ಬೆಂಗಳೂರು, ಆಗಸ್ಟ್ 03: ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ನೀವೇಶನ ಹಂಚಿಕೆ ಹಗರಣ (Muda Scam) ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಅವರ ಕುಟುಂಬ ಭಾಗಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕೂಡಲೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಆರಂಭಿಸಿವೆ. ಪಾದಯಾತ್ರೆ ಉದ್ಘಟನಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ (Preetham gowda) ಕಾಣಸಿಕೊಂಡಿಲ್ಲ. ಈ ಮೂಲಕ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರ ಷರತ್ತನ್ನು ಬಿಜೆಪಿ ಪಾಲಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಿನಾಮೆ ಆಗ್ರಹಿಸಿ ಬಿಜೆಪಿ, ಜೆಡಿಎಸ್ ನಾಯಕರು ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿದ್ದಾರೆ. ಮೈಸೂರು ಚಲೋ ಪಾದಯಾತ್ರೆ ಸಿದ್ಧತೆ ಸಮಯದಲ್ಲೇ ಅಪಸ್ವರ ಕೇಳಿಬಂದಿತ್ತು. ಜೆಡಿಎಸ್ ನಾಯಕರು ಪಾದಯಾತ್ರೆಗೆ ಬೆಂಬಲ ಸೂಚಿಸುವುದಿಲ್ಲ ಎಂದು ಹೇಳಿದ್ದರು.
ಆರಂಭದಲ್ಲಿ ರಾಜ್ಯದಲ್ಲಿ ಪ್ರವಾಹ ಪರಿಸ್ಥತಿ ಉಂಟಾಗಿದೆ, ಹೀಗಾಗಿ ಪಾದಯಾತ್ರೆ ನಡೆಸುವುದು ಬೇಡ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಸೇರಿದಂತೆ ಎಲ್ಲ ಜೆಡಿಎಸ್ ನಾಯಕರು ಪುನರ್ ಉಚ್ಚರಿಸಿದ್ದರು. ಆದರೆ ಬಿಜೆಪಿ ಇದನ್ನು ಕಿವಿಗೆ ಹಾಕಿಕೊಳ್ಳದೆ ತಯಾರಿಯನ್ನು ಜೋರಾಗಿಯೇ ನಡೆಸಿತ್ತು. ಪಾದಯಾತ್ರೆಗೆ ಪೂರ್ವ ಸಿದ್ಧತೆ ಸಭೆಗೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಆಹ್ವನಿಸಲಾಗಿತ್ತು. ಈ ಸಭೆಯಲ್ಲಿ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಕೂಡ ಭಾಗಿಯಾಗಿದ್ದರು. ಅಲ್ಲದೆ, ಪಾದಯಾತ್ರೆ ಕೂಡ ಪ್ರೀತಂ ಗೌಡ ನೇತೃತ್ವದಲ್ಲೇ ನಡೆಯಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಇದನ್ನೂ ಓದಿ: ಕಾವೇರಿಯಿಂದ ಮುಡಾ ವರೆಗೆ: ಕರ್ನಾಟಕದಲ್ಲಿ ನಡೆದ ಪಾದಯಾತ್ರೆಗಳ ಇಣುಕು ನೋಟ
ಪ್ರೀತಂ ಗೌಡ ನೇತೃತ್ವದಲ್ಲಿ ಪಾದಯಾತ್ರೆ ಮತ್ತು ಸಭೆಯಲ್ಲಿ ಭಾಗಿಯಾಗಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ನಿಗಿ ನಿಗಿ ಕೆಂಡದಂತಾಗಿದ್ದರು. ಬಿಜೆಪಿ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು.
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳ ಪೆನ್ಡ್ರೈವ್ ಅನ್ನು ಪ್ರೀತಂ ಗೌಡ ಅವರು ತಮ್ಮ ಬೆಂಬಲಿಗರ ಮೂಲಕ ಹಂಚಿದ್ದಾರೆ. ದೇವೇಗೌಡರ ಕುಟುಂಬಕ್ಕೆ ವಿಷ ಹಾಕಲು ಹೊರಟಿದ್ದವರನ್ನು ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ. ಮತ್ತು ಪಾದಯಾತ್ರೆ ಬಗ್ಗೆ ನಮಗೆ ಯಾವ ಮಾಹಿತಿ ನೀಡಲ್ಲ, ನಾವು ಪಾದಯಾತ್ರೆಗೆ ಬೆಂಬಲಿಸಲ್ಲ ಎಂದು ಬಹಿರಂಗವಾಗಿ ಹೇಳಿದ್ದರು.
ಪಾದಯಾತ್ರೆಗೆ ಆರಂಭದಲ್ಲೇ ವಿಘ್ನ ಬಂದಿದ್ದರಿದ್ದ, ಎಚ್ಚತ್ತ ಬಿಜೆಪಿ ಹೈಕಮಾಂಡ್ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಹೆಚ್ಡಿ ಕುಮಾರಸ್ವಾಮಿ ಅವರನ್ನು ದೆಹಲಿಗೆ ಕರೆಸಿಕೊಂಡು ರಾಜಿಸಂಧಾನ ಮಾಡಿದರು. ಈ ವೇಳೆ ಹೆಚ್ಡಿ ಕುಮಾರಸ್ವಾಮಿ ಹೈಕಮಾಂಡ್ ಮುಂದೆ ಪ್ರೀತಂ ಗೌಡ ಪಾದಯಾತ್ರೆಯಲ್ಲಿ ಭಾಗಿಯಾಗದಂತೆ ಷರತ್ತು ವಿಧಿಸಿದ್ದರು. ಅದರಂತೆ ಇದೀಗ ಮೈಸೂರು ಚಲೋ ಕಾರ್ಯಕ್ರಮದಲ್ಲಿ ಪ್ರೀತಂಗೌಡ ಭಾಗಿಯಾಗಲಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:43 pm, Sat, 3 August 24