲಕ್ಷ ಅಧಿಕ ಅಧಿಕಾರಿಗಳು ಇದ್ದಾರೆ. ಯಾವ ಅಧಿಕಾರಿ ಯಾರ ಪರವಾಗಿ ಎಷ್ಟು ಕೇಳುತ್ತಾನೆ ಅಂತ ಹೇಳಬೇಕು ಅಲ್ವಾ? ಎಂದು ರಾಜಣ್ಣ ಪ್ರಶ್ನಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಂಪಣ್ಣ ಆರೋಪವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಂಡ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ, ಈಗ ಬಿಜೆಪಿಯವರು ಬಳಸಿಕೊಳ್ಳಲಿ ಬಿಡಿ. ಯಾರೂ ಸನ್ಯಾಸಿಗಳಲ್ಲ, ಎಲ್ಲರೂ ರಾಜಕೀಯ ಮಾಡುವವರೇ, ಅವರಿಗೆ ಯಾವ ವಿಚಾರ ಅನುಕೂಲ ಆಗುತ್ತೆ ಅದನ್ನು ಬಳಸಿಕೊಳ್ಳುತ್ತಾರೆ ಎಂದರು.

ನಾನು ಹೈಕಮಾಂಡ್ ಗುಲಾಮನಲ್ಲ

ಹೈಕಮಾಂಡ್​ಗೆ ರಾಜಣ್ಣ ಕೇರ್ ಮಾಡಲ್ಲ ಎಂಬ ಬಿ.ಶಿವರಾಮ್ ಹೇಳಿಕೆಗೆ ಗರಂ ಆದ ರಾಜಣ್ಣ, ಯಾರೋ ಮುಖಂಡರನ್ನು ಮೆಚ್ಚಿಸೋ ನಡವಳಿಕೆ ನನಗೆ ಬೇಕಿಲ್ಲ. ನನ್ನ ನಡವಳಿಕೆಯನ್ನು ಜನರು ಮೆಚ್ಚಬೇಕು. ಹೈಕಮಾಂಡ್​ಗೆ ಹೆದರಲ್ಲ ಅನ್ನೋದು ನನ್ನಿಷ್ಟ. ನಾನು ಯಾರಿಗೆ ಹೆದರಬೇಕೋ ಅವರಿಗೆ ಮಾತ್ರ ಹೆದರುತ್ತೇನೆ. ನಾನು ಹೈಕಮಾಂಡ್​ಗೆ ನಿಷ್ಠೆ ಹೊಂದಿದ್ದೇನೆ, ಆದರೆ ಗುಲಾಮನಲ್ಲ ಎಂದರು.

ದೇಶ ವಿಭಜನೆ ಹೇಳಿಕೆ ಕೊಡೋರನ್ನ ಗುಂಡಿಕ್ಕಿ ಹತ್ಯೆ ಮಾಡುವ ಕಾನೂನು ಜಾರಿಯಾಗಬೇಕೆಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ರಾಜಣ್ಣ, ಅವರು ನಾನು ಡಿಕೆ ಸುರೇಶ್ ಬಗ್ಗೆ ಆರೀತಿ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಅದೊಂದು ಮುಗಿದ ವಿಚಾರ ಎಂದರು.

