ಕೆಂಪೇಗೌಡ ಜಯಂತಿಯಲ್ಲಿ ಡಿಕೆ ಶಿವಕುಮಾರ್-ಅಶ್ವತ್ಥ್ ನಾರಾಯಣ ಮುಖಾಮುಖಿ, ಪರಸ್ಪರ ಬೈದಾಡಿಕೊಳ್ಳದಂತೆ ಶ್ರೀಗಳಿಂದ ಕಿವಿಮಾತು
ರಾಜಕೀಯ ಬದ್ಧ ವೈರಿಗಳಾದ ಡಿಕೆ ಶಿವಕುಮಾರ್ ಹಾಗೂ ಡಾ ಅಶ್ವತ್ಥ್ ನಾರಾಯಣ ಅವರು ಕೆಂಪೇಗೌಡ ಜಯಂತಿಯಲ್ಲಿ ಮುಖಾಮುಖಿಯಾಗಿದ್ದು, ಈ ವೇಳೆ ಇಬ್ಬರು ನಾಯಕರಿಗೆ ನಿರ್ಮಲಾನಂದನಾಥ ಸ್ವಾಮೀಜಿ ಕಿವಿ ಮಾತೊಂದನ್ನು ಹೇಳಿದ್ದಾರೆ.
ಬೆಂಗಳೂರು: ರಾಜಕೀಯ ಬದ್ಧ ವೈರಿಗಳಾದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK SHivakumar) ಹಾಗೂ ಮಾಜಿ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ (Dr CN Ashwath Narayan) ಅವರು ಇಂದು (ಜೂನ್ 27) ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮುಖಾಮುಖಿಯಾದರು. ಬೆಂಗಳೂರಿನ(Bengaluru) ಸದಾಶಿವನಗರದ ರಮಣಮಹರ್ಷಿ ಉದ್ಯಾನವನದಲ್ಲಿ ನಡೆದ 514ನೇ ಕೆಂಪೇಗೌಡ ಜಯಂತಿಯಲ್ಲಿ ಮುಖಾಮುಖಿಯಾದ ಉಭಯ ನಾಯಕರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಉಪಸ್ಥಿತಿದ್ದು ಈ ವೇಳೆ ಪರಸ್ಪರ ರಾಜಕೀಯವಾಗಿ ಬೈದಾಡಿಕೊಳ್ಳದಂತೆ ಡಿಕೆ ಶಿವಕುಮಾರ್ ಹಾಗೂ ಅಶ್ವತ್ಥ್ ನಾರಾಯಣ ಅವರಿಗೆ ಕಿವಿಮಾತು ಹೇಳಿದರು.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಶ್ವತ್ಥ್ ನಾರಾಯಣ, ನಾನು ಯಾವುದೇ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿಲ್ಲ. ನಾಡಿಗೆ ಒಳಿತು ಮಾಡಬೇಕೆಂದು ರಾಜಕೀಯಕ್ಕೆ ಬಂದಿದ್ದೇವೆ. ಡಿ.ಕೆ.ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ವೈಮನಸ್ಸು ಇಲ್ಲ. ರಾಜಕೀಯದಲ್ಲಿ ಸುಮ್ಮನೆ ಇದ್ದರೆ ಆಗುತ್ತಾ. ಪ್ರೇಕ್ಷಕರು ಅಂತಾರೆ, ಅದಕ್ಕೆ ಏನು ಹೇಳಬೇಕೋ ಹೇಳಿದ್ದೇನೆ ಎಂದರು.
ರಾಮನಗರಕ್ಕೆ ಯಾವ ಸರ್ಕಾರ ಕೊಡದಷ್ಟು ಯೋಜನೆ ಕೊಟ್ಟಿದ್ದೇವೆ. ರಾಮನಗರ ನನ್ನ ಪೂರ್ವಿಕರ ಕರ್ಮಭೂಮಿ. ನನ್ನ ಹುಟ್ಟು ಹೆಸರು ಕೆಂಪೇಗೌಡ. ಮುಂದಿನ ದಿನಗಳಲ್ಲಿ ಎಲ್ಲಾ ಇತಿಹಾಸವೂ ಗೊತ್ತಾಗಲಿದೆ. ಕೆಂಪೇಗೌಡರು ಮಾಡಿದ 5% ಅಭಿವೃದ್ಧಿಯನ್ನ ಈ ಸರ್ಕಾರ ಮಾಡಲಿ. ನಾವು ರಾಮನಗರ ಅಭಿವೃದ್ಧಿ ಮಾಡಿದ್ದೇವೆ ಎಂದು ಮತ್ತೆ ಪರೋಕ್ಷವಾಗಿ ಡಿಕೆ ಬ್ರದರ್ಸ್ ವಿರುದ್ಧ ಕಿಡಿಕಾರಿದರು.
ಡಿಕೆ ಬ್ರದರ್ಸ್ ಹಾಗೂ ಅಶ್ವತ್ಥ್ ನಾರಾಯಣ ನಡುವೆ ರಾಜಕೀಯ ಗುದ್ದಾಟಗಳು ನಡೆದಿದ್ದವು. ಯಾರೋ ಅದು ಗಂಡಸು ಎಂದು ಪರೋಕ್ಷವಾಗಿ ಅಶ್ವತ್ಥ್ ನಾರಾಯಣ ಅವರು ಡಿಕೆ ಸುರೇಶ್ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಗುಡುಗಿದ್ದರು. ಅದಾಗಿನಿಂದ ರಾಮನಗರದ ಜಿಲ್ಲಾ ಉಸ್ತುವಾರಿಯಾಗಿದ್ದ ಅಶ್ವತ್ಥ್ ನಾರಾಯಣ ಮತ್ತು ಡಿಕೆ ಬ್ರದರ್ಸ್ ಮಧ್ಯೆ ಮುಸುಕಿನ ಗುದ್ದಾಟ, ಪರಸ್ಪರ ಬಹಿರಂಗ ಆರೋಪ-ಪ್ರತ್ಯಾರೋಪಗಳು ನಡೆಯುಲ್ಲೇ ಇದ್ದಾವೆ. ಹೀಗಾಗಿ ಉಭಯ ನಾಯಕರಲ್ಲಿ ವೈರತ್ವ ಬೆಳೆದಿತ್ತು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