ಮಾಜಿ ಸಚಿವರ ಕಾಂಗ್ರೆಸ್ ಹಿರಿಯ ನಾಯಕ ಬಿ ಶಿವರಾಮ್ ಅವರು ತಮ್ಮ ವಿರುದ್ಧ 40 ಪರ್ಸೆಂಟ್​ಗೂ ಅಧಿಕ ಕಮಿಷನ್ ಆರೋಪದ ಬಗ್ಗೆ ಮಾತನಾಡಿದ ರಾಜಣ್ಣ, ನಾನು ಯಾರ ಬಳಿಯಾದರು ಅರ್ಧ ಪೈಸೆ ಲಂಚ ಪಡೆದ ಆರೋಪ ಇದ್ದರೆ ಹೇಳಲಿ. ಆರೋಪ ಮಾಡುವವರು ಯಾವುದಾದರು ದೇವಾಲಯದಲ್ಲಿ ಪ್ರಮಾಣ ಮಾಡಲಿ, ನಾನು ರಾಜಕೀಯವನ್ನೇ ಬಿಟ್ಟು ಹೋಗುತ್ತೇನೆ ಎಂದು ಸವಾಲು ಹಾಕಿದರು. ಅಲ್ಲದೆ, ಎಲುಬಿಲ್ಲದ ನಾಲಿಗೆ ಅಂತಾ ಹೇಳುತ್ತಾರಲ್ಲ ಹಾಗೆ, ಅದಕ್ಕೆಲ್ಲ ಉತ್ತರ ಹೇಳಲ್ಲ. ನಾನು ಪ್ರಮಾಣಿಕತೆಯಲ್ಲಿ ಯಾರಿಗು ಕಡಿಮೆ ಇಲ್ಲ, ಆರೋಪ ಮಾಡುವವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಅಭ್ಯರ್ಥಿಗಳ ಆಯ್ಕೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ಮಾಡಿಕೊಳ್ಳುತ್ತಿದೆ. ಅಭ್ಯರ್ಥಿ ಯಾರು ಎಂದು ದೆಹಲಿ ಮಟ್ಟದಲ್ಲಿ ಚರ್ಚೆ ಆಗಿದೆ ಎಂದು ಹೇಳಿದ ರಾಜಣ್ಣ, ರಣದೀಪ್ ಸುರ್ಜೇವಾಲ ಇಂದು ಬೆಂಗಳೂರಿಗೆ ಬರುತ್ತಾರೆ. ಹಾಸನ ಜಿಲ್ಲೆಯಲ್ಲಿ ನಾಲ್ಕೈದು ಜನ ಆಕಾಂಕ್ಷಿಗಳು ಇದ್ದಾರೆ. ಅಂತಿಮವಾಗಿ ಗೆಲುವೇ ಮಾನದಂಡವಾಗಿರಲಿದೆ ಎಂದರು.

ತುಮಕೂರು ಅಭ್ಯರ್ಥಿ ಮುದ್ದು ಹನುಮೇಗೌಡ ಆಗಲಿದ್ದಾರೆ ಎಂಬ ಹೇಳಿಕೆ ವಿಚಾರವಾಗಿ ಮತ್ತೊಮ್ಮೆ ತಮ್ಮ ಹೇಳಿಕೆ ಸಮರ್ಥಿಸಿಕೊಂಡ ರಾಜಣ್ಣ, ನಾನು ಶೇ.99 ರಷ್ಟು ಅವರು ಅಭ್ಯರ್ಥಿ ಆಗಬಹುದು ಎಂದು ಹೇಳಿದ್ದೇನೆ. ಇನ್ನೂ ಒಂದು ಪರ್ಸೆಂಟ್ ಇದೆಯಲ್ಲ. ನಾನೇನು ಅಭ್ಯರ್ಥಿ ಅಗುತ್ತಾರೆ ಅಂತ ಹೇಳಿದ್ದೇನಾ? ಆಗಬಹುದು ಎಂದಷ್ಟೇ ಹೇಳಿದ್ದೇನೆ. ಅವರೇ ಅಭ್ಯರ್ಥಿ ಎಂದು ಹೇಳಲು ನಾನು ಹೈಕಮಾಂಡ್ ಅಲ್ಲ. ನನ್ನ ಹೈ ಕಮಾಂಡ್ ನನ್ನ ಕ್ಷೇತ್ರದ ಮತದಾರರು. ಹೈಕಮಾಂಡ್​ ಮಾತು ಯಾವಾಗ ಕೇಳಬೇಕೋ ಕೇಳುತ್ತೇನೆ ಅವರ ಮಾತು ದಿಕ್ಕರಿಸುವುದಿಲ್ಲ. ಆದರೆ ಅಂತಿಮವಾಗಿ ನಾನು ನಂಬುವುದು ನನ್ನ ಮತದಾರರನ್ನು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:30 pm, Sun, 11 February 24